ADVERTISEMENT

ಜಮಖಂಡಿ | 'ನೀರಿನ ಮಟ್ಟ ಹೆಚ್ಚಳ: ಮುಂಜಾಗ್ರತೆಗೆ ಸೂಚನೆ'

ನದಿತೀರದ ಗ್ರಾಮಸ್ಥರಿಗೆ ಎಚ್ಚರಿಕೆ: ನೋಡಲ್‌ ಅಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 27 ಮೇ 2025, 16:16 IST
Last Updated 27 ಮೇ 2025, 16:16 IST
ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ
ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ   

ಜಮಖಂಡಿ: ತಾಲ್ಲೂಕಿನಲ್ಲಿ ಎಂಟು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಕೃಷ್ಣಾ ಮತ್ತು ಘಟಪ್ರಭಾ ನದಿಯ ನೀರಿನ ಮಟ್ಟ ಹೆಚ್ಚಾಗಿ, ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ, ಆದ್ದರಿಂದ ನದಿ ಪಕ್ಕದ ಗ್ರಾಮದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ತಿಳಿಸಿದರು.

ಜಮಖಂಡಿ ಹಾಗೂ ರಬಕವಿ-ಬನಹಟ್ಟಿ ತಾಲ್ಲೂಕಿನಲ್ಲಿ ಕೃಷ್ಣಾ ನದಿ ಹಾಗೂ ಮುಧೋಳ ತಾಲ್ಲೂಕಿನಲ್ಲಿ ಘಟಪ್ರಭಾ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಾಗುತ್ತಿದೆ, ಆದ್ದರಿಂದ ನದಿ ಪಕ್ಕದಲ್ಲಿ ಮಕ್ಕಳು ಹೋಗದಂತೆ ನೋಡಿಕೊಳ್ಳಬೇಕು, ಮಹಿಳೆಯರು ಬಟ್ಟೆ ತೊಳೆಯಲು, ಮೀನು ಹಿಡಿಯಲು, ಸ್ನಾನ ಮಾಡಲು, ಜಾನುವಾರ ಮೇಯಿಸುವುದು, ಮೇವು ತರುವುದನ್ನು ಮಾಡದೇ ನದಿ ನೀರಿನಲ್ಲಿ ಇಳಿಯಬಾರದು ಎಂದರು.

ಮೂರ್ನಾಲ್ಕು ತಿಂಗಳಲ್ಲಿ ಮಳೆ ಏರಿಳಿತದಿಂದ ಪ್ರವಾಹ ಬರುವ ಸಾಧ್ಯತೆ ಇರುತ್ತದೆ, ಆದ್ದರಿಂದ ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತದೊಂದಿಗೆ ಸಂಪರ್ಕ ಇರಬೇಕು, ನದಿ ಪಕ್ಕದ ಗ್ರಾಮಗಳಿಗೆ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗುವುದು ಎಂದರು.

ADVERTISEMENT

ಕುರಿಗಾಯಿಗಳು ಹಾಗೂ ಜಾನುವಾರು ಮೇಯಿಸುವವರು ಬಯಲು ಪ್ರದೇಶದಲ್ಲಿರದೆ ಮಳೆ ಹಾಗೂ ಸಿಡಿಲಿನಿಂದ ಹೆಚ್ಚಿನ ಸುರಕ್ಷತೆ ವಹಿಸಬೇಕು, ಮಳೆ ಹಾಗೂ ನದಿಯಿಂದ ಬರುವ ನೀರಿನಿಂದ ಯಾವುದೇ ಪ್ರಾಣಹಾನಿಯಾಗದಂತೆ ಎಚ್ಚರ ವಹಿಸಲು ಸೂಚಿಸಿದರು.

ಈಗ ಮಹಾರಾಷ್ಟ್ರದಿಂದ ಸುಮಾರು 24 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಬಂದಿರುವ ನೀರನ್ನು ಹಿಪ್ಪರಗಿ ಜಲಾಶಯದ ಮೂಲಕ ಹೊರ ಬಿಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.