
ಬಸವಣ್ಣ
ಬಾಗಲಕೋಟೆ: ‘ಲೋಕದ ಆಕರ್ಷಣೆಗಳಿಗೆ ಒಳಗಾಗದೇ ಜ್ಞಾನ ವಿಕಾಸದ ಕಡೆಗೆ ಗಮನ ಹರಿಸಬೇಕು’ ಎಂದು ಚಿಕ್ಕಾಲಗುಂಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಕೆ. ಬಂಗಾರಿ ಹೇಳಿದರು.
ತಾಲ್ಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ, ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಳೇಜಿನ ಸಹಯೋಗದಲ್ಲಿ ಸಿದ್ಧಲಿಂಗಪ್ಪ ವಂಕಲಕುಂಟಿ ಇವರ ಸ್ಮರಣಾರ್ಥ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಶಿವಶರಣರ ವಚನಗಳು ಇಂದಿಗೂ ಪ್ರಸ್ತುತ’ ವಿಷಯದ ಕುರಿತು ಮಾತನಾಡಿದರು.
‘ಈ ಭೂಮಿ, ಸೂರ್ಯ, ಚಂದ್ರರಿರುವವರೆಗೆ ವಚನ ಸಾಹಿತ್ಯ ಪ್ರಸ್ತುತವಾಗಿರುತ್ತದೆ. “ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, ಕರಣಂಗಳ ಚೇಷ್ಟೆಗೆ ಮನವೆ ಬೀಜ” ಎಂಬ ಅಕ್ಕಮಹಾದೇವಿಯವರ ವಚನದಿಂದ ಪ್ರೇರಿತರಾಗಿ ವಿದ್ಯಾರ್ಥಿನಿಯರು ಮನಸ್ಸಿನ ಮೇಲೆ ನಿಯಂತ್ರಣ ಹೊಂದಬೇಕು. ಸಾಧನೆಗೆ ವಚನ ಸಾಹಿತ್ಯ ಮಾರ್ಗದರ್ಶಿಯಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಕ್ಕಮಹಾದೇವಿ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಎಸ್. ಜೆ. ಒಡೆಯರ ಮಾತನಾಡಿ, ವಚನ ಸಾಹಿತ್ಯ ಮನಸ್ಸನ್ನು ಸಶಕ್ತಗೊಳಿಸುವ ಸಾಹಿತ್ಯವಾಗಿದೆ. ವಚನ ಸಾಹಿತ್ಯವನ್ನು ಅಭ್ಯಸಿಸುವುದರಿಂದ ಜ್ಞಾನವೃದ್ಧಿಯಾಗಿ, ಜೀವನ ಪರಿವರ್ತನೆಯಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಎ.ಎಸ್. ಪಾವಟೆ ಮಾತನಾಡಿದರು. ದತ್ತಿದಾನಿಗಳಾದ ಅನ್ನಪೂರ್ಣಮ್ಮ ವಂಕಲಕುಂಟಿ, ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಎಸ್.ಎಚ್, ಶೆಟ್ಟರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.