ADVERTISEMENT

ಗಿಡ ಬೆಳವಣಿಗೆ ನಿಗಾಕ್ಕೆ ‘ಅರ್ಬರ್‌ ಟ್ಯಾಗ್‌’

ಸಾಮಾಜಿಕ ಅರಣ್ಯ ವಿಭಾಗದ ತಂತ್ರಜ್ಞಾನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 20:00 IST
Last Updated 15 ಜೂನ್ 2019, 20:00 IST
ಅರ್ಬರ್‌ ಟ್ಯಾಗ್‌
ಅರ್ಬರ್‌ ಟ್ಯಾಗ್‌   

ಚಿಕ್ಕಮಗಳೂರು: ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ (ಕೆಎಪಿವೈ– ಕಾಪಿ) ರೈತರಿಗೆ ವಿತರಿಸಿದ ಗಿಡಗಳ ಬೆಳವಣಿಗೆ ಮೌಲ್ಯಮಾಪನ ನಿಟ್ಟಿನಲ್ಲಿ ‘ಅರ್ಬರ್‌ ಟ್ಯಾಗ್‌’ (ಜಿಯೊ ಟ್ಯಾಗ್) ಅಳವಡಿಕೆಯನ್ನು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ಈಗಾಗಲೇ ಎಂಟು ರೈತರ 5,200 ಗಿಡಗಳಿಗೆ ಟ್ಯಾಗ್ ಅಳವಡಿಸಲಾಗಿದೆ.

ಕೃಷಿ ಜೊತೆಯಲ್ಲಿ ಅರಣ್ಯ ಬೆಳೆಸುವುದಕ್ಕೆ ರೈತರನ್ನು ಪ್ರೋತ್ಸಾಹಿಸಲು ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಕೆಎಪಿವೈ ಅಡಿ ರೈತರಿಗೆ ಗಿಡಗಳನ್ನು ನೀಡಲಾಗುತ್ತದೆ. ಈ ಗಿಡಗಳನ್ನು ಪೋಷಣೆ ಮಾಡಲಾಗಿದೆಯೇ ಇಲ್ಲವೇ, ಅವುಗಳ ಬೆಳವಣಿಗೆ ಸ್ಥಿತಿಗತಿ ಬಗ್ಗೆ ನಿಗಾವಹಿಸಲು ‘ಅರ್ಬರ್‌ ಟ್ಯಾಗ್‌’ ಪೂರಕವಾಗಿದೆ.

‘ಗಿಡಕ್ಕೆ ಟ್ಯಾಗ್‌ ಅಳವಡಿಸಿ ಗಿಡ, ಫಲಾನುಭವಿಯ ಪೂರ್ಣ ವಿವರವನ್ನು ಜಿಯೋ ಟ್ಯಾಗ್‌ಗೆ ಸಂಬಂಧಿಸಿದ ಮೊಬೈಲ್‌ ಆ್ಯ‍ಪ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ. ಯಾವ ಗಿಡ, ನೆಟ್ಟ ವರ್ಷ, ರೈತನ ಹೆಸರು, ಊರು ಮೊದಲಾದ ಮಾಹಿತಿ ಇರುತ್ತದೆ. ಅರಣ್ಯ ಸಿಬ್ಬಂದಿ ಮೊಬೈಲ್‌ ಫೋನ್‌ನಲ್ಲಿನ ಆ್ಯಪ್‌ ಸಕ್ರಿಯಗೊಳಿಸಿ ಗಿಡದ ಬಳಿ ಮೊಬೈಲ್‌ ಫೋನ್‌ ಹಿಡಿದರೆ ಬೀಪ್‌ ಶಬ್ದ ಕೇಳುತ್ತದೆ’ ಎಂದು ಐಎಫ್‌ಎಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಟ್ಯಾಗ್‌ ಅಳವಡಿಸಿರುವ ಗಿಡ ಇಲ್ಲದಿದ್ದರೂ ಮಾಹಿತಿ ದಾಖಲಾಗುತ್ತದೆ. ಮೂರು ತಿಂಗಳಿಗೊಮ್ಮೆ ಪರಿಶೀಲನೆ, ದಾಖಲೆ ಪ್ರಕ್ರಿಯೆ ನಡೆಯುತ್ತದೆ. ಈ ತಂತ್ರಜ್ಞಾನದ ಮೂಲಕ ಜಮೀನಿನಲ್ಲಿ ಎಷ್ಟು ಗಿಡಗಳಿವೆ ಎಂಬ ನಿಖರ ಮಾಹಿತಿ ಅಧಿಕಾರಿಗಳಿಗೆ ಕಚೇರಿಯಲ್ಲೇ ಆನ್‌ಲೈನ್‌ನಲ್ಲಿ ಲಭ್ಯವಾಗುತ್ತದೆ’ ಎಂದು ತಿಳಿಸಿದರು.

‘ಕೆಎಪಿವೈನಡಿ ಗಿಡ ಬೆಳೆಸುವ ರೈತರಿಗೆ ಮೂರು ವರ್ಷದವರೆಗೆ ಪೋತ್ಸಾಹಧನ ನೀಡಲಾಗುತ್ತದೆ. ಪ್ರತಿ ಗಿಡಕ್ಕೆ ₹ 30 ಮೊದಲ ಎರಡು ವರ್ಷ ಹಾಗೂ ಮೂರನೇ ವರ್ಷ ₹ 40 ನೀಡಲಾಗುತ್ತದೆ. ನೇರವಾಗಿ ರೈತನ ಖಾತೆಗೆ ಜಮೆ ಮಾಡಲಾಗುತ್ತದೆ. ಟ್ಯಾಗ್‌ ಅಳವಡಿಕೆಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ತಿಳಿಸಿದರು.

‘ಜನವರಿಯಲ್ಲಿ ‘ಅರ್ಬರ್‌ ಟ್ಯಾಗ್‌’ ಅಳವಡಿಸಲಾಗಿದೆ. ಒಂದೆರಡು ವರ್ಷಗಳ ಗಿಡಗಳಿಗೆ ಅಳವಡಿಸಲಾಗಿದೆ. ಮೊದಲನೇ ಅವಧಿ (ಮೂರು ತಿಂಗಳು) ಪರಿಶೀಲನೆ ಮುಗಿದಿದೆ. ಎರಡನೇ ಅವಧಿ ಪ್ರಕ್ರಿಯೆ ನಡೆಯಬೇಕಿದೆ. ಇಲ್ಲಿನ ಯಶಸ್ಸು ಆಧರಿಸಿ ಇತರ ಕಡೆಗಳಿಗೂ ವಿಸ್ತರಿಸಲು ಇಲಾಖೆ ಚಿಂತನೆ ನಡೆಸಿದೆ’ ಎಂದರು.

ಸಿಲ್ವರ್‌, ನೇರಳೆ, ಸಾಗುವಾನಿ, ಹಲಸು, ಹೆಬ್ಬೇವು ಗಿಡಗಳನ್ನು ವಿತರಿಸಲಾಗಿದೆ. ತರೀಕೆರೆ ತಾಲ್ಲೂಕಿನ ಯಲಿಗೆರೆಯ ಡಿ.ಎಸ್‌. ದಯಾನಂದ, ಚಿಕ್ಕಮಗಳೂರು ತಾಲ್ಲೂಕಿನ ಕಳಸಾಪುರದ ಸದಾನಂದ ಗೌಡ, ಮತ್ತಾವರದ ದಯಾನಂದ, ಮಲ್ಲಾಪುರದ ಮಲ್ಲಮ್ಮ, ಹಟ್ಟಿಹಳ್ಳಿಯ ಸುಚಿತ್ರಾ, ಕುರುವಂಗಿಯ ರವಿಕುಮಾರ ಮತ್ತು ಆನಂದಶೆಟ್ಟಿ, ಕಡೂರು ತಾಲ್ಲೂಕಿನ ಕೊರಚರಹಟ್ಟಿಯ ಸೋಮೇಂದ್ರಪ್ಪ ಅವರ ಹೊಲಗಳಲ್ಲಿನ ಗಿಡಗಳಿಗೆ ಟ್ಯಾಗ್‌ ಅಳವಡಿಸಲಾಗಿದೆ.

***

ಕೆಎಪಿವೈನಡಿ ಜಮೀನಿನಲ್ಲಿ ಬೆಳೆಸಿರುವ 500 ಸಿಲ್ವರ್‌ ಗಿಡಗಳಿಗೆ ಟ್ಯಾಗ್‌ ಅಳವಡಿಸಿದ್ದಾರೆ. ಪ್ರೋತ್ಸಾಹಧನವನ್ನೂ ಖಾತೆಗೆ ಪಾವತಿಸಿದ್ದಾರೆ.

- ಸದಾನಂದಗೌಡ ರೈತ, ಕಳಾಸಪುರ, ಚಿಕ್ಕಮಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.