ADVERTISEMENT

ಉಡುಪಿ | ಕೋವಿಡ್ ಸೋಂಕಿಗೆ ಆತ್ಮವಿಶ್ವಾಸವೇ ಮದ್ದು

ಸೋಂಕಿನ ವಿರುದ್ಧ ಹೋರಾಡಿ ಗುಣಮುಖನಾದ ಜಿಲ್ಲೆಯ ಮೊದಲ ವ್ಯಕ್ತಿಯ ಅಭಿಪ್ರಾಯ

ಬಾಲಚಂದ್ರ ಎಚ್.
Published 22 ಏಪ್ರಿಲ್ 2020, 19:30 IST
Last Updated 22 ಏಪ್ರಿಲ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ‘ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಔಷಧಕ್ಕಿಂತ ಮಾನಸಿಕ ಸ್ಥೈರ್ಯ ಬಹಳ ಮುಖ್ಯ. ಸೋಂಕು ತಗುಲಿ ಮಾನಸಿಕವಾಗಿ ಕುಗ್ಗಿಹೋಗಿದ್ದ ನನಗೆ ವೈದ್ಯರು ಹಾಗೂ ನರ್ಸ್‌ಗಳು ಔಷಧಿಗಿಂತ ಹೆಚ್ಚಾಗಿ ಕಾಳಜಿ, ಪ್ರೀತಿ ತೋರಿದರು. ಬದುಕಿನಲ್ಲಿ ಜೀವನೋತ್ಸಾಹ ತುಂಬಿದರು. ಪರಿಣಾಮ, ನಾನಿಂದು ಕೋವಿಡ್‌ ಸೋಂಕಿನ ವಿರುದ್ಧ ಹೋರಾಡಿ ಗೆದ್ದಿದ್ದೇನೆ..

ಹೀಗೆ, ಕೋವಿಡ್‌–19ಗೆ ತುತ್ತಾಗಿ ಗುಣಮುಖನಾದ ಜಿಲ್ಲೆಯ ಮೊದಲ ಸೋಂಕಿತ ವ್ಯಕ್ತಿ ‘ಪ್ರಜಾವಾಣಿ’ ಜತೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಆಸ್ಪತ್ರೆಯಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದರು.

ಸೋಂಕಿನಿಂದ ಗುಣಮುಖರಾಗುವವರೆಗೆ...:‘ದುಬೈನಿಂದ ಮರಳಿದ ಬಳಿಕ ಮಾರ್ಚ್‌ 23ರಂದು ಜ್ವರ ಕಾಣಿಸಿಕೊಂಡಿತು. ತಕ್ಷಣ ಸ್ವಂತ ವಾಹನದಲ್ಲಿ ಜಿಲ್ಲಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆಗೆ ದಾಖಲಾದೆ. 25ರಂದು ಕಫದ ಮಾದರಿ ಪರೀಕ್ಷೆಯಲ್ಲಿ ಕೋವಿಡ್‌ ಸೋಂಕು ಇರುವುದು ದೃಢಪಟ್ಟಿತು. ಸಹಜವಾಗಿ ಮಾನಸಿಕ ತೊಳಲಾಟಕ್ಕೆ ಸಿಲುಕಿದೆ.

ADVERTISEMENT

ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ಆರಂಭವಾಯಿತು. ಮಂದೇನು ಎಂದು ಯೋಚಿಸುತ್ತಿರುವಾಗಲೇ ಜಿಲ್ಲಾ ಆಸ್ಪತ್ರೆಯ ವೈದ್ಯರು, ನರ್ಸ್‌ಗಳು ಮನಸ್ಸಿನಲ್ಲಿದ್ದ ಆತಂಕವನ್ನು ನಿವಾರಿಸಿದರು. ಸಮಯಕ್ಕೆ ಸರಿಯಾಗಿ ಊಟ ಮಾಡಿ, ಯೋಗ, ಧ್ಯಾನ ಮಾಡಿ, ಬೇಸರವಾದರೆ ಗೆಳೆಯರು, ಸಂಬಂಧಿಕರ ಜತೆ ಮಾತನಾಡಿ ಎಂದು ಆತ್ಮೀಯವಾಗಿ ನಡೆದುಕೊಂಡರು. ಚಿಕಿತ್ಸೆಯ ಮೊದಲ ದಿನವೇ ಆತಂಕವೆಲ್ಲ ದೂರವಾಗಿ ಮನಸ್ಸು ನಿರಾಳವಾಯಿತು.

ಮಾರ್ಚ್‌ 25ರಂದು ಕೆಎಂಸಿ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಯಿತು. ಬಳಿಕ ಏ.1ರಂದು ಡಾ.ಟಿಎಂಎ ಪೈ ಆಸ್ಪತ್ರೆಗೆ ಕರೆತಂದರು. ಅಲ್ಲಿಯ ವೈದ್ಯರು, ಸಿಬ್ಬಂದಿ ಕೂಡ ಸೋಂಕು ಹರಡುವ ಅಪಾಯವನ್ನು ಲೆಕ್ಕಿಸದೆ ಜೀವವನ್ನು ಪಣಕ್ಕಿಟ್ಟು ಚಿಕಿತ್ಸೆ ನೀಡುತ್ತಿದ್ದಾಗ ಕಣ್ಣು ತುಂಬಿ ಬರುತ್ತಿತ್ತು. ಪಿಪಿಇ ಸೂಟ್‌ ಧರಿಸಿದಾಗ ಆಗುತ್ತಿದ್ದ ಕಿರಿಕಿರಿಯ ನಡುವೆಯೂ ಒಮ್ಮೆಯೂ ಒರಟಾಗಿ ನಡೆದುಕೊಳ್ಳಲಿಲ್ಲ ಎಂದು ವೈದ್ಯರ, ದಾದಿಯರ ಶ್ರಮಕ್ಕೆ ಹ್ಯಾಟ್ಸ್‌ ಆಫ್‌ ಹೇಳಿದರು.

ಚಿಕಿತ್ಸಾ ಕ್ರಮ ಹೇಗಿತ್ತು:ಕೋವಿಡ್‌ ಸೋಂಕಿಗೆ ತುತ್ತಾದ ಎಲ್ಲರಿಗೂ ಔಷಧ ಕೊಡುವುದಿಲ್ಲ. ವ್ಯಕ್ತಿಯ ದೇಹಸ್ಥಿತಿ ಹಾಗೂ ರೋಗ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ನನ‌ಗೆ ಸೋಂಕಿನ ಲಕ್ಷಣಗಳು ಒಂದೇ ದಿನದಲ್ಲಿ ಗುಣವಾಗಿದ್ದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ಅನುಕೂಲವಾಗುವಂತೆ ಮೂರು ಹೊತ್ತು ಪೌಷ್ಟಿಕಾಂಶ ಯುಕ್ತ ಊಟ, ಹಣ್ಣುಗಳು, ಜ್ಯೂಸ್‌ ಕೊಡಲಾಗುತ್ತಿತ್ತು. ನೀರು ಹೆಚ್ಚಾಗಿ ಕುಡಿಯುವಂತೆ ಸಲಹೆ ನೀಡುತ್ತಿದ್ದರು. ಡಿಸ್‌ಚಾರ್ಜ್ ಆಗುವವರೆಗೂ ಇದೇ ಕ್ರಮವಿತ್ತು ಎಂದು ಚಿಕಿತ್ಸಾ ವಿಧಾನವನ್ನು ವಿವರಿಸಿದರು.

ಈಗ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಯಲ್ಲಿದ್ದೇನೆ. 41 ದಿನ ಹೊರಗೆ ಹೋಗದಂತೆ ವೈದ್ಯರು ಸೂಚನೆ ನೀಡಿದ್ದು, ಪಾಲಿಸುತ್ತಿದ್ದೇನೆ. ಪ್ರತಿದಿನ ಮೂರು ಹೊತ್ತು ಕೆಎಂಸಿ ಕ್ಯಾಂಟಿನ್‌ನಿಂದ ಊಟ ಪೂರೈಕೆಯಾಗುತ್ತಿದೆ. ಜಿಲ್ಲಾಡಳಿತ, ಆರೋಗ್ಯ ಹಾಗೂ ಪೊಲೀಸ್ ಇಲಾಖೆಯ ಸಹಕಾರ ಎಂದಿಗೂ ಮರೆಯುವುದಿಲ್ಲ. ಕೊನೆಯಾದಾಗಿ ‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತು ಅಕ್ಷರಶಃ ನಿಜ ಎಂದು ಮಾತು ಮುಗಿಸಿದರು.

‘ಸೋಂಕಿತರ ವ್ಯಕ್ತಿತ್ವ ಹರಣ ಮಾಡಬೇಡಿ’
ಸೋಂಕಿಗೆ ತುತ್ತಾದ ಬಳಿಕ ಸಮಾಜ ನಡೆದುಕೊಂಡ ರೀತಿಯ ಬಗ್ಗೆ ಬೇಸರವಿದೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಹಾಗೂ ಕುಟುಂಬದವರ ಫೋಟೊಗಳನ್ನು ಷೇರ್ ಮಾಡಿದ್ದು ಮನಸ್ಸಿಗೆ ತುಂಬಾ ನೋವುಂಟು ಮಾಡಿತು. ಯಾವ ವ್ಯಕ್ತಿ ಕೂಡ ಉದ್ದೇಶಪೂರ್ವಕವಾಗಿ ಸೋಂಕು ಅಂಟಿಸಿಕೊಳ್ಳುವುದಿಲ್ಲ ಹಾಗೂ ಬೇರೆಯವರಿಗೆ ಹರಡುವುದಿಲ್ಲ. ಸೋಂಕಿತರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಸೋಂಕಿತರನ್ನು ನಿಂಧಿಸುವ, ವ್ಯಕ್ತಿತ್ವ ಹರಣ ಮಾಡುವ ಬದಲು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.