ADVERTISEMENT

ತೆಕ್ಕಲಕೋಟೆ | ಬಿಸಿಯೂಟ ಅವ್ಯವಸ್ಥೆ: ಪ್ರತಿಭಟನೆ

ಸರ್ಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 2:23 IST
Last Updated 20 ಫೆಬ್ರುವರಿ 2026, 2:23 IST
<div class="paragraphs"><p>ತೆಕ್ಕಲಕೋಟೆ ಪಟ್ಟಣದ ವಡ್ಡರ ಕಟ್ಟೆ ಬಳಿಯ ಸರ್ಕಾರಿ ಮಾದರಿ ಕಿರಿಯ ಪ್ರಾಥಮಿಕ (ಬೋಯಕೇರಿ) ಶಾಲೆಯಲ್ಲಿ ಬಿಸಿಯೂಟದ ಅವ್ಯವಸ್ಥೆ ಕುರಿತು ಪೋಷಕರು ಪ್ರತಿಭಟನೆ ನಡೆಸಿದರು</p></div>

ತೆಕ್ಕಲಕೋಟೆ ಪಟ್ಟಣದ ವಡ್ಡರ ಕಟ್ಟೆ ಬಳಿಯ ಸರ್ಕಾರಿ ಮಾದರಿ ಕಿರಿಯ ಪ್ರಾಥಮಿಕ (ಬೋಯಕೇರಿ) ಶಾಲೆಯಲ್ಲಿ ಬಿಸಿಯೂಟದ ಅವ್ಯವಸ್ಥೆ ಕುರಿತು ಪೋಷಕರು ಪ್ರತಿಭಟನೆ ನಡೆಸಿದರು

   

ತೆಕ್ಕಲಕೋಟೆ: ಪಟ್ಟಣದ ಸರ್ಕಾರಿ ಮಾದರಿ ಕಿರಿಯ ಪ್ರಾಥಮಿಕ (ಬೋಯಕೇರಿ) ಶಾಲೆಗೆ ಗುರುವಾರ ಬೆಳಿಗ್ಗೆ ಭೇಟಿ ನೀಡಿದ ಅಧಿಕಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡು, ಮುಖ್ಯಶಿಕ್ಷಕರ ವಿರುದ್ಧ ಕ್ರಮ ಜರುಗಿಸುವಂತೆ ಪ್ರತಿಭಟನೆ ನಡೆಸಿದರು.

ಬುಧವಾರ ಮಧ್ಯಾಹ್ನದ ಬಿಸಿಯೂಟದ ಸಾಂಬಾರಿನಲ್ಲಿ ಹುಳಗಳು ಇರುವುದನ್ನು ಗಮನಿಸಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರ ಗಮನಕ್ಕೆ ತಂದಿದ್ದರು. ಸಿಆರ್‌ಪಿ ತಿಮ್ಮನಗೌಡ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದರು. ಗುರುವಾರ ಸಿರುಗುಪ್ಪ ತಾಲ್ಲೂಕು ಪಿಎಂ ಪೋಷಣ್ ಸಹಾಯಕ ನಿರ್ದೇಶಕ, ಸಿರುಗುಪ್ಪ ಕ್ಷೇತ್ರ ಸಮನ್ವಯಾಧಿಕಾರಿ, ಬಿಆರ್‌ಪಿ ಹಾಗೂ ಸಿಆರ್‌ಪಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ಈ ಸಂದರ್ಭದಲ್ಲಿ ಪೋಷಕ ಪವಾಡೆಪ್ಪ ಬಾಲಪ್ಪ ಮಾತನಾಡಿ, ‘ಮಕ್ಕಳಿಗೆ ನೀಡುವ ಆಹಾರ ಶುಚಿಯಾಗಿಲ್ಲ, ದನ ತಿನ್ನದ ಇಂತಹ ಹುಳಬಿದ್ದ ಸಾಂಬಾರು ನೀಡಿದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಶಾಲೆಯಲ್ಲಿ 136 ವಿದ್ಯಾರ್ಥಿಗಳಿದ್ದು, ಮಕ್ಕಳಿಗೆ ಪ್ರತಿ ದಿನ ಹಾಲು, ಮೊಟ್ಟೆ ಬಾಳೆಹಣ್ಣು ನೀಡುತ್ತಿಲ್ಲ. ಮುಖ್ಯಶಿಕ್ಷಕ ಶಾಲೆಗೆ ಬರುವುದಿಲ್ಲ’ ಎಂದು ಯುವಕ ಬಿ. ಮಾರುತಿ ಆರೋಪಿಸಿದರು.

ಪಿಎಂ ಪೋಷಣ್ ಸಹಾಯಕ ನಿರ್ದೇಶಕ ಜಾಫರ್ ಷರೀಫ್ ಸ್ಥಳದಲ್ಲಿದ್ದ ಮುಖ್ಯಶಿಕಕ ದುರ್ಗಪ್ಪ ಅವರನ್ನು ತರಾಟೆಗೆ ತೆಗೆದುಕೊಂಡು, ‘ಆಹಾರಧಾನ್ಯಗಳು ಬಂದ 72 ಗಂಟೆಗಳ ಒಳಗಾಗಿ ಸ್ವಚ್ಛಗೊಳಿಸಬೇಕು ಎಂಬ ನಿರ್ದೇಶನ ಏಕೆ ಪಾಲಿಸಿಲ್ಲ’ ಎಂದು ಪ್ರಶ್ನಿಸಿದರು.

ಪರಿಶೀಲನೆ ವೇಳೆಯಲ್ಲಿ ಬೇಳೆ, ಗೋಧಿ ಹಾಗೂ ಅಕ್ಕಿಯಲ್ಲಿ ಹುಳ ಇರುವುದು ಹಾಗೂ ಜನವರಿ ತಿಂಗಳಲ್ಲಿ ದಾಸ್ತಾನು ಬರೆದಿದ್ದು, ಈ ವರೆಗೆ ಯಾವುದೇ ರೀತಿಯ ದಿನವಹಿ ನಿರ್ವಹಿಸದಿರುವುದು ಅಧಿಕಾರಿಗಳ ಗಮನಕ್ಕೆ ಬಂತು.

ಕ್ಷೇತ್ರ ಸಮನ್ವಯಾಧಿಕಾರಿ ತಮ್ಮನಗೌಡ ಪಾಟೀಲ್ ಮಾತನಾಡಿ, ‘ಮುಖ್ಯಶಿಕ್ಷಕರ ಕರ್ತವ್ಯ ಲೋಪ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಬಿಆರ್‌ಪಿ ರುದ್ರವೇಣಿ, ಪೋಷಕರಾದ ಎನ್. ಸುಂಕಪ್ಪ, ರಂಗಪ್ಪ, ಕಾಡಸಿದ್ದ, ಬಸವ, ಗಾದಿಲಿಂಗ, ಮಾರೆಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.