ADVERTISEMENT

ಬೆರಗಿನ ಬೆಳಕು | ಸ್ವಂತ ಯಜಮಾನಿಕೆಯ ಬಾಳು

ಡಾ. ಗುರುರಾಜ ಕರಜಗಿ
Published 16 ನವೆಂಬರ್ 2022, 21:16 IST
Last Updated 16 ನವೆಂಬರ್ 2022, 21:16 IST
   

ಔದಾರ್ಯ ತಾಯಿ ನೀತಿಗೆ, ಧೈರ್ಯವೇ ತಂದೆ |
ಸ್ವಾಧಿಪತ್ಯದೆ ನೀನು ಬಾಳನಾಳುವೊಡೆ ||
ಹೋದುದನು ನೆನೆಯದಿರು, ಬರುವುದಕೆ ಸಿದ್ಧನಿರು
ಆದನಿತು ಸಂತೋಷ – ಮಂಕುತಿಮ್ಮ || 758 ||

ಪದ-ಅರ್ಥ: ಸ್ವಾಧಿಪತ್ಯದೆ= ಸ್ವ್ವ+ಅಧಿಪತ್ಯದೆ, ಬಾಳನಾಳುವೊಡೆ=ಬಾಳನು+ಆಳುವೊಡೆ(ಆಳಿದರೆ), ಆದನಿತು=ಆದ+ಅನಿತು(ಅಷ್ಟು)

ವಾಚ್ಯಾರ್ಥ: ನಿನ್ನ ಇಚ್ಛೆಯಂತೆ, ನಿನ್ನ ಆಡಳಿತದಲ್ಲಿಯೇ ಬದುಕು ಸಾಗಿಸಬೇಕೆಂದಿದ್ದರೆ ಕೆಲವು ನೀತಿಗಳು ಇರಬೇಕು. ಅಂಥ ನೀತಿಗೆ ಔದಾರ್ಯವೇ ತಾಯಿ, ಧೈರ್ಯವೇ ತಂದೆ. ಆಗಿ ಹೋದದ್ದನ್ನು ನೆನೆಯಬೇಡ, ಮುಂದೆ ಆಗುವುದಕ್ಕೆ ಸಿದ್ಧನಿರು. ದೊರೆತದ್ದಕ್ಕೆ ಸಂತೋಷಪಡು.

ADVERTISEMENT

ವಿವರಣೆ: ಸ್ಪಾಧಿಪತ್ಯವೆಂದರೆ ಸ್ವ-ಅಧಿಪತ್ಯ. ಹಾಗೆಂದರೆ ಸ್ವಂತ ಆಡಳಿತ ಅಥವಾ ಸ್ವಂತ ಒಡೆತನ. ಮತ್ತೊಬ್ಬರ ಒಡೆತನದಲ್ಲಿ ಕೆಲಸಮಾಡುವಾಗ ಯಜಮಾನರು ಹೇಳಿದ ಹಾಗೆ ಕಾರ್ಯಮಾಡಲೇಬೇಕಾಗುತ್ತದೆ. ಅದರಲ್ಲಿ ಒಂದು ಅನುಕೂಲವೂ ಇದೆ, ಮತ್ತೊಂದು ಅನಾನುಕೂಲವೂ ಇದೆ.

ಅನುಕೂಲವೆಂದರೆ ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಅವರು ಹೇಗೆ ಹೇಳುತ್ತಾರೋ ಹಾಗೆ ಮಾಡಿದರಾಯಿತು. ಆ ಕಾರ್ಯದ ಯಶಸ್ಸು ಮತ್ತು ವೈಫಲ್ಯ ಅವರಿಗೆ ಸೇರಿದ್ದು. ಕಾರ್ಯಮಾಡಲು ಬೇಕಾಗುವ ಉಪಾಯಗಳು, ಸಾಧನಗಳು ಎಲ್ಲವೂ ಯಜಮಾನರದೇ. ಅನಾನುಕೂಲವೆಂದರೆ, ನಮಗೆ ಒಳ್ಳೆಯ ಉಪಾಯ ಹೊಳೆದಿದ್ದರೂ ಅದನ್ನು ಮಾಡುವಂತಿಲ್ಲ. ಸ್ವಾತಂತ್ರ್ಯವಿಲ್ಲ. ನಾವು ಚೆನ್ನಾಗಿ ಪರಿಶ್ರಮದಿಂದ ದುಡಿದರೂ ಫಲ ನಮಗೆ ದಕ್ಕುವುದಿಲ್ಲ. ಆದರೆ ಒಡೆತನ, ಆಳ್ವಿಕೆ ನಮ್ಮದೇ ಆದಾಗ ನಮಗೆ ತೋಚಿದಂತೆ ಕೆಲಸ ಮಾಡಬಹುದು. ಜವಾಬ್ದಾರಿ ತುಂಬ ಹೆಚ್ಚಾಗುತ್ತದೆ. ಕಾರ್ಯ ನಕ್ಷೆ, ನೀತಿ, ವಿಧಾನಗಳು ಸಂಪೂರ್ಣವಾಗಿ ನಮ್ಮದೇ ಆಗುತ್ತವೆ.

ಕಗ್ಗ ಅದನ್ನು ತಿಳಿಸುತ್ತದೆ. ನಾವು ನಮ್ಮ ಬದುಕನ್ನು ಸಂಪೂರ್ಣವಾಗಿ ನಮ್ಮ ಅಧಿಪತ್ಯದಲ್ಲೇ ನಡೆಸುವುದಾದರೆ ಅದಕ್ಕೊಂದು ನೀತಿ ನಿರ್ದೇಶನವಿರಬೇಕು ಯಾವ ನೀತಿಗಳಿಂದ ಜೀವನ ಹಸನಾದೀತು ಎಂಬುದನ್ನು ಅದು ತೋರಿಸುತ್ತದೆ. ಈ ನೀತಿಗೆ ತಾಯಿ ಔದಾರ್ಯ. ಔದಾರ್ಯವೆಂಬುದು ಮತ್ತೊಬ್ಬರ ಕಷ್ಟಕ್ಕೆ, ನೋವಿಗೆ ತನ್ನ ಆತ್ಮತೃಪ್ತಿಯ ಸ್ವಾರ್ಥವೂ ಇಲ್ಲದೆ ತೋರುವ ಪ್ರತಿಸ್ಪಂದನ.

ಹೀಗೆ ನಿಸ್ವಾರ್ಥವಾದ ಔದಾರ್ಯ ತೋರಲು ಮೊದಲು ಧೈರ್ಯಬೇಕು. ಪರರ ಟೀಕೆಗಳಿಗೆ, ನಿಂದೆಗಳಿಗೆ ಮಣಿಯದ, ಕುಗ್ಗದ ಧೈರ್ಯ, ಔದಾರ್ಯಕ್ಕೆ ಅಡಿಪಾಯ.ಹೆದರುಪುಕ್ಕನಾದವನು ಉದಾರಿಯಾಗಲಾರ. ಆದ್ದರಿಂದ ತನ್ನದೇ ಯಜಮಾನಿಕೆಯಲ್ಲಿ ಜೀವನ ನಡೆಸಬೇಕೆನ್ನುವವನು ಮೊದಲು ಧೈರ್ಯವನ್ನು ಪಡೆದು ಔದಾರ್ಯವನ್ನು ತೋರಬೇಕು. ಕಗ್ಗ ಇನ್ನೊಂದು ನೀತಿಯನ್ನು ಸೂಚಿಸುತ್ತದೆ. ಅದು ವರ್ತಮಾನದಲ್ಲಿ ಬದುಕುವ ರೀತಿ. ಹಿಂದೆ ಆಗಿ ಹೋದದ್ದನ್ನು ನೆನೆಯುತ್ತ ಕುಳಿತರೆ ಯಾವ ಪ್ರಯೋಜನವೂ ಇಲ್ಲ. ಯಾಕೆಂದರೆ ನಾವದನ್ನು ಬದಲಿಸಲಾರೆವು. ಭವಿಷ್ಯದ ಗರ್ಭದಲ್ಲಿ ಏನಿದೆಯೋ ತಿಳಿದಿಲ್ಲ. ಅದಕ್ಕಾಗಿ ವಿಪರೀತವಾದ ಆತಂಕ ಬೇಕಿಲ್ಲ. ಆದ್ದರಿಂದ ಸತ್ತುಹೋದ ಭೂತ ಮತ್ತು ಇನ್ನೂ ಹುಟ್ಟದ ಭವಿಷ್ಯಗಳ ಚಿಂತೆಯಲ್ಲಿ ನಲುಗಿ ಹೋಗುವುದರ ಬದಲು ಇಂದು, ವರ್ತಮಾನದಲ್ಲಿ ದೊರಕಿದ, ನಮ್ಮ ಶಕ್ತಿ, ಪರಿಶ್ರಮಗಳಿಗೆ ದಕ್ಕಿದ ಸಂತೋಷವನ್ನು ಅನುಭವಿಸುವುದು ಬದುಕನ್ನು ಹಗುರಾಗಿಸಿಕೊಳ್ಳುವ ದಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.