
ಅಕಾಲದ, ಆ ಕಾಲದ
ಬರುವ ಕಾಲದ, ಇರುವ ಕಾಲದ
ಕಾಲ ಕಾಲದ ಕೈದಿ, ಕರುಣಾಳುಗಳ
ಬೆವರು, ನಿಟ್ಟುಸಿರಿನ ಘನ ನಿಲವು
ಇಕೋ...
ಈ ಸರ್ವಾಂಗ ಸುಂದರ ವಿಧಾನಸೌದ
ಇಕೋ... ಇಲ್ಲೆ
ಕಣ್ಣೆದುರಿಗೆ ನಿಂತಿದೆ
ಭಾರತದ ಒಲುಮೆ ಅಂಬೇಡ್ಕರ್ ಪ್ರತಿಮೆ.
ಕಣ್ಣಿದ್ದವರು ಕಾಣಿರೋ
ಒಳಗಣ್ಣಿದ್ದವರು
ಅವನ ಅಂತರಂಗವ ಮುಟ್ಟಿ ಅರಿಯಿರೋ.
ನೋಡುಗರ ನೋಟಕ್ಕೆ ದಕ್ಕಿದಂತೆ
ಕಂಡೂ ಕಾಣದವರ ಕಣ್ಣು ಕುಕ್ಕುವಂತೆ
ಜಾತಿ ಕುರುಡರ ಕಣ್ಣು ತಟ್ಟನೆ ತೆರೆಸುವಂತೆ
ಸ್ವಜಾತಿ ಜನರ ಪ್ರಜ್ಞೆ ಸ್ಫೋಟಿಸುವಂತೆ
ಜಾತ್ಯತೀತ ಜನಶಕ್ತಿ ಎದೆಎತ್ತಿ ನಡೆಯುವಂತೆ
ಬಾಯ್ದೆರೆದು ನುಡಿದರೆ ನಿಂತ ನೆಲ ನಡುಗುವಂತೆ
ಕಣ್ಣಿದ್ದವರು ಕಾಣಿರೋ
ಒಳಗಣ್ಣಿದ್ದವರು
ಅವನ ಅಂತರಂಗವ ಮುಟ್ಟಿ ಅರಿಯಿರೋ.
ಎಡಕ್ಕೆ: ಅಂದರೆ
ಉಚ್ಛ ನ್ಯಾಯಾಲಯದ ದಿಕ್ಕಿಗೆ
ಅಚ್ಚ ಹೊಸ ‘ರಾಷ್ಟ್ರಗ್ರಂಥ’
‘ಭಾರತದ ಸಂವಿಧಾನ’ ಎಡಗೈಲಿದೆ
ಬಲಕ್ಕೆ: ಅಂದರೆ
ವಿಧಾನಸೌಧದ ದಿಕ್ಕಿಗೆ
ತೋರು ಬೆರಳು ತೋರಿಸುತ್ತ
ದಿಕ್ಕೆಟ್ಟು ಕುಂತವರಿಗೆ ದಿಕ್ಕು ಕಾಣಿಸುವಂತೆ
ಉರಿವ ಸೂರ್ಯನನ್ನೊ
ತಣಿಸುವ ಚಂದ್ರನನ್ನೊ
ದಣಿಯುತ್ತಿರುವ ‘ದರೈಸ್ತ್ರೀ’ಯನ್ನೊ (ದಲಿತ ರೈತ ಸ್ತ್ರೀ)
ಎಡಗೈಗೂ ಬಲಗೈಗೂ
ಎಟುಕದ ಆಕಾಶವನ್ನೊ
ಕಟ್ಟಕಡೆಗೆ...
ಕೈಗೆಟುಕುವ ಬೋಧಿಸತ್ವನನ್ನೊ
ದುಃಖದ ಕಡಲನ್ನು ಕಣ್ಣು ತುಂಬಿಸಿಕೊಂಡು
ಕಾಣದುದ ಕಂಡವನಂತೆ
ಅಲ್ಲೆ ಎದುರಿಗೆ ನಿಂತವನೆ
ಕಣ್ಣಿದ್ದವರು ಕಾಣಿರೋ
ಒಳಗಣ್ಣಿದ್ದವರು
ಅವನ ಅಂತರಂಗವ ಮುಟ್ಟಿ ಅರಿಯಿರೋ.
ತೋರುಬೆರಳೇ ತೋರುಬೆರಳೇ
ತೋರು ಬೆರಳೆ ತೋರಿಸು!
ನನ್ನ ನಿನ್ನ ಒಳಗು ಹೊರಗು
ಬಗೆದು ಬಗೆದು
ನಡುರಂಗದ ಆಳಕ್ಕೆ ಇಳಿದು
‘ಪಾತಾಳ ಗರಡಿ’ ಇಳಿಬಿಟ್ಟು
ಹುಡುಕು, ತಡಕು, ಕೆದಕು, ಬೆದಕು
ಮಡುಗಟ್ಟಿದ ಜಾತಿದ್ವೇಷ ವಿಷವನೆಲ್ಲ
ಬೊಗಸೆಯಲ್ಲಿ ಮೊಗೆದು ಮೊಗೆದು
ನವದ್ವಾರಗಳಾಚೆಗೆ ವಿಸರ್ಜಿಸುವ ಬಗೆಯ
ಬಗೆದು ಬಗೆದು ತೋರಿಸು
ತೋರು ಬೆರಳೇ ತೋರಿಸು
ನಡುರಂಗ ಜ್ಯೋತಿ ಬೆಳಗಿಸು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.