
ಬಳ್ಳಾರಿ:ದೇಶದಲ್ಲಿ ಪ್ರಜಾಸತ್ತಾತ್ಮಕ ಆಶಯಗಳನ್ನು ಎತ್ತಿ ಹಿಡಿಯುತ್ತಲೇ, ಮನುಷ್ಯಪರ ಚಿಂತನೆ, ಸಾಮಾಜಿಕ ಕಾಳಜಿ,ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದ ಶ್ರೇಯಸ್ಸು ‘ಸಮುದಾಯ ಸಾಂಸ್ಕೃತಿಕ ಸಂಘಟನೆ’ಗೆ ಸಲ್ಲುತ್ತದೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಅರವಿಂದ ಪಟೇಲ್ ನುಡಿದರು.
ಬಳ್ಳಾರಿ ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ ) ಕಾಲೇಜಿನ ಸಭಾಂಗಣದಲ್ಲಿ ನಾಟಕ ವಿಭಾಗದಿಂದ ಇತ್ತೀಚೆಗೆ ಆಯೋಜಿಸಿದ್ದ ‘ಜನ ಚಳುವಳಿಗಳ ದನಿಯಾಗಿ ‘ಸಮುದಾಯ’ ಎಂಬ ವಿಶೇಷ ಉಪನ್ಯಾಸ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದಲ್ಲಿ ಉಂಟಾದ ಅರಾಜಕತೆ, ಸ್ವಾತಂತ್ರ್ಯದ ಭ್ರಮನಿರಸನ , ಅಸಮಾನತೆಗಳು ‘ಸಮುದಾಯ’ದ ಹುಟ್ಟಿಗೆ ಕಾರಣವಾದವು. ಹಲವು ಬಗೆಯ ಕ್ಷೇತ್ರದ ಸಮಾನ ಮನಸ್ಸಿನ ಚಿಂತಕರು, ಯುವಜನತೆ ಈ ಸಂಘಟನೆಯನ್ನು ಬಲಪಡಿಸಿ ಜನಮುಖಿಯಾಗಿಸಿದ್ದಾರೆ ’ ಎಂದರು.
ವಿಶೇಷ ಉಪನ್ಯಾಸ ನೀಡಿದ ವಿಎಸ್‌ಕೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಬಿ. ಪೀರ್ ಬಾಷ ‘ಸಮುದಾಯ’ವು ಬಹಳ ಮುಖ್ಯವಾಗಿ ಜನಸಾಮಾನ್ಯರಲ್ಲಿ ಸಾಮಾಜಿಕ, ರಾಜಕೀಯದ ಬಗೆಗೆ ಹೊಸ ಅರಿವನ್ನು ಉಂಟು ಮಾಡಿತು. ನಾಟಕಗಳು ಜನರ ವಾಸ್ತವ ಬದುಕನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಲೇ ಹೊಸ ಕಣ್ಣೋಟವನ್ನು ಕೊಟ್ಟವು’ ಎಂದರು.
ಕಾಲೇಜಿನ ನಾಟಕ ವಿಭಾಗದ ಮುಖ್ಯಸ್ಥ ದಸ್ತಗೀರಸಾಬ್ ದಿನ್ನಿ ‘ಸಮುದಾಯ’ ಸಾಂಸ್ಕೃತಿಕ ಸಂಘಟನೆಯ ಹುಟ್ಟಿಗೆ ಈಗ 50 ರ ಹರೆಯ. ಅದು ಇಟ್ಟ ಹೆಜ್ಜೆ, ತೊಟ್ಟ ರೂಪಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ’ ಎಂದರು.
ಪ್ರಾಂಶುಪಾಲರಾದ ಡಾ. ಜಿ.ಪ್ರಹ್ಲಾದ ಚೌದ್ರಿ ಅಧ್ಯಕ್ಷತೆ ವಹಿಸಿದ್ದರು. ನಾಟಕ ವಿಭಾಗದ ಅತಿಥಿ ಉಪನ್ಯಸಕ ವಿಷ್ಣು ಹಡಪದ, ನೇತಿ ರಘುರಾಮ್, ಲೇಖಕರಾದ ಡಾ. ಶಿವಲಿಂಗಪ್ಪ ಹಂದಿಹಾಳು, ವೀರೇಂದ್ರ ರಾವಿಹಾಳ, ಚಿಂತಕ ದಾದಾ ಕಲಂದರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.