ADVERTISEMENT

ನಿಸ್ವಾರ್ಥ ಸೇವೆಯೇ ಸಂಘದ ಕಾರ್ಯಕರ್ತರ ಗುರಿ: ಪೇಜಾವರ ಶ್ರೀ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 16:15 IST
Last Updated 22 ಜೂನ್ 2025, 16:15 IST
ಬಾಗಲಕೋಟೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಪಾಲ್ಗೊಂಡಿದ್ದರು 
ಬಾಗಲಕೋಟೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಪಾಲ್ಗೊಂಡಿದ್ದರು    

ಬಾಗಲಕೋಟೆ: ‘ಸ್ವಯಂ ಸೇವಕರಲ್ಲಿ ಬೆಳೆಸುವ ನಿಸ್ವಾರ್ಥ ಮನೋಭಾವದ ಸಂಸ್ಕಾರದಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇಂದು ಹೆಮ್ಮರವಾಗಿ ಬೆಳೆದಿದೆ’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಮೈದಾನದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆರ್‌ಎಸ್ಎಸ್ ಸಾಂಘಿಕದಲ್ಲಿ ಪಾಲ್ಗೊಂಡು ಪ್ರವಚನ ನೀಡಿದ ಅವರು, ‘ಆರ್.ಎಸ್.ಎಸ್ ಸ್ವಯಂ ಸೇವಕರು ಎಲ್ಲೇ ಆಪತ್ತು ಸಂಭವಿಸಿದರೂ ರಕ್ಷಣಾ ಪಡೆಗಳ ಜೊತೆಗೆ ಕೈಜೋಡಿಸುತ್ತಾರೆ. ಅವರಿಗೆ ದೇಶ ಮೊದಲು ನಂತರ ತಾನು ಎಂಬ ಸಂಸ್ಕಾರವನ್ನು ಸಂಘ ಬಿತ್ತುತ್ತದೆ’ ಎಂದರು.

‘ಭಾರತೀಯ ಇತಿಹಾಸ ತ್ಯಾಗ, ಸಹಬಾಳ್ವೆ ಪ್ರತಿಪಾದಿಸಿದೆ. ಅದಕ್ಕಾಗಿಯೇ ದೇಶದ ಮೇಲೆ ಎಷ್ಟೆಲ್ಲ ದಾಳಿ ನಡೆದರೂ ಸನಾತನ ಧರ್ಮ, ಸಂಸ್ಕೃತಿ ಗಟ್ಟಿಯಾಗಿ ಉಳಿದಿದೆ. ಸಂಘದ ಗೀತೆ ಸ್ವಯಂ ಸೇವಕರಿಗೆ ದೇಶ ಸೇವೆಯ ಕರೆ ನೀಡುತ್ತದೆ. ಸ್ವಯಂ ಸೇವಕರು ಹೆಸರು ಮತ್ತು ಪ್ರಚಾರಕ್ಕಾಗಿ ಕೆಲಸ ಮಾಡುವುದಿಲ್ಲ. ನಿಸ್ವಾರ್ಥ ಸೇವೆಯೇ ಅವರ ಪರಮ ಗುರಿ ಎಂದು ಭಾವಿಸಿ ಸಮಾಜ ಕಾರ್ಯಕ್ಕೆ ಕಂಕಣ ಬದ್ಧರಾಗಿರುತ್ತಾರೆ’ ಎಂದು ಹೇಳಿದರು.

ಜಿಲ್ಲಾ ಸಂಘ ಚಾಲಕ ಚಂದ್ರಶೇಖರ ದೊಡ್ಡಮನಿ, ಅರುಣ ದೇಸಾಯಿ ಮತ್ತಿತರರು ಇದ್ದರು.

ಏಕಾದಶಿ ದಿನವಾದ ಭಾನುವಾರ ಉಡುಪಿ ಪೇಜಾವರ ಸ್ವಾಮೀಜಿ, ನವನಗರದ ಬೃಂದಾವನ ಸೆಕ್ಟರ್‌ನಲ್ಲಿರುವ ಉತ್ತರಾದಿ ಮಠದಲ್ಲಿ ಶ್ರೀರಾಮ–ವಿಠ್ಠಲ ಪೂಜೆ ನೆರವೇರಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಸಂಜೆ ವಿದ್ಯಾಗಿರಿ ವಿಪ್ರ ಮಠದಲ್ಲಿ ನಡೆದ ಸಮಾರಂಭದಲ್ಲಿ ವೇಣುಗೋಪಾಲಾಚಾರ್ಯ ಅಗ್ನಿಹೋತ್ರಿ ಪ್ರವಚನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.