ಸಂಡೂರು : ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಲವಾರು ವರ್ಷಗಳಿಂದ ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡುವ ಪರಿಶಿಷ್ಟ ಬಡ ರೈತರ ಜಮೀನುಗಳಿಗೆ ಪಟ್ಟಾ, ಪಹಣಿ ಸೇರಿದಂತೆ ಇತರೆ ಕಂದಾಯ ದಾಖಲೆಗಳನ್ನು ವಿತರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ಮುಖಂಡರು ತಹಶೀಲ್ದಾರ್ ಅನಿಲ್‍ಕುಮಾರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಸಮಿತಿಯ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ‘ಬಡ ರೈತರು ಹಲವಾರು ವರ್ಷಗಳಿಂದ ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡುತ್ತಿದ್ದು, ಕಂದಾಯ ದಾಖಲೆಗಳಿಲ್ಲದಿರುವುದರಿಂದ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದು, ರೈತರ ಕುಟುಂಬ ಜೀವನದ ನಿರ್ವಹಣೆಗಾಗಿ ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ರೈತರಿಗೆ ಪಟ್ಟಾ, ಪಹಣಿ, ಇತರೆ ದಾಖಲೆಗಳನ್ನು ನೀಡಬೇಕು’ ಎಂದು ಒತ್ತಾಯಿಸಿದರು.
ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು, ಸಂಘಟನೆಯ ಮುಖಂಡರು ತಾಲ್ಲೂಕು ಕಚೇರಿಯ ಆವರಣದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ ಕಂದಾಯ ದಾಖಲೆಗಳನ್ನು ನೀಡುವಂತೆ ಘೋಷಣೆ ಕೂಗಿದರು. ಸ್ಥಳಕ್ಕೆ ತಹಶೀಲ್ದಾರ್ ಅವರು ರೈತರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ತ್ವರಿತವಾಗಿ ಇತ್ಯಾರ್ಥ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.