
ನವದೆಹಲಿ: ಆಮದು ಪ್ರಮಾಣದಲ್ಲಿನ ಇಳಿಕೆಯಿಂದ ಮೇ ತಿಂಗಳಲ್ಲಿ ದೇಶದ ವ್ಯಾಪಾರ ಕೊರತೆ ₹1.88 ಲಕ್ಷ ಕೋಟಿಯಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
ಸತತ ಎರಡು ತಿಂಗಳಿನಿಂದ ಬೆಳವಣಿಗೆ ಕಂಡಿದ್ದ ರಫ್ತು ಮೇನಲ್ಲಿ ಶೇ 2.17ರಷ್ಟು ಇಳಿಕೆಯಾಗಿದ್ದು, ₹3.32 ಲಕ್ಷ ಕೋಟಿಯಾಗಿದೆ. ಏಪ್ರಿಲ್‌ನಲ್ಲಿ ವ್ಯಾಪಾರ ಕೊರತೆ ₹2.27 ಲಕ್ಷ ಕೋಟಿ ಆಗಿತ್ತು. ಇದಕ್ಕೆ ಹೋಲಿಸಿದರೆ ಮೇ ತಿಂಗಳಲ್ಲಿ ಇಳಿಕೆ ಆಗಿದೆ.
ಆಮದು ಶೇ 1.7ರಷ್ಟು ಕಡಿಮೆಯಾಗಿದ್ದು, ₹5.21 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ರಫ್ತು ಪ್ರಮಾಣದಲ್ಲಿ ಶೇ 3.11 ಹೆಚ್ಚಳವಾಗಿದ್ದು, ₹6.62 ಲಕ್ಷ ಕೋಟಿಯಾಗಿದೆ. ಆಮದು ಶೇ 8ರಷ್ಟು ಹೆಚ್ಚಳವಾಗಿದ್ದು, ₹10.77 ಲಕ್ಷ ಕೋಟಿಯಾಗಿದೆ. ವ್ಯಾಪಾರ ಕೊರತೆ ₹4.14 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ. ಸೇವಾ ರಫ್ತು ₹2.77 ಲಕ್ಷ ಕೋಟಿಯಷ್ಟಾಗಿದೆ.
ರಫ್ತು ಮೌಲ್ಯಕ್ಕಿಂತ ಆಮದು ಮೌಲ್ಯ ಹೆಚ್ಚಿದ್ದರೆ ಅದನ್ನು ವ್ಯಾಪಾರ ಕೊರತೆ ಎಂದು ಕರೆಯಲಾಗುತ್ತದೆ.
ಅಕ್ಕಿ, ಕಬ್ಬಿಣದ ಅದಿರು, ಹರಳು ಮತ್ತು ಆಭರಣಗಳು, ಎಂಜಿನಿಯರಿಂಗ್ ಮತ್ತು ಕೆಲವು ಬಗೆಯ ಜವಳಿ ಸರಕುಗಳ ರಫ್ತು ಇಳಿಕೆಯಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಶೇ 30ರಷ್ಟು ಕಡಿಮೆಯಾಗಿದ್ದು, ₹48,098 ಕೋಟಿಯಾಗಿದೆ. ಇದೇ ವೇಳೆ ಕಚ್ಚಾ ತೈಲ ಮತ್ತು ಚಿನ್ನದ ಆಮದು ಕ್ರಮವಾಗಿ ಶೇ 26 ಮತ್ತು ಶೇ 12ರಷ್ಟು ಇಳಿಕೆಯಾಗಿದೆ. ಇದರ ಮೌಲ್ಯವು ₹1.26 ಲಕ್ಷ ಕೋಟಿ ಮತ್ತು ₹21,457 ಕೋಟಿಯಾಗಿದೆ ಎಂದು ತಿಳಿಸಿದೆ.
ಆದರೆ, ಚಹಾ, ಕಾಫಿ, ಮಸಾಲೆ ಪದಾರ್ಥಗಳು, ಸಿದ್ಧ ಉಡುಪುಗಳು, ರಾಸಾಯನಿಕಗಳು, ಸಾಗರೋತ್ಪನ್ನ ಮತ್ತು ಔಷಧ ಉತ್ಪನ್ನಗಳ ರಫ್ತು ಸಕಾರಾತ್ಮಕವಾಗಿದೆ. ಎಲೆಕ್ಟ್ರಾನಿಕ್ ಸರಕುಗಳ ಸಾಗಣೆ ಶೇ 54ರಷ್ಟು ಹೆಚ್ಚಳವಾಗಿದ್ದು, ₹3.92 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ.
‘ಜಾಗತಿಕ ವ್ಯಾಪಾರ ನೀತಿಗಳ ಅನಿಶ್ಚಿತತೆ, ಬಿಕ್ಕಟ್ಟಿನ ನಡುವೆಯೂ ಏಪ್ರಿಲ್–ಮೇ ತಿಂಗಳ ಅವಧಿಯಲ್ಲಿ ದೇಶದ ರಫ್ತು ಉತ್ತವಾಗಿದೆ’ ಎಂದು ಕೇಂದ್ರ ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬರ್ತ್ವಾಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.