ADVERTISEMENT

ಆಗಸ್ಟ್ 15ರ ಬಳಿಕ ಶಾಲೆ: ಕೇಂದ್ರದ ಕ್ರಮಕ್ಕೆ ಶಿಕ್ಷಕರ ಸಂಘ ಸಂತಸ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 7:49 IST
Last Updated 8 ಜೂನ್ 2020, 7:49 IST
ಪ್ರಾಥಮಿಕ ಶಾಲೆ–ಸಾಂದರ್ಭಿಕ ಚಿತ್ರ
ಪ್ರಾಥಮಿಕ ಶಾಲೆ–ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇಶದಲ್ಲಿ ಶಾಲೆಗಳು ಆರಂಭವಾಗುವುದು ಆಗಸ್ಟ್ 15ರ ನಂತರವೇ ಎಂಬ ಬಗ್ಗೆ ಕೇಂದ್ರ ಸರ್ಕಾರ ಸುಳಿವು ನೀಡಿರುವುದನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸ್ವಾಗತಿಸಿದ್ದು, ಶಾಲೆ ತೆರೆಯಲು ಅವಸರ ಮಾಡುತ್ತಿರುವವ ರಾಜ್ಯ ಸರ್ಕಾರಕ್ಕೆ ತಕ್ಕ ಉತ್ತರ ಸಿಕ್ಕಿದೆ ಎಂದು ಹೇಳಿದೆ.

'ಶಾಲೆ ಆರಂಭಿಸುವ ವಿಷಯದಲ್ಲಿ ಅವಸರ ತೋರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಕೇಂದ್ರ ಮಾನವಸಂಪನ್ಮೂಲ ಇಲಾಖೆ ಕಡಿವಾಣ ಹಾಕಿದೆ. ಆಗಸ್ಟ್ 15ಕ್ಕೆ ಮೊದಲು ಶಾಲೆಗಳ ಆರಂಭ ಸಾಧ್ಯವಿಲ್ಲ ಎನ್ನುವ ಸ್ಪಷ್ಟ ಅಭಿಪ್ರಾಯವನ್ನು ಮಾನವಸಂಪನ್ಮೂಲ ಖಾತೆ ಸಚಿವ ರಮೇಶ ಪೋಖ್ರಿಯಾಲ್ ಹೊರಹಾಕಿದ್ದಾರೆ' ಎಂದು ಸಂಘವು ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

'ಈಗ ಹಲವು ಪರೀಕ್ಷೆಗಳು ನಡೆದಿವೆ. ಅವುಗಳು ಮುಕ್ತಾಯವಾಗಿ ಫಲಿತಾಂಶ ಹೊರಬರುವ ಹೊತ್ತಿಗೆ ಆಗಸ್ಟ್ ಮಧ್ಯಭಾಗ ಬರುತ್ತದೆ. ಹಾಗಾಗಿ ಶಾಲೆಗಳ ಆರಂಭ ಆ ಬಳಿಕವೇ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಂದರೆ ಸೆಪ್ಟಂಬರ್ ಮೊದಲ ವಾರಕ್ಕೆ ಹೋದರೂ ಆಶ್ಚರ್ಯವಿಲ್ಲ ಎನ್ನುವ ದಾಟಿಯಲ್ಲಿ ಅವರು ಮಾತನಾಡಿದ್ದಾರೆ. ಶಾಲೆಗಳ ಆರಂಭಕ್ಕೆ ಯಾವುದೇ ಅವಸರವಿಲ್ಲ ಎನ್ನುವ ಸೂಚನೆಯನ್ನೂ ಅವರು ನೀಡಿದ್ದಾರೆ ಎಂದು ತಿಳಿಸಿದೆ.

ADVERTISEMENT

ಕರ್ನಾಟಕದಲ್ಲಿ ಜುಲೈ 1ರಿಂದಲೇ ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಮುಂದಾಗಿತ್ತು. ಆದರೆ ಇದಕ್ಕೆ ಪಾಲಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತು ಮಕ್ಕಳ ಶಾಲೆಗಿಂತ ಅವರ ಆರೋಗ್ಯ ಮುಖ್ಯ ಎನ್ನುವ ಸಂದೇಶವನ್ನು ಪಾಲಕರು ಹೊರಹಾಕಿದ್ದರಿಂದ ಸದ್ಯಕ್ಕೆ ಕರ್ನಾಟಕದಲ್ಲಿ ಶಾಲೆಗಳ ಆರಂಭದ ಕುರಿತು ಸ್ಪಷ್ಟ ನಿರ್ಧಾರಕ್ಕೆ ಬರಲಾಗಿಲ್ಲ. ಆದರೆ, ಶಿಕ್ಷಕರನ್ನು ಈಗಲೇ ಶಾಲೆಗೆ ಕರೆಸಿಕೊಳ್ಳುತ್ತಿರುವ ಶಿಕ್ಷಣ ಇಲಾಖೆ, ಅನಗತ್ಯವಾಗಿ ಸಮಸ್ಯೆಯನ್ನು ಮೈಮೇಲೆಳೆದುಕೊಳ್ಳುವಂತೆ ಕಾಣುತ್ತಿದೆ. ಶಿಕ್ಷಕರ ಸಂಘಗಳ ಮನವಿಯ ನಂತರವೂ ಸರ್ಕಾರ ಶಿಕ್ಷಕರಿಗೆ ಹಾಜರಾತಿಯಿಂದ ವಿನಾಯಿತಿ ತೋರಿಸುತ್ತಿಲ್ಲ ಎಂದು ಸಂಘ ಹೇಳಿದೆ.

ಅಕ್ಟೋಬರ್ ರಜೆ ಮತ್ತು ಮುಂದಿನ ಏಪ್ರಿಲ್ ರಜೆಯಲ್ಲಿ ಪಾಠ ಮಾಡುವ ಮೂಲಕ ಪಾಠದ ಅವಧಿಯನ್ನು ಸರಿದೂಗಿಸುವುದಾಗಿ ಶಿಕ್ಷಕರ ಸಂಘ ಭರವಸೆ ನೀಡಿದೆ. ಆದರೆ ಸರ್ಕಾರ ಈವರೆಗೂ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ. ಪಾಲಕರ ಸಭೆಯ ಬಳಿಕ ಈ ಬಗ್ಗೆ ಸೂಕ್ತ ನಿರ್ಧಾರವಾಗುವ ಸಾಧ್ಯತೆ ಇದೆ ಎಂದು ಸಂಘ ತಿಳಿಸಿದೆ.

ಎಷ್ಟೋ ಶಾಲೆಗಳಿರುವ ಹಳ್ಳಿಗಳಿಗೆ ಬಸ್ ವ್ಯವಸ್ಥೆ ಇಲ್ಲ, ಅನೇಕ ಶಾಲೆಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಕೆಲವು ಶಾಲೆಗಳು ಸೀಲ್ ಡೌನ್ ಪ್ರದೇಶದಲ್ಲಿವೆ. ಇದಕ್ಕಿಂತ ಮುಖ್ಯವಾಗಿ ಶಿಕ್ಷಕರು ಕೊರೊನಾ ಭೀತಿಯ ನಡುವೆ ಈಗಲೇ ಶಾಲೆಗೆ ಹೋಗಿ ಮಾಡುವಂತ್ತಾದ್ದೇನು ಇಲ್ಲ ಎನ್ನುವ ಕಾರಣ ನೀಡಿ ಶಿಕ್ಷಕರಿಗೆ ಹಾಜರಾತಿಯಿಂದ ವಿನಾಯಿತಿ ನೀಡುವಂತೆ ಕೋರಲಾಗಿದೆ.

ಮಕ್ಕಳಿಗೆ ಶಾಲೆ ಇಲ್ಲದೆ ಶಿಕ್ಷಕರು ಮಾತ್ರ ಹಾಜರಾಗಬೇಕೆಂದರೆ, ಅನೇಕ ಶಿಕ್ಷಕರಿಗೆ ಮಕ್ಕಳನ್ನು ಎಲ್ಲಿ ಬಿಟ್ಟು ಬರಬೇಕೆನ್ನುವ ಸಮಸ್ಯೆ ಕಾಡುತ್ತಿದೆ. ಚಿಕ್ಕ ಚಿಕ್ಕ ಮಕ್ಕಳನ್ನು ಶಾಲೆಗೆ ತಮ್ಮೊಂದಿಗೆ ಕರೆತರಲೂ ಆಗದೆ, ಮನೆಯಲ್ಲಿ ಬಿಟ್ಟು ಬರಲೂ ಸಾಧ್ಯವಿಲ್ಲದೆ ಕಂಗೆಟ್ಟಿದ್ದಾರೆ. ಇನ್ನು ಎದೆ ಹಾಲು ಉಣಿಸುವ ಶಿಕ್ಷಕಿಯರಂತೂ ಕೊರೊನಾ ಭೀತಿಯಿಂದಾಗಿ ಅಕ್ಷರಶಃ ಕಂಗಾಲಾಗಿದ್ದಾರೆ. ಚಿಕ್ಕ ಮಕ್ಕಳನ್ನು ಶಾಲೆಗೆ ಕರೆತಂದರೆ ಎಲ್ಲಿ ಕೊರೊನಾ ಅಂಟಿಕೊಂಡರೆ ಎನ್ನುವ ಆತಂಕ. ಬಸ್ ಸೇರಿದಂತೆ ಸಾರ್ವಜನಿಕ ವಾಹನಗಳಲ್ಲಿ ಶಾಲೆಗೆ ತೆರಳುವ ಅಪಾಯಕಾರಿ ಸನ್ನಿವೇಶ ಅವರಿಗೆ ಎದುರಾಗಿದೆ. ಬಿಟ್ಟು ಬರುವುದಕ್ಕೆ ಆಗಾಗ ಹಾಲುಣಿಸಬೇಕಾದ ಅನಿವಾರ್ಯತೆ. ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಈ ಶೈಕ್ಷಣಿಕ ವರ್ಷದ ಮಟ್ಟಿಗೆ Feeding Motherಗಳಿಗೆ ವಿನಾಯಿತಿ ನೀಡುವ ಕುರಿತು ಶಿಕ್ಷಣ ಸಚಿವ ಸುರೇಶ ಕುಮಾರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.