ADVERTISEMENT

ಮಹಾಲಿಂಗಪುರ ಪುರಸಭೆ: 50 ಹುದ್ದೆ ಖಾಲಿ

ವರ್ಷದಿಂದ ಅನಧಿಕೃತ ಗೈರಾಗಿರುವ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 4:12 IST
Last Updated 19 ಜುಲೈ 2025, 4:12 IST
   

ಮಹಾಲಿಂಗಪುರ: ಪಟ್ಟಣದ ಪುರಸಭೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಹುದ್ದೆಗಳು ಭರ್ತಿ ಆಗದೇ ಇರುವುದರಿಂದ ಸಾರ್ವಜನಿಕರ ಕಾರ್ಯಗಳು ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ.

ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳ ಜನಸಂಖ್ಯೆಗೆ ಅನುಗುಣವಾಗಿ ಒಟ್ಟು 120 ವಿವಿಧ ಹುದ್ದೆಗಳಿಗೆ ಸರ್ಕಾರ ಮಂಜೂರಾತಿ ನೀಡಿದೆ. ಆದರೆ, 70 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 50 ಹುದ್ದೆಗಳು ಖಾಲಿ ಉಳಿದಿವೆ. ಪ್ರಮುಖ ವಿಭಾಗಗಳ ಹುದ್ದೆಗಳು ಖಾಲಿಯಾಗಿರುವುದರಿಂದ ವಾರ್ಡ್‍ಗಳ ಅಭಿವೃದ್ಧಿ ಕುಂಠಿತಗೊಂಡಿದೆ. ಪರಿಸರ ಎಂಜಿನಿಯರ್, ಕಿರಿಯ ಎಂಜಿನಿಯರ್, ಪ್ರಥಮ ದರ್ಜೆ ಸಹಾಯಕರು (2), ಕಿರಿಯ ಆರೋಗ್ಯ ನಿರೀಕ್ಷಕ, ಸಮುದಾಯ ಸಂಘಟಕ ಸೇರಿದಂತೆ ಹಲವು ಹುದ್ದೆಗಳು ಖಾಲಿ ಇವೆ.

48 ಹೊರಗುತ್ತಿಗೆ ನೌಕರರು: ಪುರಸಭೆ ವ್ಯಾಪ್ತಿಯಲ್ಲಿ ಸರ್ಕಾರದ ಮಂಜೂರಾತಿ ಪಡೆದ ಹುದ್ದೆಗಳನ್ನು ಹೊರತುಪಡಿಸಿ 48 ಜನ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಪ್ರಮುಖವಾಗಿ 12 ಜನ ಕಸದ ಗಾಡಿಗಳ ವಾಹನ ಚಾಲಕರು, 6 ಜನ ನೀರು ಸರಬರಾಜು ಆಪರೇಟರ್ ಇದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನದ ಮೇಲೆ ಒಬ್ಬರು ಶೀಘ್ರ ಲಿಪಿಗಾರ, ಗುತ್ತಿಗೆ ಆಧಾರದ ಮೇಲೆ ತಲಾ ಒಬ್ಬರು ಜೂನಿಯರ್ ಪ್ರೊಗ್ರಾಮರ್, ಅಕೌಂಟಂಟ್‌ ಇದ್ದಾರೆ.

ADVERTISEMENT

ಅನಧಿಕೃತ ಗೈರು ಹಾಜರಿ: ಪುರಸಭೆಗೆ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಒಂದು ಹುದ್ದೆ ಮಂಜೂರಾಗಿದೆ. ಆದರೆ, ಆ ಹುದ್ದೆಯಲ್ಲಿದ್ದ ಬಸವರಾಜ ಬಳಿಗಾರ ಎಂಬವರು 2024ರ ಜೂನ್ 10 ರಿಂದ ಅನಧಿಕೃತವಾಗಿ ಗೈರು ಹಾಜರಾಗಿದ್ದಾರೆ. ಈ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮಕ್ಕಾಗಿ ಪ್ರಸ್ತಾವದೊಂದಿಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಕ್ರಮ ಜರುಗಿಸಿಲ್ಲ. ಹುದ್ದೆ ಇದ್ದರೂ ಇಲ್ಲದಂತಾಗಿ ಸಾರ್ವಜನಿಕ ಕೆಲಸಕ್ಕೆ ತೊಂದರೆಯಾಗಿದೆ.

ನಿಯೋಜನೆ ಮೇರೆಗೆ ನೇಮಕ: ಪ್ರಥಮ ದರ್ಜೆ ಸಹಾಯಕರ ಎರಡು ಹುದ್ದೆ ಮಂಜೂರಾಗಿದೆ. ನಿವೃತ್ತಿಯಿಂದಾಗಿ ಖಾಲಿ ಉಳಿದಿದ್ದ ಒಂದು ಹುದ್ದೆಗೆ ಜಮಖಂಡಿ ನಗರಸಭೆಯಿಂದ ನಿಯೋಜನೆ ಮೇರೆಗೆ ಒಬ್ಬರನ್ನು ನೇಮಿಸಲಾಗಿದೆ. ಇನ್ನೊಂದು ಹುದ್ದೆಯಲ್ಲಿದ್ದವರು ವ್ಯವಸ್ಥಾಪಕರಾಗಿ ಬಡ್ತಿ ಹೊಂದಿದ್ದರಿಂದ ಖಾಲಿಯಾಗಿದೆ. ಕಿರಿಯ ಆರೋಗ್ಯ ನಿರೀಕ್ಷಕರ ಎರಡು ಹುದ್ದೆ ಮಂಜೂರಾಗಿದ್ದು, ಈ ಹುದ್ದೆಯಲ್ಲಿದ್ದವರನ್ನು ತೇರದಾಳ ಪುರಸಭೆಗೆ ನಿಯೋಜಿಸಲಾಗಿದೆ. ಈ ನಿಯೋಜನೆಯಿಂದ ಎರಡೂ ಹುದ್ದೆಯೂ ಖಾಲಿಯಾದಂತಾಗಿದೆ. ಹಿರಿಯ ಆರೋಗ್ಯ ನಿರೀಕ್ಷಕ ಒಂದು ಹುದ್ದೆ ಮಂಜೂರಾಗಿದೆ. ಇದು ಖಾಲಿ ಇದ್ದು, ಈ ಹುದ್ದೆಗೆ ರಬಕವಿ-ಬನಹಟ್ಟಿ ನಗರಸಭೆಯಿಂದ ಒಬ್ಬರನ್ನು ನಿಯೋಜಿಸಲಾಗಿದೆ. ಕಂದಾಯ ಸಂಘಟನಾ ಅಧಿಕಾರಿಯ ಒಂದು ಹುದ್ದೆ ಮಂಜೂರಾಗಿದ್ದು, ನಿಧನದಿಂದಾಗಿ ಆ ಹುದ್ದೆ ಖಾಲಿ ಇದೆ.

‘ಪುರಸಭೆಯಲ್ಲಿನ ಅಧಿಕಾರಿಗಳ ಕೊರತೆಯನ್ನು ನೀಗಿಸಬೇಕಾದದ್ದು ಸರ್ಕಾರದ ಕರ್ತವ್ಯ. ಪುರಸಭೆಯಲ್ಲಿ ಮೊದಲೇ ಕೆಲಸಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಸಿಬ್ಬಂದಿ ಕೊರತೆಯಿಂದ ಸಮಯಕ್ಕೆ ಸರಿಯಾಗಿ ಕೆಲಸಗಳು ಆಗುತ್ತಿಲ್ಲ. ಸರ್ಕಾರ ಖಾಲಿ ಇರುವ ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಿಸುವ ಕೆಲಸ ಮಾಡಬೇಕು’ ಎಂದು ಸಾರ್ವಜನಿಕರು ಆಗ್ರಹಿಸುತ್ತಾರೆ.

‘ಎಲ್ಲ ಸಿಬ್ಬಂದಿ ನೇಮಕವಾದರೆ ಸಮರ್ಪಕ ಕೆಲಸ ಸಾಧ್ಯ’

ಸಿಬ್ಬಂದಿ ಕೊರತೆ ಇದೆ. ಇರುವ ಸಿಬ್ಬಂದಿಯಿಂದಲೇ ಸಾರ್ವಜನಿಕರ ಸೇವೆಗೆ ಧಕ್ಕೆ ಬರದಂತೆ ಕೆಲಸ ಮಾಡುತ್ತಿದ್ದೇವೆ. ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ನೇಮಕವಾದರೆ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಎನ್.ಎ. ಲಮಾಣಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.