
ನವದೆಹಲಿ: ದೇಶದ ರಫ್ತು ವಹಿವಾಟು ಜಾಸ್ತಿ ಮಾಡಲು ಇ–ವಾಣಿಜ್ಯ ಕ್ಷೇತ್ರದ ರಫ್ತುದಾರರಿಗೆ ಸಾಲದ ನೆರವು ಸೇರಿದಂತೆ ಹಲವು ಕ್ರಮಗಳನ್ನು ಕೇಂದ್ರ ಸರ್ಕಾರವು ಶುಕ್ರವಾರ ಪ್ರಕಟಿಸಿದೆ.
ರಫ್ತು ಉತ್ತೇಜನಕ್ಕೆ ರೂಪಿಸಿರುವ ₹25,060 ಕೋಟಿ ಮೊತ್ತದ ಯೋಜನೆಯ ಭಾಗವಾಗಿ ಈ ಕ್ರಮಗಳನ್ನು ಪ್ರಕಟಿಸಲಾಗಿದೆ. ಯೋಜನೆಯು 10 ಅಂಶಗಳನ್ನು ಹೊಂದಿದ್ದು, ಆ ಪೈಕಿ ಮೂರನ್ನು ಜನವರಿಯಲ್ಲಿ ಜಾರಿಗೆ ತರಲಾಗಿದೆ.
ಡಿಜಿಟಲ್ ವೇದಿಕೆಗಳನ್ನು ಬಳಸಿಕೊಂಡು ಸರಕುಗಳನ್ನು ರಫ್ತು ಮಾಡುವವರಿಗೆ ನೆರವು ನೀಡುವ ಉದ್ದೇಶದಿಂದ ಕೇಂದ್ರ ವಾಣಿಜ್ಯ ಸಚಿವಾಲಯವು ಬಡ್ಡಿ ರಿಯಾಯಿತಿಯ ಸಾಲ ಸೌಲಭ್ಯವನ್ನು ಪ್ರಕಟಿಸಿದೆ. ಅಲ್ಲದೆ, ಇದರ ಜೊತೆಯಲ್ಲೇ ಒಂದಿಷ್ಟು ಪ್ರಮಾಣದ ಸಾಲಕ್ಕೆ ಸರ್ಕಾರದ ಖಾತರಿ ಸಹ ಸಿಗಲಿದೆ.
ಇ–ವಾಣಿಜ್ಯ ಸಾಲ ಸೌಲಭ್ಯದ ಅಡಿಯಲ್ಲಿ ₹50 ಲಕ್ಷದವರೆಗೆ ನೆರವು, ಸಾಲದ ಶೇ 90ರಷ್ಟು ಮೊತ್ತದವರೆಗೆ ಖಾತರಿಯ ಸೌಲಭ್ಯ ಇರಲಿದೆ.
ವಿದೇಶಿ ಮಾರುಕಟ್ಟೆಗಳಲ್ಲಿ ಸರಕುಗಳ ದಾಸ್ತಾನು ಇರಿಸಿಕೊಳ್ಳುವವರಿಗೆ ನೆರವು ನೀಡುವ ಉದ್ದೇಶದಿಂದ ₹5 ಕೋಟಿವರೆಗೆ ಸಾಲ, ಸಾಲದ ಶೇ 75ರಷ್ಟು ಮೊತ್ತದವರೆಗೆ ಖಾತರಿ, ಶೇ 2.75ರಷ್ಟು ಬಡ್ಡಿ ರಿಯಾಯಿತಿ ಸಿಗಲಿದೆ. ಆದರೆ ಬಡ್ಡಿ ರಿಯಾಯಿತಿಯು ವಾರ್ಷಿಕ ₹15 ಲಕ್ಷದ ಮಿತಿಯನ್ನು ಒಳಗೊಂಡಿರುತ್ತದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.