ADVERTISEMENT

ರೈತರಿಗೆ ಪ್ರಾಮಾಣಿಕವಾಗಿ ಸಹಾಯ ಮಾಡಿ

ಕೃಷಿ ಡಿಪ್ಲೊಮಾ ಪದವಿ ಪ್ರಮಾಣಪತ್ರ ಪ್ರದಾನ ಸಮಾರಂಭ: ಸಂಸದ ಗದ್ದಿಗೌಡರ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 14:07 IST
Last Updated 21 ಜೂನ್ 2025, 14:07 IST
ತೋಟಗಾರಿಕೆ ವಿವಿಯಲ್ಲಿ ಜರುಗಿದ ತರಬೇತಿ ಪಡೆದ ಕೃಷಿ ಪರಿಕರ ಮಾರಾಟಗಾರರಿಗೆ ಪ್ರಮಾಣಪತ್ರ ಪ್ರದಾನ ಮಾಡುವ ಸಮಾರಂಭವನ್ನು ಸಂಸದ ಪಿ.ಸಿ.ಗದ್ದಿಗೌಡರ ಉದ್ಘಾಟಿಸಿದರು.
ತೋಟಗಾರಿಕೆ ವಿವಿಯಲ್ಲಿ ಜರುಗಿದ ತರಬೇತಿ ಪಡೆದ ಕೃಷಿ ಪರಿಕರ ಮಾರಾಟಗಾರರಿಗೆ ಪ್ರಮಾಣಪತ್ರ ಪ್ರದಾನ ಮಾಡುವ ಸಮಾರಂಭವನ್ನು ಸಂಸದ ಪಿ.ಸಿ.ಗದ್ದಿಗೌಡರ ಉದ್ಘಾಟಿಸಿದರು.   

ಬಾಗಲಕೋಟೆ: ‘ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ತಮಗೆ ತರಬೇತಿ ನೀಡಿದ್ದು, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ರೈತರ ಅಭಿವೃದ್ದಿಗೆ ಶ್ರಮಿಸಿ’ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ತೋಟಗಾರಿಕೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸಭಾಂಗಣದಲ್ಲಿ ಭಾರತ ಸರ್ಕಾರದ ಹೈದರಾಬಾದನ ಎಂ.ಎ.ಎನ್.ಎ.ಜಿ.ಇ, ಎಸ್.ಎ.ಎಂ.ಇ.ಟಿಐ, ಧಾರವಾಡ ಕೃಷಿ ವಿಶ್ವವಿದ್ಯಾಲಯ, ಬಾಗಲಕೋಟೆ ತೋಟಗಾರಿಕೆ ವಿಶ್ವ ವಿದ್ಯಾಲಯ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಯೋಗದಲ್ಲಿ ಶನಿವಾರ ನಡೆದ ಕೃಷಿ ಪರಿಕರಗಳ ಮಾರಾಟಗಾರರಿಗೆ ಕೃಷಿ ಡಿಪ್ಲೊಮಾ ಪದವಿ ಪ್ರಮಾಣಪತ್ರ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ರೈತರ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದರೂ ಈತನಕ ರೈತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ರೈತರಿಗೆ ಬೀಜ, ಗೊಬ್ಬರ, ಮಣ್ಣಿನ ಫಲವತ್ತತೆ ಹಾಗೂ ಕಡಿಮೆ ಸಮಯದಲ್ಲಿ ಅಧಿಕ ಇಳುವರಿ ನೀಡುವ ವಿವಿಧ ಮಾದರಿಯ ಬೆಳೆಗಳನ್ನು ಬೆಳೆಯುವ ವಿಧಾನಗಳನ್ನು ರೈತರಿಗೆ ತಿಳಿಸುವ ಕಾರ್ಯವಾಗಬೇಕು’ ಎಂದರು.

ADVERTISEMENT

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ‘ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯಗಳು ವಿವಿಧ ಮಾದರಿಯ ಬೆಳೆಗಳನ್ನು ಸಂಶೋಧಿಸಬೇಕು. ತೋಟಗಾರಿಕೆ ಬೆಳೆಗಳಾದ ಹಣ್ಣು, ಹೂ, ಔಷಧಿಯ ಸಸ್ಯಗಳನ್ನು ಬೆಳೆಯಲು ಜಿಲ್ಲೆಯ ನೆಲ ಉಪಯುಕ್ತವಾಗಿದೆ. ಈಗಾಗಲೇ ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿ ರೈತರೊಬ್ಬರು ಸೇಬು ಹಣ್ಣು ಬೆಳೆದು ತೋರಿಸಿದ್ದಾರೆ. ಆ ಹಿನ್ನೆಲೆಯಲ್ಲಿ ರೈತರಿಗೆ ವಿವಿಧ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು’ ಎಂದು ತಿಳಿಸಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ  ಎಂ.ವಿ.ಮಂಜುನಾಥ ಮಾತನಾಡಿ, ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾನಿಲಯಗಳಲ್ಲಿ ರೈತರಿಗೆ ಉಪಯುಕ್ತವಾಗುವಂತ ತರಬೇತಿಗಳನ್ನು ನೀಡಲಾಗಿದ್ದು, ಅದರಲ್ಲಿ 9,991 ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ರೈತರಿಗೆ ಉಪಯುಕ್ತ ಮಾಹಿತಿ ನೀಡಲು ನಿಯೋಜಿಸಲಾಗಿದೆ. ಇದರಿಂದ 2.5 ಕೋಟಿ ಜನ ರೈತರಿಗೆ ಮುಂಗಾರು ಬೆಳೆಗಳ ಅಭಿಯಾನ ನಡೆಸಲಾಗಿದ್ದು, ಪ್ರತಿ ಹೆಕ್ಟರ್‌ಗೆ ಸರಾಸರಿ ಒಂದು ಕ್ವಿಂಟಲ್‌ನಷ್ಟಾದರೂ ಹೆಚ್ಚಿಸುವ ಕಾರ್ಯವಾಗಬೇಕು ಎಂದರು.

ತರಬೇತಿ ಪಡೆದ ಚಂದ್ರಶೇಖರಗೆ ಚಿನ್ನದ ಪದಕ, ಸವಿತಾ ಕರಬೂರವರ ಅವರಿಗೆ ಬೆಳ್ಳಿ ಪದಕ ಹಾಗೂ ವೆಂಕಟರೆಡ್ಡಿ ಅವರಿಗೆ ಕಂಚಿನ ಪದಕ ವಿತರಿಸಲಾಯಿತು. ಕೃಷಿ ವಿಸ್ತರಣಾ ನಿರ್ದೇಶಕ ವೆಂಕಟೇಶಲು, ಕೃಷಿ ವಿಶೇಷ ಅಧಿಕಾರಿ ಜಾಧವ, ಕೃಷಿ ಉಪನಿರ್ದೇಶಕ ರೂಢಗಿ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.