ADVERTISEMENT

ರಬಕವಿ ಬನಹಟ್ಟಿ: ಉತ್ತಮ ಆದಾಯ ತಂದ ವೀಳ್ಯದೆಲೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 4:45 IST
Last Updated 13 ಜೂನ್ 2025, 4:45 IST
ಬನಹಟ್ಟಿಯ ಜಗದಾಳ ಗ್ರಾಮದ ತಮ್ಮ ಅರ್ಧ ಎಕರೆ ತೋಟದಲ್ಲಿ ವಿಳ್ಯೆದೆಲೆ ಬೆಳೆದಿರುವ ರೈತ ದೇವರಾಜ ರಾಠಿ
ಬನಹಟ್ಟಿಯ ಜಗದಾಳ ಗ್ರಾಮದ ತಮ್ಮ ಅರ್ಧ ಎಕರೆ ತೋಟದಲ್ಲಿ ವಿಳ್ಯೆದೆಲೆ ಬೆಳೆದಿರುವ ರೈತ ದೇವರಾಜ ರಾಠಿ   

ರಬಕವಿ ಬನಹಟ್ಟಿ: ಸ್ಥಳೀಯ ರೈತ ದೇವರಾಜ ರಾಠಿ ತಮ್ಮ ಅರ್ಧ ಎಕರೆ ತೋಟದಲ್ಲಿ ವೀಳ್ಯದೆಲೆ ಬೆಳೆದು ಉತ್ತಮ ಲಾಭ ಪಡೆದಿದ್ದಾರೆ. ದೇವರಾಜ ಕೃಷಿಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಪ್ರತಿ ಬಾರಿಯೂ ಹೊಸತನವನ್ನು ಅಳವಡಿಸಿಕೊಳ್ಳುವುದರ ಜೊತೆಗೆ, ಕೃಷಿಯನ್ನು ಲಾಭದಾಯಕ ಆಗಿಸಿಕೊಂಡಿದ್ದಾರೆ.

ಎರಡೂವರೆ ದಶಕದಿಂದಲೂ ಕೃಷಿಯಲ್ಲಿ ತೊಡಗಿರುವ ದೇವರಾಜ ರಾಠಿ ಒಂದು ಬಾರಿಯೂ ತಾವು ಬೆಳೆದ ಯಾವ ಬೆಳೆಯಿಂದಲೂ ಹಾನಿ ಆಯಿತು ಎಂಬ ಮಾತುಗಳನ್ನಾಡಿಲ್ಲ. ತಾವು ಬೆಳೆಯುವುದರ ಜೊತೆಗೆ ಬೇರೆಯವರಿಗೂ ಮಾರ್ಗದರ್ಶನ ನೀಡುತ್ತಾರೆ.

ಬದನೆ, ಗುಲಾಬಿ, ಸೇವಂತಿಗೆ, ಚೆಂಡು ಹೂ, ಬಾಳೆ, ನುಗ್ಗೆ, ತರಕಾರಿ, ಪಪ್ಪಾಯಿ ಹಣ್ಣು, ಕ್ಯಾಪ್ಸಿಕಮ್ ಸೇರಿದಂತೆ ಬಗೆಬಗೆಯ ಬೆಳೆಗಳನ್ನು ಬೆಳೆದು ಗಮನ ಸೆಳೆದಿದ್ದಾರೆ. ಈಗ ತಮ್ಮ ತೋಟದ ಅರ್ಧ ಎಕರೆಯಲ್ಲಿ ವೀಳ್ಯದೆಲೆ ಬೆಳೆದು, ಅದರಲ್ಲೂ ಯಶಸ್ವಿಯಾಗಿದ್ದಾರೆ.

ADVERTISEMENT

ಕಳೆದ ಜೂನ್‌ನಲ್ಲಿ ಅವರು ವೀಳ್ಯದೆಲೆ ಬಳ್ಳಿ ನಾಟಿ ಮಾಡಿದ್ದರು. ಈವರೆಗೆ ಐದರಿಂದ ಆರು ಬಾರಿ ಕಟಾವು ಮಾಡಿದ್ದಾರೆ. ವೀಳ್ಯದೆಲೆಯ ಬಳ್ಳಿಗೆ ಆಸರೆಯಾಗಿ ನುಗ್ಗೆ ಗಿಡ ಮತ್ತು ಚೊಗಚಿಯ ಗಿಡಗಳನ್ನು ಬೆಳೆದಿದ್ದಾರೆ. ಇವುಗಳಿಂದಲೂ ಸಾಕಷ್ಟು ಆದಾಯ ಪಡೆಯುತ್ತಿದ್ದಾರೆ. ಅಲ್ಲದೆ ಈ ಗಿಡಗಳಿಂದ ಬಳ್ಳಿಗೆ ನೆರಳು ದೊರೆಯುತ್ತದೆ. ಅವುಗಳ ತಪ್ಪಲು ಜಾನುವಾರುಗಳಿಗೆ ಮೇವು ಕೂಡಾ ಆಗುತ್ತವೆ. ನುಗ್ಗೆಕಾಯಿಗಳನ್ನು ಮಾರಾಟ ಮಾಡುತ್ತಿದ್ದಾರೆ.

‘ಒಂದು ಎಕರೆಗೆ ಅಂದಾಜು ₹60 ಸಾವಿರದಿಂದ ₹70 ಸಾವಿರದ ವರೆಗೆ ಖರ್ಚು ಬರುತ್ತದೆ. ಪ್ರತಿ ಇಪ್ಪತ್ತೈದು ದಿನಗಳಿಗೆ ಒಂದು ಬಾರಿ ಎಲೆಯನ್ನು ಕಟಾವು ಮಾಡಲಾಗುವುದು. ಒಂದು ಬಾರಿ ಕಟಾವು ಮಾಡಿದರೆ ಅಂದಾಜು 40ರಿಂದ 50 ಡಾಗುಗಳಷ್ಟು ಎಲೆಗಳು ಸಿಗುತ್ತವೆ’ ಎನ್ನುತ್ತಾರೆ ದೇವರಾಜ ರಾಠಿ.

‘ಸರಿಯಾಗಿ ಮತ್ತು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿದರೆ ವರ್ಷದಲ್ಲಿ ಸತತ ಎಂಟು ತಿಂಗಳು ಕಾಲ ಉತ್ತಮ ಎಲೆಯನ್ನು ಪಡೆಯಬಹುದು. ನಿಯಮಿತವಾಗಿ ಕೊಟ್ಟಿಗೆ ಗೊಬ್ಬರ, ಜೀವಾಮೃತ, ಕುರಿ ಹಿಕ್ಕೆ ಗೊಬ್ಬರ ಮತ್ತು ಹೊಸ ಮಣ್ಣನ್ನು ಹಾಕುವುದರಿಂದ ಉತ್ತಮ ಇಳುವರಿ ಮತ್ತು ದೊಡ್ಡದಾದ ಎಲೆಗಳನ್ನು ಪಡೆಯಬಹುದು’ ಎಂದು ಅವರು ಮಾಹಿತಿ ನೀಡುತ್ತಾರೆ.

‘ಇದುವರೆಗೆ ಆರು ಬಾರಿ ಕಟಾವು ಮಾಡಲಾಗಿದೆ. ಅಂದಾಜು ₹ 3.50 ಲಕ್ಷ ಆದಾಯ ಬಂದಿದೆ. ಮೊದಲ ವರ್ಷದಲ್ಲಿ ಕಟಾವು ವಿಳಂಬವಾಗುತ್ತದೆ ಮತ್ತು ಇಳುವರಿ ಕಡಿಮೆ ಇದ್ದು, ಆದಾಯವೂ ಕಡಿಮೆಯಾಗಿರುತ್ತವೆ. ಎರಡನೆಯ ವರ್ಷದಿಂದ ಬಳ್ಳಿಗಳು ಮರಿ ಒಡೆದು ಬೆಳೆಯಲಾರಂಭಿಸುತ್ತವೆ. ಆಗ ಒಂದು ಎಕರೆಗೆ ₹6 ಲಕ್ಷದಿಂದ ₹7 ಲಕ್ಷದವರೆಗೆ ಆದಾಯ ಪಡೆಯಬಹುದು’ ಎಂದು ದೇವರಾಜ ತಿಳಿಸಿದರು.

ದೇವರಾಜ ಅವರು ತಮ್ಮ ತೋಟದಲ್ಲಿ ಬೆಳೆದ ಎಲೆಗಳನ್ನು ದೂರದ ಬೆಂಗಳೂರು, ಮುಂಬೈ, ಹೈದರಾಬಾದ್, ಕೊಯಮತ್ತೂರು, ಬೆಳಗಾವಿ, ಸೊಲ್ಲಾಪುರ ಸೇರಿದಂತೆ ಸ್ಥಳೀಯ ಮಾರುಕಟ್ಟೆಗೆ ಕೂಡ ಕಳುಹಿಸುತ್ತಾರೆ.

ಎಲೆ ಬಳ್ಳಿಯನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಅಂದಾಜು ಏಳೆಂಟು ವರ್ಷಗಳ ವರೆಗೆ ಜೀವಿತಾವಧಿ ಇರುತ್ತದೆ. ಇದರ ಜೊತೆಗೆ ನುಗ್ಗೆ ಗಿಡಗಳು ಮತ್ತು ಚೊಗಚೆ ಗಿಡಗಳಿಂದಲೂ ಸಾಕಷ್ಟು ಲಾಭವನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ದೇವರಾಜ ರಾಠಿ.

ಒಂದು ಡಾಗ್‌ನಲ್ಲಿ 12 ಸಾವಿರ ಎಲೆಗಳು ಇರುತ್ತವೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಡಾಗ್ ಎಲೆ ₹3500 ರಿಂದ ₹4000ಕ್ಕೆ ಮಾರಾಟವಾಗುತ್ತಿದೆ
ದೇವರಾಜ ರಾಠಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.