ADVERTISEMENT

ಸಂದರ್ಶನ | ಪಕ್ಷದ ಜವಾಬ್ದಾರಿ ನಿಭಾಯಿಸಲು ಸಿದ್ಧ: ನಿಖಿಲ್‌ ಕುಮಾರಸ್ವಾಮಿ

ವಿಡಿಯೊ

ಗುರು ಪಿ.ಎಸ್‌
Published 9 ಜೂನ್ 2019, 1:16 IST
Last Updated 9 ಜೂನ್ 2019, 1:16 IST
ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ   

ಬೆಂಗಳೂರು: ‘ವರಿಷ್ಠರು ಹಾಗೂ ಕಾರ್ಯಕರ್ತರು ಬಯಸಿದರೆ ಯುವ ಘಟಕದ ಅಧ್ಯಕ್ಷ ಸ್ಥಾನವೂ ಸೇರಿದಂತೆ ಪಕ್ಷ ವಹಿಸುವ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಲು ಸಿದ್ಧ’ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಚುನಾವಣೆಯ ಸೋಲಿನ ಕಹಿ ಮರೆತು ಪಕ್ಷ ಸಂಘಟನೆಯತ್ತ ಗಮನ ಕೇಂದ್ರೀಕರಿಸಿರುವ ಯುವ ಮುಖಂಡ ಹಾಗೂ ಮುಖ್ಯಮಂತ್ರಿ ಪುತ್ರ ನಿಖಿಲ್‌, ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ವಿವರ ಇಲ್ಲಿದೆ.

l ಪಕ್ಷದ ಯುವ ಘಟಕದ ಅಧ್ಯಕ್ಷರಾಗುತ್ತೀರಿ ಎಂಬ ಮಾತಿದೆ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನವೂ ಸದ್ಯ ಖಾಲಿ ಇದೆ. ಇವೆರಡಲ್ಲಿ ನಿಮ್ಮ ಆಯ್ಕೆ ಯಾವುದು?

ADVERTISEMENT

ಪ್ರಜ್ವಲ್‌ ರೇವಣ್ಣ ಅಥವಾ ನಿಖಿಲ್‌ ಅವರೇ ಯುವ ಘಟಕದ ಅಧ್ಯಕ್ಷರಾಗಬೇಕು ಅಂತೇನೂ ಇಲ್ಲ. ಅದೊಂದು ದೊಡ್ಡ ಜವಾಬ್ದಾರಿ. ಯಾರು ಅರ್ಹರಿದ್ದಾರೋ ಅವರಿಗೆ ಆ ಸ್ಥಾನ ದೊರಕಬೇಕು ಎಂಬುದು ನನ್ನ ಭಾವನೆ. ವರಿಷ್ಠರು ಮತ್ತು ಕಾರ್ಯಕರ್ತರು ಬಯಸಿದರೆ ಹೊಸ ಜವಾಬ್ದಾರಿ ಹೊರಲುಸಿದ್ಧ.

l ದೇವೇಗೌಡರ ಕುಟುಂಬದಲ್ಲಿ ಉತ್ತರಾಧಿಕಾರಕ್ಕಾಗಿ ಪೈಪೋಟಿ ಇದೆ. ಇದೇ ಕಾರಣಕ್ಕೆ, ಪ್ರಜ್ವಲ್‌ ಹಾಸನದಲ್ಲಿ
ಸ್ಪರ್ಧಿಸುತ್ತಿದ್ದಂತೆ, ನಿಖಿಲ್‌ ಮಂಡ್ಯದಲ್ಲಿ ಕಣಕ್ಕಿಳಿದರು ಎಂಬ ಮಾತಿದೆಯಲ್ಲ?

ತುಂಬಾ ಒಳ್ಳೆಯ ಪ್ರಶ್ನೆ. ರಾಜಕಾರಣದ ಹುಚ್ಚು ಹಿಡಿಸಿಕೊಂಡು, ಅದರಲ್ಲಿಯೂ ನನ್ನ ತಮ್ಮನ ಮೇಲೆ ಪೈಪೋಟಿ ಮಾಡಿಕೊಂಡು ರಾಜಕೀಯಕ್ಕೆ ಬರುವಂತಹ ಪರಿಸ್ಥಿತಿ ಸೃಷ್ಟಿಯಾಗಿಲ್ಲ. ನಾನು ಸಂಸದ ಆಗಲೇಬೇಕು ಎಂದು ತೀರ್ಮಾನ ಮಾಡಿಬಿಟ್ಟಿದ್ದಿದ್ದರೆ ಮೂರು–
ನಾಲ್ಕು ತಿಂಗಳ ಹಿಂದೆ ನಡೆದ ಉಪಚುನಾವಣೆ ವೇಳೆಯೇ ಕಣಕ್ಕೆ ಇಳಿಯುತ್ತಿದ್ದೆ. ಕಾರ್ಯಕರ್ತರು ಮತ್ತು ಶಾಸಕರ ಒತ್ತಡವಿದ್ದರೂ ಆಗ ಸ್ಪರ್ಧಿಸಲಿಲ್ಲ.

l ದೇವೇಗೌಡರ ಸೋಲಿಗೆ ಪರೋಕ್ಷವಾಗಿ ಮೊಮ್ಮಕ್ಕಳೇ ಕಾರಣವಂತೆ?

ತುಮಕೂರಿನಲ್ಲಿ ದೇವೇಗೌಡರು ಮತ್ತು ಹಾಸನದಲ್ಲಿ ಪ್ರಜ್ವಲ್‌ ಸ್ಪರ್ಧಿಸುವುದು ಪಕ್ಷದ ವರಿಷ್ಠರ ತೀರ್ಮಾನವಾಗಿತ್ತು. ದೇವೇಗೌಡರು, ರೇವಣ್ಣ ಅವರಂತೆ ಪ್ರಜ್ವಲ್‌ ಕೂಡ ಹಾಸನದ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂಬ ವಿಶ್ವಾಸದಲ್ಲಿ ವರಿಷ್ಠರು ನಿರ್ಧಾರ ಕೈಗೊಂಡಿದ್ದರು. ದೇವೇಗೌಡರು ಸೋತಿರುವುದು ತುಂಬಾನೋವು ತಂದಿದೆ. ಅವರ ಮಾರ್ಗದರ್ಶನ, ಸೇವೆ ಪಕ್ಷಕ್ಕೆ ಮತ್ತು ದೇಶಕ್ಕೆ ಅಗತ್ಯವಿದೆ. ಮುಂದಿನ ಚುನಾವಣೆಗಳಲ್ಲಿ ಅವರು ಸ್ಪರ್ಧಿಸಿದರೂ ಆಶ್ಚರ್ಯವಿಲ್ಲ.

l ಯಾವುದೇ ಸಂದರ್ಭದಲ್ಲಿ ಚುನಾವಣೆ ಬರಬಹುದು ಎಂದಿದ್ದರ ಅರ್ಥ?

ಚಿಕ್ಕಬಳ್ಳಾಪುರದಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡುವಾಗ ಹೇಳಿದ ಮಾತದು. ಕಾರ್ಯಕರ್ತರಲ್ಲಿ ಉತ್ಸಾಹ ತುಂಬಬೇಕು ಎಂಬ ಉದ್ದೇಶದಿಂದ ಅದನ್ನು ಹೇಳಿದ್ದೆ. ಮುಂದಿನ ನಾಲ್ಕು ವರ್ಷವೂ ಸರ್ಕಾರ ಸ್ಥಿರವಾಗಿರುತ್ತದೆ. ಅದಕ್ಕೂ ಮುನ್ನ ಚುನಾವಣೆ ಬಂದರೆ ಸಿದ್ಧವಾಗಿರಿ ಎಂಬರ್ಥದಲ್ಲಿ ಆ ಮಾತು ಹೇಳಿದ್ದೆ. ಅದಕ್ಕೆ ಬೇರೆ ಅರ್ಥ ಬೇಡ.

l ಮಧ್ಯಂತರ ಚುನಾವಣೆ ಬಂದರೆ ಮಂಡ್ಯದ ಯಾವ ಕ್ಷೇತ್ರದಲ್ಲಿ ನಿಮ್ಮ ಸ್ಪರ್ಧೆ?

ಅದನ್ನು ತೀರ್ಮಾನಿಸಲು ನಾನು ಯಾರು. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಕೂಡ ನನ್ನ ಇಚ್ಛೆ ಆಗಿರಲಿಲ್ಲ. ಮುಂದಿನ ದಿನ
ಗಳಲ್ಲಿ ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಜನ ಒತ್ತಾಯ ಮಾಡುತ್ತಾರೋ, ಆ ಕ್ಷೇತ್ರದಿಂದ ಸ್ಪರ್ಧಿಸು
ತ್ತೇನೆ. ಜನಾಭಿಪ್ರಾಯದ ಮುಂದೆ ನಮ್ಮದೇನೂ ಇಲ್ಲ.

l ಮಂಡ್ಯ ಜಿಲ್ಲೆಗೆ ಘೋಷಿಸಿದ್ದ ₹8 ಸಾವಿರ ಕೋಟಿ ಅನುದಾನವನ್ನು, ನಿಮ್ಮ ಸೋಲಿನ ನಂತರ ಮುಖ್ಯಮಂತ್ರಿ ತಡೆಹಿಡಿದಿದ್ದಾರಂತೆ?

ಸಾಧ್ಯವೇ ಇಲ್ಲ. ₹8,761 ಕೋಟಿ ಅನುದಾನವನ್ನು ಈ ವರ್ಷದ ಬಜೆಟ್‌ನಲ್ಲಿ ಕೊಟ್ಟಿದೆ. ಅದನ್ನು ಅನುಷ್ಠಾನಕ್ಕೆ ತರಲು ನಾನೇ ನಿಂತು ಕೆಲಸ ಮಾಡಿಸುತ್ತೇನೆ.

ನಿಖಿಲ್‌ ಎಲ್ಲಿದ್ದೀಯಪ್ಪ’ ಎಂದವರಿಗೆ ತಿರುಗೇಟು

‘ಜಾಗ್ವಾರ್‌’ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಂದರ್ಭದಲ್ಲಿ ನಮ್ಮ ತಂದೆ ಹೇಳಿದ ಮಾತದು. ಮಂಡ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಆ ಕಾರ್ಯಕ್ರಮದಲ್ಲಿ ನಾನು ಚೆಕ್‌ ವಿತರಿಸಿದೆ. ಅದನ್ನೂ ಟ್ರೋಲ್‌ ಮಾಡಬಹುದಿತ್ತಲ್ವ?. ಆದರೆ,ಈಗಲೂ ನಿಖಿಲ್‌ ಎಲ್ಲಿದ್ದೀಯಪ್ಪ ಎಂದು ಕೇಳುವವರಿಗೆ, ‘ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈ ನಿಖಿಲ್‌ ಪ್ರವಾಸ ಮಾಡುತ್ತಿರುತ್ತಾನೆ’ ಎಂದು ಹೇಳಲು ಬಯಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.