ADVERTISEMENT

ಸೌಂದರ್ಯ ಪರಿಷೆಯಲ್ಲಿ ಹೆಣ್ಣೆಂಬ ಸರಕು

ಸುಮನ್‌ ಕಿತ್ತೂರು
Published 6 ಮಾರ್ಚ್ 2020, 15:50 IST
Last Updated 6 ಮಾರ್ಚ್ 2020, 15:50 IST
ಸುಮನಾ ಕಿತ್ತೂರು
ಸುಮನಾ ಕಿತ್ತೂರು   

ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಒಂದು ಫೋಸ್ಟ್‌ ನೋಡಿದೆ. ಆ ಪೋಸ್ಟ್‌ ಹೀಗಿತ್ತು:

‘ನೀನು ಬೆಳ್ಳಗಾಗಬೇಕು. ನಿನ್ನ ಕೂದಲನ್ನು ನುಣ್ಣಗೆ ಮಾಡಿಕೊ. ಪಾದಗಳು ಹೊಳೆಯುತ್ತಲಿರಲಿ. ಉಗುರುಗಳು ನುಣ್ಣಾನೆ ನುಣುಪಾಗಿರಲಿ...’ ನಾವು ನಮ್ಮ ಹೆಣ್ಣುಮಕ್ಕಳಿಗೆ ಸೌಂದರ್ಯದ ಪರಿಕಲ್ಪನೆಯನ್ನು ಕಲಿಸುವುದು ಹೀಗೆ. ಆದರೆ ನಾವು ನಿಜವಾಗಿಯೂ ಕಲಿಸಬೇಕಾಗಿರುವುದು ಇದನ್ನಲ್ಲ; ಸೌಂದರ್ಯವೆಂಬುದು ಆಂತರಿಕವಾಗಿ ಇರುವಂಥದ್ದು ಎನ್ನುವ ಅರಿವು ಮೂಡಿಸಬೇಕು.’

ಮಾಧ್ಯಮಗಳು, ಸಿನಿಮಾಗಳು, ಜಾಹೀರಾತುಗಳು ಎಲ್ಲದರಲ್ಲಿಯೂ ಹೆಣ್ಣನ್ನು ಬಹುತೇಕ ಮಾರಾಟದ ಸರಕಾಗಿಯೇ ಬಳಸಿಕೊಳ್ಳಲಾಗುತ್ತಿದೆ. ಗಂಡುಮಕ್ಕಳ ಚಡ್ಡಿ ಜಾಹೀರಾತಿಗೂ ಹೆಣ್ಣುಮಕ್ಕಳನ್ನೇ ಕರೆದುಕೊಂಡು ಬರುತ್ತಾರೆ. ಇದನ್ನು ಹೇಗೆ ಅರ್ಥೈಸಿಕೊಳ್ಳಬೇಕು? ಮಾರಾಟದ ಸರಕು ಎಂದು ತಾನೆ? ನಮ್ಮ ಪ್ರಾಡೆಕ್ಟ್‌ಗಳನ್ನು ಮಾರಬೇಕು ಎಂದರೆ ಪ್ರಾಣಿ–ಪಕ್ಷಿಗಳನ್ನು ತೆಗೆದುಕೊಳ್ಳಲಿಕ್ಕೆ ಆಗುವುದಿಲ್ಲವಲ್ಲ. ಹಾಗಾಗಿ ಹೆಣ್ಣುಮಕ್ಕಳನ್ನು ತೆಗೆದುಕೊಳ್ಳುತ್ತಾರೆ. ಎಲ್ಲ ಧಾರಾವಾಹಿಗಳಲ್ಲಿಯೂ ಹೆಣ್ಣುಮಕ್ಕಳು ಒಂದು ಸರಕಾಗಿಯೇ ಬಳಕೆಯಾಗುತ್ತಿದ್ದಾರೆ.

ADVERTISEMENT

ಜಾಹೀರಾತುಗಳಿರಬಹುದು ಅಥವಾ ಯಾವುದೇ ಮನರಂಜನೆ ಇರಬಹುದು. ಸಿನಿಮಾವನ್ನೇ ತೆಗೆದುಕೊಳ್ಳಿ; ಹೆಣ್ಣನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ? ಯಾವ ರೀತಿ ನೋಡುತ್ತಿದ್ದೇವೆ? ಇದೊಂದು ಜನಪ್ರಿಯ ಮಾದರಿಯಾಗಿಯೇ ಚಾಲ್ತಿಯಲ್ಲಿದೆ. ಆ ರೂಢಿಗತ ಮನಸ್ಥಿತಿ ಯಾವ ಮಟ್ಟಕ್ಕೆ ಬೇರೂರಿದೆ ಎಂದರೆ ಯಾವುದನ್ನೂ ನಾವು ಒಗ್ಗೂಡಿ ಪ್ರಶ್ನೆ ಮಾಡಲಿಕ್ಕೇ ಸಾಧ್ಯವಾಗುತ್ತಿಲ್ಲವಲ್ಲ... ಅಷ್ಟು ದೂರ ಬಂದುಬಿಟ್ಟಿದ್ದೇವೆ. ಯಾಕೆ ಹೀಗಾಗಿದೆ?

ಸೌಂದರ್ಯ ಎನ್ನುವ ಪರಿಕಲ್ಪನೆಯನ್ನು ತೆಗೆದುಕೊಳ್ಳಿ. ಕಣ್ಣಿಗೆ ಕಾಡಿಗೆ ಹಾಕಿಕೊಳ್ಳುವುದು, ಕೆನ್ನೆಯನ್ನು ನುಣ್ಣಗೆ ಇಟ್ಟುಕೊಳ್ಳುವುದು, ಕೂದಲನ್ನು ನುಣುಪಾಗಿಸಿಕೊಳ್ಳುವುದೇ ಸೌಂದರ್ಯ ಎನ್ನುವ ಪರಿಕಲ್ಪನೆಗಳನ್ನು ನಮ್ಮ ಮಕ್ಕಳ ಮನಸ್ಸಿನಲ್ಲಿ ಬಲವಾಗಿ ಮೂಡಿಸುತ್ತಿದ್ದೇವೆ.

‘ಬೆಳ್ಳಗಾಗುವುದಕ್ಕೆ ಫೇರ್‌ ಆ್ಯಂಡ್‌ ಲವ್ಲೀ ಹಚ್ಚಿಕೊಳ್ಳಿ’ ಎಂದು ಸಾರುವ ಜಾಹೀರಾತೊಂದಿದೆಯಲ್ಲ, ಅದು ಚಿಕ್ಕವಯಸ್ಸಿನಿಂದ ಹಿಡಿದು ‌ಇಂದಿಗೂ ನನ್ನನ್ನು ತುಂಬಾ ಕಾಡುತ್ತದೆ. ಆ ಜಾಹೀರಾತಿನಲ್ಲಿ ಕಪ್ಪಗಿರುವವಳು ಬೆಳ್ಳಗಾದಳು ಎಂದು ತೋರಿಸುತ್ತಾರೆ. ಇಂಥ ಒಂದಿಷ್ಟು ಕ್ರೀಮ್‌ಗಳ ಮಾರಾಟಕ್ಕಾಗಿ ಬೆಳ್ಳಗಾಗುವುದೇ ಸೌಂದರ್ಯದ ಮಾನದಂಡ ಎಂಬ ಭಾವನೆಯನ್ನು ಬಿತ್ತುತ್ತಾರಲ್ಲ, ಅದಕ್ಕಿಂತ ದೊಡ್ಡ ದುರಂತ, ದುರಾಲೋಚನೆ, ಅಸಹ್ಯ ಇನ್ನೊಂದಿಲ್ಲ. ನಿಜವಾಗಿಯೂ ನಮಗೆ ಬೇಕಾ ಇದು? ನಾವ್ಯಾಕೆ ಇಂಥ ದುರಂತಗಳನ್ನು ಪ್ರಶ್ನಿಸಲು ಸಾಧ್ಯವಾಗುತ್ತಿಲ್ಲ? ಬಹುಶಃ ಬೇರೆ ಯಾವ ದೇಶಗಳಲ್ಲಿಯೂ ಇಂಥ ಜಾಹೀರಾತು ಪ್ರಸಾರವಾಗಲು ಬಿಡುವುದಿಲ್ಲ. ಇವರ ಪ್ರಕಾರ ಸೌಂದರ್ಯ ಎಂದರೆ ಬೆಳ್ಳಗಿರುವುದು ಎಂದಷ್ಟೆ.

ಮಗು ಹೊಟ್ಟೆಯಲ್ಲಿ ಇರುವಾಗಲೇ ಅವಳನ್ನು ಇಂಥ ‘ಬೆಳ್ಳಗಿನ ಸೌಂದರ್ಯ’ದ ಮಾದರಿಗೆ ಒಗ್ಗಿಸುವ ಪ್ರಯತ್ನ ಶುರುವಾಗುತ್ತದೆ. ಗರ್ಭಿಣಿಗೆ ‘ಈವತ್ತಿನಿಂದಲೇ ನೀನು ಹಾಲಿಗೆ ಅರಸಿನ ಹಾಕಿಕೊಂಡು ಕುಡಿ. ಹುಟ್ಟುವ ಮಗು ಬೆಳ್ಳಗೆ ಹುಟ್ಟುತ್ತದೆ’ ಎಂದು ಹೇಳುವುದರಿಂದಲೇ ಇದು ಶುರುವಾಗುತ್ತದೆ.

ತುಂಬ ಚೆಂದಗಿನ ಬಟ್ಟೆಗಳನ್ನು ತೊಟ್ಟುಕೊಳ್ಳಬೇಕು. ಅದರಲ್ಲಿಯೂ ಇಂಥ ಟ್ರೆಂಡ್‌ನ ಬಟ್ಟೆಗಳನ್ನೇ ತೊಡಬೇಕು, ಅದಕ್ಕೆ ಮ್ಯಾಚಿಂಗ್‌ ಹೀಗೆಯೇ ಇರಬೇಕು, ಹೇರ್‌ಸ್ಟೈಲ್‌ ಹೀಗೆಯೇ ಇರಬೇಕು ಎಂದೆಲ್ಲ ಹೇಳುತ್ತ ನಾವು ನಮ್ಮ ಇಂದಿನ ಪೀಳಿಗೆಗೆ ಸೌಂದರ್ಯದ ಪರಿಕಲ್ಪನೆಯನ್ನು ಬ್ರ್ಯಾಂಡ್‌ ಬಟ್ಟೆಗಳ ಮೂಲಕ ಕಟ್ಟಿಕೊಡುತ್ತಿದ್ದೇವೆ. ನಮ್ಮ ಮಕ್ಕಳಿಗೆ ಆಂತರಿಕ ಸೌಂದರ್ಯದ ಬಗ್ಗೆ ಎಷ್ಟು ಹೇಳಿಕೊಳ್ಳುತ್ತಿದ್ದೇವೆ? ಹೊರಗಿನ ಸೌಂದರ್ಯಕ್ಕಿಂತ ಮನಸ್ಸಿನ ಸೌಂದರ್ಯ ಮುಖ್ಯ ಎನ್ನುವುದು ನಮ್ಮೊಳಗೇ ಏಕೆ ಇಳಿಯುತ್ತಿಲ್ಲ?

ನೀನು ಕಪ್ಪಗಿರು, ದಪ್ಪ ಇರು, ತೆಳ್ಳಗಿರು, ಬೆಳ್ಳಗಿರು... ಹೇಗೆಯೇ ಇದ್ದರೂ ನಿನಗೊಂದು ಸೌಂದರ್ಯ ಇದ್ದೇ ಇದೆ. ಹೆಣ್ಣು ಎಂದರೇ ಸೌಂದರ್ಯ, ವಿಸ್ಮಯ ತಾನೆ? ಆ ಸೌಂದರ್ಯ ಹೊರಗಡೆ ಪ್ರಜ್ವಲಿಸಬೇಕು ಎಂದರೆ ನಿನ್ನ ಅರಿವು ಹೆಚ್ಚಬೇಕು, ತಿಳಿವು ಹೆಚ್ಚಬೇಕು. ನಿನ್ನ ಪರಿಸರ ಆರೋಗ್ಯವಾಗಿಟ್ಟುಕೊಳ್ಳಬೇಕು. ಸ್ವಾವಲಂಬಿ ಆಗಬೇಕು. ಯಾವುದನ್ನು ಪ್ರಶ್ನಿಸಬೇಕು, ಯಾವುದನ್ನು ಪ್ರಶ್ನಿಸಬಾರದು ಎಂದು ಪ್ರಜ್ಞೆ ಬೆಳೆಸಿಕೊಳ್ಳಬೇಕು. ಸುತ್ತಲಿನ ಸಮಾಜಕ್ಕೆ ಮಾದರಿಯಾಗಬೇಕು. ಇದು ನಿಜವಾದ ಸೌಂದರ್ಯದ ವ್ಯಾಖ್ಯಾನ. ಆದರೆ ಇಂದು ಎಷ್ಟು ಜನ ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಇವುಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ?

ಯಾವ ಸೌಂದರ್ಯವರ್ಧಕಗಳನ್ನೂ ಬಳಸದೆ, ಯಾವ ಬ್ರ್ಯಾಂಡೆಡ್‌ ಬಟ್ಟೆಗಳನ್ನು ಧರಿಸದೆ ತಮ್ಮ ಆಂತರಿಕ ಸೌಂದರ್ಯಬಲದಿಂದಲೇ ಜಗತ್ತನ್ನು ಆಳಿದ ಎಷ್ಟೊಂದು ಹೆಣ್ಣುಮಕ್ಕಳನ್ನು ನಾವು ನೋಡಿದ್ದೇವೆ. ಅವರ ಪ್ರಖರತೆ ಬಹಳ ದೊಡ್ಡದಿದೆ. ಎಂದೋ ಬದುಕಿ ಹೋದ ಅವರು ಇಂದಿಗೂ ಪ್ರಜ್ವಲಿಸುತ್ತಿದ್ದಾರೆ. ಯಾಕೆ ನಮಗೆ ಅವರ ಸೌಂದರ್ಯ ಮಾದರಿ ಆಗುವುದಿಲ್ಲ?

ಇಂದು ಹೆಣ್ಣುಮಕ್ಕಳನ್ನು ಮಾರುಕಟ್ಟೆಯ ಸರಕಾಗಿ ಬಳಸಿಕೊಳ್ಳುತ್ತಿದ್ದಾರೆ. ಯಾಕೆ ಬಳಸಿಕೊಳ್ಳುತ್ತಿದ್ದಾರೆ ಎಂದರೆ ಮಾರುಕಟ್ಟೆಯ ರೂಪುರೇಷೆಗಳನ್ನು ನಿರ್ಧರಿಸುವ ಆಯಕಟ್ಟಿನ ಜಾಗದಲ್ಲಿ ಇರುವವನು ಗಂಡು. ಅವರಿಗೆ ತುಂಬ ಸಹಜ ಮತ್ತು ಸುಲಭವಾಗಿ ತಮ್ಮ ಉತ್ಪನ್ನವನ್ನು ಎಲ್ಲ ಕಡೆಗಳಲ್ಲಿಯೂ ತಲುಪಿಸಬಲ್ಲ, ಸೆಳೆಯಬಲ್ಲ ಟೂಲ್‌ಗಳು ಬೇಕಿರುತ್ತವೆ. ಆ ಟೂಲ್‌ ಹೆಣ್ಣು. ಒಂದೊಮ್ಮೆ ಹೆಣ್ಣು ‘ನೋ’ ಎಂದು ಹೇಳಿದರೆ ಅವನ ಉತ್ಪನ್ನಗಳ ಗತಿ ಏನಾಗಬೇಕು? ಹಾಗಾಗಿಯೇ ಅವಳನ್ನು ‘ನೋ’ ಎನ್ನಲಾಗದ ಸ್ಥಿತಿಯಲ್ಲಿಯೇ ಸದಾ ಇರುವಂತೆ ನೋಡಿಕೊಳ್ಳುತ್ತಾನೆ.

ಒಂದು ಹುಡುಗಿಗೆ ಆಂತರಿಕ ಸೌಂದರ್ಯದ ಪಾಠ ಹೇಳಿಕೊಡುವುದು ಎಷ್ಟು ಅಗತ್ಯವೋ, ಗಂಡಿಗೂ ಅದು ಅತ್ಯಗತ್ಯ. ಗಂಡು ತನಗೆ ತೆಳ್ಳಗೆ ಬೆಳ್ಳಗೆ ಉದ್ದವಾಗಿರುವ ಹೆಣ್ಣು ಬೇಕು ಎಂದು ಹೇಳುತ್ತಾನಲ್ಲ, ಆ ಪರಿಕಲ್ಪನೆ ಬಂದಿರುವುದು ಎಲ್ಲಿಂದ? ಅದು ನಮ್ಮ ಜಾಹೀರಾತು ಜಗತ್ತು ಹುಟ್ಟುಹಾಕುತ್ತಿರುವ ಸೌಂದರ್ಯ ಪರಿಕಲ್ಪನೆಯ ಫಲ.

ಮೊದಲು ಸೌಂದರ್ಯದ ಈ ಪರಿಕಲ್ಪನೆ ಎಲ್ಲಿತ್ತು? ನಮ್ಮವ್ವಂದಿರೆಲ್ಲ ತುಂಬ ಚೆನ್ನಾಗಿ, ಆರೋಗ್ಯವಾಗಿ ಗುಂಡಗೆ ಇದ್ದು ಎಪ್ಪತ್ತು ಎಂಬತ್ತು ವರ್ಷ ಬದುಕಿದ್ದರಲ್ಲವೇ? ಇಂದ್ಯಾಕೆ ದಪ್ಪಗಿರುವುದು ಅಕ್ಷಮ್ಯ ಎಂಬ ಭಾವನೆ ಎಲ್ಲರಲ್ಲಿಯೂ ಹುಟ್ಟುತ್ತಿದೆ? ತಾನು ಮಾಡಿದ ಉತ್ಪನ್ನವನ್ನು ಮಾರಾಟ ಮಾಡುವುದಕ್ಕೆ ಒಂದಿಡೀ ಪೀಳಿಗೆಯ ಜೀವನದೃಷ್ಟಿಯನ್ನೇ ಅಲ್ಲೋಲಕಲ್ಲೋಲ ಮಾಡಲಾಗುತ್ತದೆ ಎನ್ನುವುದಾದರೆ ಅದರ ಶಕ್ತಿ ಎಂಥದ್ದು?

ಚಿಕ್ಕ ವಯಸ್ಸಿನಿಂದಲೂ ನಾನು ‘ಆರು ವಾರಗಳಲ್ಲಿ ಬೆಳ್ಳಗಾಗುತ್ತೀರಿ’ ಎಂಬ ಕ್ರೀಮ್‌ ಜಾಹೀರಾತನ್ನು ನೋಡಿಕೊಂಡು ಬಂದಿದ್ದೇನೆ. ಅದನ್ನು ಎಲ್ಲಿ ಹೇಗೆ ಪ್ರತಿಭಟಿಸಲಿ ಹೇಳಿ? ಚಿಕ್ಕ ಚಿಕ್ಕ ಮಕ್ಕಳು ಆ ಜಾಹೀರಾತು ನೋಡುತ್ತವೆ. ಕಪ್ಪಗಿರುವ ಮಕ್ಕಳಲ್ಲಿ ಕೀಳರಿಮೆ ಶುರುವಾಗುತ್ತದೆ. ಈ ಉತ್ಪನ್ನಗಳು ಬರೀ ಉತ್ಪನ್ನಗಳಾಗಿ ಉಳಿದಿಲ್ಲ. ಉತ್ಪನ್ನಗಳ ಮುಖಾಂತರ ಭೇದ–ಭಾವ, ವರ್ಣಭೇದ, ಮೇಲು–ಕೀಳು, ಹೆಣ್ಣು–ಗಂಡು ಈ ಎಲ್ಲ ತರತಮಗಳನ್ನೂ ಹುಟ್ಟುಹಾಕಲಾಗುತ್ತಿದೆ. ಯಾವ ತರತಮ ವ್ಯವಸ್ಥೆಯನ್ನು ಮೀರಿಕೊಂಡು ಬರಬೇಕು ಎಂದು ಶತಮಾನಗಳಿಂದ ಹೋರಾಡುತ್ತಿದ್ದೇವೆಯೋ ಅದೇ ವ್ಯವಸ್ಥೆಯನ್ನು ಈ ಜಾಹೀರಾತು ಜಗತ್ತು ಹೊಸ ಪರಿವೇಷಗಳಲ್ಲಿ ಸ್ಥಾಪಿತಗೊಳಿಸುತ್ತಿದೆ. ನಮಗೆ ಅದನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗಿದೆಯೇ?

ಇದು ಬರೀ ಭಾರತದಲ್ಲಿ ಇರುವ ಸಮಸ್ಯೆ ಅಲ್ಲ. ಜಗತ್ತಿನಾದ್ಯಂತ ಆವರಿಸಿರುವ ಕಳೆ ಇದು. ಇತ್ತೀಚೆಗೆ ಬೇಕಾದಷ್ಟು ಜನ ಈ ಕಳೆಯನ್ನು ಕೀಳುವ ಪ್ರಯತ್ನದಲ್ಲಿಯೂ ಇದ್ದಾರೆ. ಆದರೆ ಇದು ತುಂಬ ದೊಡ್ಡ ಮಟ್ಟದಲ್ಲಿ ಇರುವಂಥ ಕಳೆ. ಬೇರು ಬಿಟ್ಟಿದೆ. ಅಸಾಧ್ಯವಾಗಿ ವಿಸ್ತಾರವಾಗಿಬಿಟ್ಟಿದೆ. ಅದನ್ನು ಕೀಳುವ ಕೆಲಸ ಈಗ ಶುರುವಾಗಿದೆ. ಯಾವಾಗ ಮುಗಿಯುತ್ತದೆ ಎಂಬುದು ಗೊತ್ತಿಲ್ಲ. ನಾವು ಈ ಕಳೆಯನ್ನು ನಮ್ಮ ಸಮಾಜದಿಂದಲೂ ಕಿತ್ತೊಗೆಯಬೇಕು. ಆದರೆ ಆ ಕೆಲಸವನ್ನು ಎಲ್ಲಿಂದ ಶುರುಮಾಡಬೇಕು ಹೇಳಿ?

‘ಎಲ್ಲಿಂದ ಶುರುಮಾಡಬೇಕು’ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳುವುದೇ ಬಹುಶಃ ಮೊದಲ ಹೆಜ್ಜೆ ಆಗಬಹುದು. ಯಾಕೆಂದರೆ ನಮ್ಮ ಮನಸ್ಸಿನಲ್ಲಿರುವ ಕಳೆಯನ್ನು ಮೊದಲು ಕಿತ್ತೊಗೆಯಬೇಕು. ನಂತರ ಸುತ್ತಲಿನ ಸಮಾಜದಲ್ಲಿನ ಕೊಳೆಯನ್ನು ಕೀಳುವ ಕೆಲಸಕ್ಕೆ ಅಣಿಯಾಗಬೇಕು.

ಲೇಖಕಿ ಪತ್ರಕರ್ತೆ, ಸಿನಿಮಾ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.