ADVERTISEMENT

ನೀಟ್‌ನಂತೆ ಒಂದೇ ದಿನ ಸಿಇಟಿ: ಕೆಇಎ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 2:43 IST
Last Updated 30 ಜನವರಿ 2020, 2:43 IST
ಸಿಇಟಿ ಪರೀಕ್ಷೆಯ ಬರೆಯುತ್ತಿರುವ ವಿದ್ಯಾರ್ಥಿಗಳು (ಸಾಂದರ್ಭಿಕ ಚಿತ್ರ)
ಸಿಇಟಿ ಪರೀಕ್ಷೆಯ ಬರೆಯುತ್ತಿರುವ ವಿದ್ಯಾರ್ಥಿಗಳು (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಎಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಮುಂದಿನ ವರ್ಷದಿಂದ (2021) ನೀಟ್‌ ಮಾದರಿಯಲ್ಲಿ ಒಂದೇ ದಿನ ಆಫ್‌ಲೈನ್‌ನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದೆ.

ಬುಧವಾರ ಇಲ್ಲಿ ನಡೆದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಆಡಳಿತ ಮಂಡಳಿ ಸಭೆಯ ಬಳಿಕ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಈ ವಿಷಯ ತಿಳಿಸಿದರು.

‘ನೀಟ್‌ ಪರೀಕ್ಷೆಯನ್ನು ಆಫ್‌ಲೈನ್‌ನಲ್ಲಿ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಹೀಗಾಗಿ ಸಿಇಟಿಯನ್ನು ಸಹ ಆಫ್‌ಲೈನ್‌ನಲ್ಲೇ ನಡೆಸುವ ತೀರ್ಮಾನ ಮಾಡಿದ್ದೇವೆ. ಇದೀಗ ನಡೆಯುತ್ತಿರುವ ಎರಡು ದಿನಗಳ ಪರೀಕ್ಷೆ ಬದಲಿಗೆ ಒಂದೇ ದಿನ ಪರೀಕ್ಷೆ ನಡೆಯಲಿದೆ’ ಎಂದರು.

ಗಡಿನಾಡು ಗುರುತು: ಹೊರನಾಡು ಕನ್ನಡಿಗರಿಗೆ ಎದುರಾಗುವ ಕೆಲವು ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಹೊಸದಾಗಿ ಗಡಿನಾಡನ್ನು ಗುರುತಿಸಲಾಗುವುದು. ಮೆಹಬೂಬ್‌ನಗರ, ಕಾಸರಗೋಡಿನಂತಹ ಕಡೆಗಳಲ್ಲಿನಕೆಲವು ಹೋಬಳಿ, ಗ್ರಾಮ ಪಂಚಾಯಿತಿಗಳ ಗುರುತು ನಡೆಯಲಿದೆ ಎಂದರು.

‘ಕೆಇಎ ವತಿಯಿಂದ ಹಲವು ಇಲಾಖೆಗಳಿಗೆ ಏಕ ಕಾಲದಲ್ಲಿ ಪರೀಕ್ಷೆ, ಆಯ್ಕೆ ನಡೆಸುವ ಸಲುವಾಗಿ ಕಾಲೇಜು ಶಿಕ್ಷಣ ಇಲಾಖೆಯ ಆವರಣದಲ್ಲಿ ಪ್ರತ್ಯೇಕ ಸ್ಥಳಾವಕಾಶ ನೀಡಲಾಗುತ್ತದೆ. ಈಗಿರುವ ಸಿಇಟಿ ಕಟ್ಟಡದಲ್ಲೂ ₹ 4.5 ಕೋಟಿ ವೆಚ್ಚದಲ್ಲಿ ಇನ್ನೊಂದು ಮಹಡಿ ನಿರ್ಮಿಸಲಾಗುವುದು. ವಿಳಂಬವಿಲ್ಲದೆ, ಫಟಾಫಟ್‌ ಕೆಲಸ ಆಗಬೇಕು ಎಂಬುದೇ ಇದರ ಉದ್ದೇಶ’ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

‘ಕಾಮೆಡ್‌–ಕೆ ಜತೆಗೆ ಸೀಟು ಹಂಚಿಕೆ ವಿಚಾರ ಚರ್ಚಿಸಲಾಗಿಲ್ಲ, ಶುಲ್ಕ ಹೆಚ್ಚಳ ವಿಷಯವನ್ನು ಸಹ ಇನ್ನಷ್ಟೇ ಪರಿಶೀಲಿಸಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.