
ಆನೇಕಲ್ ತಾಲ್ಲೂಕಿನ ಹಳೇ ಚಂದಾಪುರದಲ್ಲಿ ಮುಖ್ಯ ರಸ್ತೆಯಲ್ಲಿಯೇ ಕಸ ರಾಶಿ ಬಿದ್ದಿರುವುದು
ಆನೇಕಲ್: ತಾಲ್ಲೂಕಿನ ಹೃದಯ ಭಾಗ ಚಂದಾಪುರದಲ್ಲಿ ಎಲ್ಲೆಂದರಲ್ಲಿ ಹಾಗೂ ಮುಖ್ಯರಸ್ತೆಗಳ ಇಕ್ಕೆಲ್ಲಗಳಲ್ಲಿ ಕಸ ಸುರಿಯುವುದೇ ಚಾಳಿಯಾಗಿ ಪರಿಣಮಿಸಿದ್ದು, ಕಸದ ರಾಶಿ ಬೆಳೆಯುತ್ತಿದೆ. ಇದು ವಿಲೇವಾರಿಗದೆ ಗಲೀಜು ತಾಂಡವವಾಡುತ್ತಿದ್ದು, ಚಂದಾಪುರ ಚೆಂದಕ್ಕೆ ದೃಷ್ಟಿಬೊಟ್ಟು ಇಟ್ಟಂತಿದೆ.
ರಾಷ್ಟ್ರೀಯ ಹೆದ್ದಾರಿ 44ರ ಸರ್ವೀಸ್ ರಸ್ತೆ ಇಕ್ಕೆಲ್ಲಗಳಲ್ಲಿ ರಾಶಿ ರಾಶಿ ಕಸ ಬಿದ್ದಿದೆ. ನಿಗದಿತ ಸಮಯದಲ್ಲಿ ವಿಲೇವಾರಿಯಾಗದೆ ದುರ್ನಾತ ಬೀರುತ್ತಿದೆ. ಜೊತೆಗೆ ಕೊಳಚೆ ನೀರು ಸಹ ರಸ್ತೆಯಲ್ಲೇ ಕೊಳಚೆ ಹರಿಯುತ್ತಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳ ಓಡಾಟಕ್ಕೆ ತೊಂದರೆ ಉಂಟಾಗಿದೆ.
ಚಂದಾಪುರ ಪುರಸಭೆ ವ್ಯಾಪ್ತಿಯ ಆನೇಕಲ್ ಯೋಜನಾ ಪ್ರಾಧಿಕಾರ ಕಚೇರಿಯ ಪಕ್ಕದಲ್ಲಿಯೇ ಕಸದ ರಾಶಿ ಬಿದ್ದಿದೆ. ಇಲ್ಲಿ ಕಸ ಸುರಿಯಬಾರದು ಎಂದು ಪುರಸಭೆಯಿಂದ ಫಲಕ ಹಾಕಿದ್ದರೂ ಯಾವುದೇ ಪ್ರಯೋಜನೆ ಎಂಬುದಕ್ಕೆ ಸಾಕ್ಷಿಯಾಗಿದೆ. ವಾರಕ್ಕೊಮ್ಮೆ ಕಸ ತೆರವುಗೊಳಿಸಿದರೂ ಒಂದೇ ದಿನಗಳಲ್ಲಿ ಗುಡ್ಡೆ ಗಾತ್ರ ಕಸ ಹೆಚ್ಚಾಗುತ್ತಿದೆ.
ಕಸದ ರಾಶಿ ಕಸದಿಂದಾಗಿ ನಾಯಿ, ಹಂದಿ ಮತ್ತು ಕತ್ತೆಗಳ ತಾಣವಾಗಿ ಪರಿಣಮಿಸಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಯಾವಾಗ ಯಾವ ಪ್ರಾಣಿ ಅಡ್ಡ ಬರುತ್ತದೆ ಎಂದು ಸದಾ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಿದೆ. ಇಲ್ಲಿ ಸಂಚಾರಿಸುವ ಸವಾರರಿಗೆ ದುರ್ನಾತಯೊಂದಿಗೆ ಪ್ರಾಣಿಗಳ ಹಾವಳಿ ಜಾಸ್ತಿಯಾಗಿದೆ.
ಕೆರೆ ಕಲುಷಿತ: ಚಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಕಸವನ್ನು ರಾಜಕಾಲುವೆಗಳಿಗೆ ಸುರಿಯಲಾಗುತ್ತಿದೆ. ಇದರಿಂದ ಮಳೆ ಬಂದಾಗ ರಾಜಕಾಲುವೆ ಸರಾಗವಾಗಿ ಹರಿಯದೆ ರಸ್ತೆ ಮತ್ತು ಮನೆಗಳಿಗೆ ನುಗುತ್ತಿದೆ. ಮಳೆ ಬಾರದ ಸಮಯದಲ್ಲಿ ತ್ಯಾಜ್ಯ ಕೊಳೆತು ದ್ರವ ರೂಪದಲ್ಲಿ ಚಂದಾಪುರ ಕೆರೆ ಸೇರುತ್ತಿದ್ದು, ಕೆರೆ ನೀರು ಕಲುಷಿತವಾಗುತ್ತಿದೆ.
ಬುದ್ಧಿ ಕಲಿಯದ ಜನ: ತಪ್ಪು ಮಾಡದವರಿಗೆ ದುರ್ನಾತದ ಶಿಕ್ಷೆ
ಚಂದಾಪುರ ಪುರಸಭೆಯ ವ್ಯಾಪ್ತಿಯ ಹಳೇ ಚಂದಾಪುರದಲ್ಲಿಯು ಕಸದ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇದಕ್ಕೆ ಸ್ಥಳೀಯ ಆಡಳಿತವಲ್ಲ. ಸಾರ್ವಜನಿಕ ನೇರ ಹೊಣೆ ಎನ್ನುತ್ತಾರೆ ಪ್ರಜ್ಞಾವಂತರು.
ಪಟ್ಟಣದಲ್ಲಿ ಸ್ವಚ್ಛತೆ ಕಣ್ಮರೆಯಾಗಿದೆ. ಎಲ್ಲೆಡೆ ಗಲೀಜು, ಕಸದ ರಾಶಿ ಎಂದು ಸ್ಥಳೀಯ ಆಡಳಿತಗಳತ್ತ ಬೊಟ್ಟು ಮಾಡುವ ಜನ ತಾವು ಕನವನ್ನು ಏನು ಮಾಡುತ್ತಿದ್ದೇವೆ ಎಂದು ಆತ್ಮವಾಲೋಕನ ಮಾಡಿಕೊಳ್ಳಬೇಕು. ಸ್ವಚ್ಛತೆ ಬಗ್ಗೆ ಮಾತನಾಡು ಈ ಜನಕ್ಕೆ ನೈರ್ಮಲ್ಯದ ಪ್ರಜ್ಞೆ ಮತ್ತು ಬುದ್ಧಿಯೇ ಇಲ್ಲ ಎನ್ನುವುದಕ್ಕೆ ಪಟ್ಟಣದಲ್ಲಿ ಕಾಣ ಸಗುವ ಕಸದ ಗುಡ್ಡೆಗಳ ಸಾಕ್ಷಿಯಾಗಿದೆ.
ಕಸ ಸಂಗ್ರಹಕ್ಕೆ ಪುರಸಭೆ ವಾಹನಗಳು ಮನೆ ಬಳಿ ಬಂದಾಗ ಕಸ ನೀಡಿದ ಜನ, ತಮಗೆ ಸಮಯ ಸಿಕ್ಕಾಗ ಎಲ್ಲೆಂದರಲ್ಲಿ ಕಸ ಬೀಸಾಡುತ್ತಾರೆ. ಇದರಿಂದ ಪಟ್ಟಣದ ಅಂದವು ಕೆಡುತ್ತದೆ. ಕಾಯಿಲೆಗಳು ಹರಡುತ್ತದೆ. ಕೆಲವು ಜನ ಮಾಡುವ ತಪ್ಪಿಗೆ ತಪ್ಪು ಮಾಡದ ಜನರು ದುರ್ನಾತ ಮತ್ತು ಶಿಕ್ಷೆ ಅನುಭವಿಸುವಂತಾಗಿದೆ.
ವಿಲೇವಾರಿಗೆ ಜಾಗ ಇಲ್ಲ
ಚಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಕಸವನ್ನು ವಿಲೇವಾರಿ ಮಾಡಲು ನಿಗದಿತ ಜಾಗವೇ ಇಲ್ಲದಂತಾಗಿದೆ. ರಾಮಸಾಗರದಲ್ಲಿ ಸರ್ಕಾರಿ ಜಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಯಾಗಬೇಕಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ತಡೆಯಾಗಿದೆ. ಚಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಕಸದ ನಿರ್ವಹಣೆಯೇ ಬಹುದೊಡ್ಡ ಸವಾಲಾಗಿದೆ. ಖಾಸಗಿಯವರ ನೆರವಿನೊಂದಿಗೆ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿದೆ. ಸರ್ಕಾರ ಚಂದಾಪುರ ಪುರಸಭೆಗೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ಮಂಜೂರು ಮಾಡಬೇಕು ಎಂದು ಚಂದಾಪುರದ ವಿಜಯ್ ಕುಮಾರ್ ಒತ್ತಾಯಿಸಿದರು.
ವಾಹನ ಸವಾರರ ಶೋಷಣೆ
ಚಂದಾಪುರ ರಸ್ತೆಗಳಲ್ಲಿನ ಸಂಚಾರ ಗಬ್ಬುನಾತದ ನಡುವೆ ಸಂಚಾರ ಮಾಡಿದಂತೆ. ಕಸವನ್ನು ಎಲ್ಲೆಂದರಲ್ಲಿ ಹಾಕುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಗುಂಡಿ ರಸ್ತೆ ಸಮಸ್ಯೆ ಒಂದೆಡೆಯಾದರೆ ಕಸದ ಸಮಸ್ಯೆ ಮತ್ತೊಂದೆಡೆ. ಇವೆರಡರಿಂದ ಸೇರಿ ವಾಹನ ಸವಾರರ ಮೇಲೆ ಶೋಷಣೆ ನಡೆಯುತ್ತಿದೆ. ರಸ್ತೆ ಇಕ್ಕೆಲ್ಲಗಳಲ್ಲಿ ಕಸ ಸುರಿಯುವುದನ್ನು ತಪ್ಪಿಸಬೇಕು. ಕಸ ತೆರವುಗೊಳಿಸಿ ಆ ಪ್ರದೇಶಗಳಲ್ಲಿ ಕಿರು ಉದ್ಯಾನ ನಿರ್ಮಿಸಬೇಕು
-ನಿಧಿ, ವಿದ್ಯಾರ್ಥಿನಿ
****
ಸಮಸ್ಯೆ ಬಿಗಡಾಯಿಸಲು ಇವರೂ ಕಾರಣ
ನಿವಾಸಿಗಳಲ್ಲದೆ ಹೋಟೆಲ್, ಬೇಕರಿ ಹಾಗೂ ವಿವಿಧ ಮಳಿಗೆಗಳವರು ಎಲ್ಲೆಲಂದರಲ್ಲಿ ಕಸ ಸುರಿಯುತ್ತಿರುವುದರಿಂದ ಕಸದ ಸಮಸ್ಯೆ ದುಪ್ಪಟ್ಟು ಆಗುತ್ತಿದೆ. ಪ್ಲಾಸ್ಟಿಕ್ ಕವರ್, ಕೋಳಿ ತ್ಯಾಜ್ಯ ಸೇರಿದಂತೆ ಕಸವನ್ನು ರಸ್ತೆ ಬದಿಗಳಲ್ಲಿ ಹಾಕಲಾಗುತ್ತಿದೆ.
ಕಸವನ್ನು ನಿಗದಿತ ಜಾಗದಲ್ಲಿ ಹಾಕಬೇಕು. ಆದರೆ ಅಂಗಡಿಗಳು, ಹೋಟೆಲ್‌ಗಳು, ಕಾಫಿ ಟೀ ಅಂಗಡಿಗಳವರು ಕಸವನ್ನು ತಮಗೆ ಇಷ್ಟ ಬಂದ ಜಾಗದಲ್ಲಿ ರಾತ್ರಿ ಸಮಯದಲ್ಲಿ ಸುರಿಯುತ್ತಿದ್ದಾರೆ. ಇದರಿಂದಾಗಿಯೇ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.
ಕಸದಲ್ಲಿ ಆಹಾರ ತಿನ್ನಲು ನಾಯಿಗಳ ದಂಡು ರಸ್ತೆಯ ಇಕ್ಕೆಲ್ಲಗಳಲ್ಲಿ ದಾಂಗುಡಿ ಇಟ್ಟುರುತ್ತವೆ. ಇವುಗಳ ಓಡಾಟದಿಂದ ಬೈಕ್‌ನಲ್ಲಿ ಸಂಚರಿಸುವುದೇ ಕಷ್ಟ. ಕಸವನ್ನು ತೆರವುಗೊಳಿಸಿ, ಕಸ ಹಾಕದಂತೆ ಕ್ರಮ ವಹಿಸಿಸುಮಾ, ಚಂದಾಪುರ ನಿವಾಸಿ
ಚಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ಮಂಜೂರು ಮಾಡಬೇಕು. ವೈಜ್ಞಾನಿಕ ಕಸ ವಿಲೇವಾರಿ ಮಾಡಲು ಅಗತ್ಯ ಕ್ರಮ ವಹಿಸಬೇಕುರೇವಣ್ಣ, ಸ್ಥಳೀಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.