
ಬೆಳಗಾವಿ: ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಬೆಳಗಾವಿ ಜಿಲ್ಲೆಯಿಂದ ಹಲವಾರು ಜನರು ಕ್ರಿಯಾಶೀಲರಾಗಿ ಹೋರಾಡಿದ್ದು, ಗಡಿ ಕನ್ನಡಿಗರು ಈ ನಾಡಿಗೆ ನೀಡಿದ ದೊಡ್ಡ ಕಾಣಿಕೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಬೈಲಹೊಂಗಲದ ಗಂಗಾಧರ ತುರಮುರಿ, ಹುದಲಿಯ ಸ್ವಾತಂತ್ರ‍್ಯಯೋಧರಾದ ಗಂಗಾಧರರಾವ್ ದೇಶಪಾಂಡೆ, ಚಿಂಚಲಿಯ ರಾಷ್ಟ್ರೀಯವಾದಿ ಆರ್.ಎಸ್.ಹುಕ್ಕೇರಿ, ತ್ರಿವಿಧ ದಾಸೋಹಿ ನಾಗನೂರ ಶಿವಬಸವ ಮಹಾಸ್ವಾಮಿಗಳು, ಗೋಕಾವಿ ನಾಡಿನ ಬೆಟಗೇರಿ ಕೃಷ್ಣಶರ್ಮ, ಸವದತ್ತಿಯ ಶಂ.ಬಾ.ಜೋಶಿ, ಅಂಕಲಿಯ ಬಸವಪ್ರಭು ಕೋರೆ, ಅಥಣಿಯ ಬಿ.ಎನ್.ದಾತಾರ, ಕುಂದರನಾಡಿನ ಅಣ್ಣೂ ಗುರೂಜಿ, ದತ್ತೋಪಂತ ಬೆಳವಿ, ಸಂಪಗಾವಿಯ ಚನ್ನಪ್ಪ ವಾಲಿ ಮೊದಲಾದವರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದರು.
ಮದ್ರಾಸ್, ಮುಂಬೈ ಸೇರಿದಂತೆ ವಿವಿಧ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳು ಒಂದಾಗಿ ಅಖಂಡ ಕರ್ನಾಟಕದ ಕನಸು ನನಸಾಗಿ ಇಂದಿಗೆ 69 ವರ್ಷಗಳು ಪೂರ್ಣಗೊಂಡಿದೆ. ಭಾರತಮಾತೆಯ ಮಡಿಲಿನಲ್ಲಿ ನಾವೆಲ್ಲರೂ ಇಂದು 70ನೇ ಕರ್ನಾಟಕ ರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸುತ್ತಿರುವುದು ಕನ್ನಡನಾಡಿನ ಪ್ರಗತಿಗೆ ಸಾಕ್ಷಿಯಾಗಿದೆ.
ಈ ಸಂದರ್ಭದಲ್ಲಿ ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಕೈಗೊಂಡ ಕೆಲವು ಅಭಿವೃದ್ಧಿ ಕೆಲಸಗಳು ಗಮನಾರ್ಹ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಮ್ಮ ಸರ್ಕಾರವು ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸುವುದರ ಜತೆಗೆ ಸರ್ವಜನರ ಹಿತಕ್ಕಾಗಿ “ಪಂಚ ಗ್ಯಾರಂಟಿ” ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ.
ಗಡಿ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರಸ್ತುತ ಹಿಂಗಾರು ಹಂಗಾಮಿಗೆ 4.25 ಲಕ್ಷ ಹೇಕ್ಟರ್ ಬಿತ್ತನೆ ಗುರಿ ನಿಗದಿಪಡಿಸಲಾಗಿದೆ. ಬಿತ್ತನೆಗೆ ಬೇಕಾಗುವ ಸುಮಾರು 26,092 ಕ್ವಿಂಟಲ್ ರಷ್ಟು ವಿವಿಧ ಬಿತ್ತನೆ ಬೀಜಗಳನ್ನು ದಾಸ್ತಾನುಕರಿಸಲಾಗಿದ್ದು, ಇಲ್ಲಿವರೆಗೆ 10,532 ಕ್ವಿಂಟಲ್ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ. ಬಿತ್ತನೆ ಬೀಜದ ಕೊರತೆ ಇರುವುದಿಲ್ಲ. ಸುಮಾರು 94,308 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳನ್ನು ದಾಸ್ತಾನು ಮಾಡಲಾಗಿದ್ದು, ಇಲ್ಲಿಯವರೆಗೆ ಸುಮಾರು 1.82 ಹೆಕ್ಟೇರ್ ಬಿತ್ತನೆ ಆಗಿರುತ್ತದೆ.
ಜಿಲ್ಲೆಯ 9000 ರೈತರಿಗೆ ಒಟ್ಟು 93.51 ಕೋಟಿ ಮೊತ್ತದ ವಿಮೆ ಪರಿಹಾರ ವಿತರಿಸಲಾಗಿದೆ ಎಂದು ಸಚಿವ ವಿವರಿಸಿದರು.
ಗೃಹಲಕ್ಷ್ಮೀ ಯೋಜನೆಯ ಮುಖಾಂತರ ಮನೆ ಯಜಮಾನಿಗೆ ಪ್ರತಿ ತಿಂಗಳು ₹2,000 ನೇರವಾಗಿ ಯಜಮಾನಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಗೃಹಲಕ್ಷ್ಮೀ ಯೋಜನೆಯಡಿ ಬೆಳಗಾವಿ ಜಿಲ್ಲೆಗೆ 11.87 ಲಕ್ಷ ಫಲಾನುಭವಿಗಳ ಗುರಿ ನಿಗದಿ ಪಡಿಸಿದ್ದು, ಇಲ್ಲಿಯವರೆಗೆ 11.76 ಲಕ್ಷ ಫಲಾನುಭವಿಗಳಿಗೆ 22 ಕಂತುಗಳಲ್ಲಿ ಒಟ್ಟು ₹4733 ಕೋಟಿ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಲಾಗಿರುತ್ತದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜನಿಯರಿಂಗ್ ವಿಭಾಗದಿಂದ ₹221.49 ಕೋಟಿ ವೆಚ್ಚದಲ್ಲಿ 45 ಆರೋಗ್ಯ ಇಲಾಖೆಯ ವಿವಿಧ ಹಂತದ ಆಸ್ಪತ್ರೆಗಳ ಕಟ್ಟಡ ನಿರ್ಮಾಣದ ಕಾಮಗಾರಿಗಳು ಪೂರ್ಣಗೊಂಡಿದ್ದು, 19 ಕಾಮಗಾರಿಗಳು ಪ್ರಗತಿಯಲ್ಲಿವೆ.
ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನಾರೋಗ್ಯ, ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ಒಟ್ಟು 6 ಲಕ್ಷ ಫಲಾನುಭವಿಗಳಿಗೆ ₹ 424 ಕೋಟಿ ವಿತರಿಸಲಾಗಿದೆ.
ಬೆಳಗಾವಿ ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ನಗರ ಬಸ್ ನಿಲ್ದಾಣವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಉದ್ಘಾಟಿಸಿ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಪಿಎಂ-ಉಷಾ(ಮೇರು) ಕಟ್ಟಡ ಕಾಮಗಾರಿಗಳು ಮತ್ತು ಹೆದ್ದಾರಿಯಿಂದ ವಿಶ್ವವಿದ್ಯಾನಿಲಯದ ರಸ್ತೆ ಕಾಮಗಾರಿಗೆ ಇತ್ತೀಚೆಗೆ ಶಿಲಾನ್ಯಾಸ ನೆರವೇರಿಸಿರುತ್ತಾರೆ ಎಂದು ಸತೀಶ ತಿಳಿಸಿದರು.
ಜಿಲ್ಲೆಯಲ್ಲಿ 53 ಕ್ಕೂ ಹೆಚ್ಚು ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳು ₹8320 ಕೋಟಿಗಿಂತ ಹೆಚ್ಚು ಬಂಡವಾಳ ಹೂಡಿಕೆ ಮಾಡಿ ಸುಮಾರು 27 ಸಾವಿರ ಜನರಿಗೆ ಉದ್ಯೋಗ ನೀಡಿವೆ.
ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಗೆ 3₹8.95 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಈ ಯೋಜನೆಯಲ್ಲಿ 7 ಕೆರೆಗಳ ಪುನಶ್ಚೇತನ ಹಾಗೂ 7 ಉದ್ಯಾನವನಗಳ ಸುಧಾರಣೆಗೆ ಒತ್ತು ನೀಡಲಾಗುತ್ತಿದೆ.
ಈ ಪೈಕಿ ಕೋಟೆಕೆರೆ ಅಭಿವೃದ್ಧಿ ಹಾಗೂ ಪುನುಶ್ಚೇತನಕ್ಕಾಗಿ ₹9.20 ಕೋಟಿ ರೂ. ಅಂದಾಜು ಮೊತ್ತದ ಕಾಮಗಾರಿ ನಿರ್ವಹಿಸಲು ಒಪ್ಪಿಗೆ ಪತ್ರ ನೀಡಲಾಗಿದ್ದು, ₹5.75 ಕೋಟಿ ಮೊತ್ತದ 7 ಉದ್ಯಾನವನಗಳ ಸುಧಾರಣೆ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ.
ಬೆಳಗಾವಿ ನಗರದಲ್ಲಿ ಒಳಚರಂಡಿ ನಿರ್ಮಾಣ ಹಾಗೂ ಹಾಲಿ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಯೋಜನೆಯನ್ನು ₹45 ಕೋಟಿ ಮೊತ್ತವನ್ನು ಎನ್.ಜಿ.ಟಿ ಹಾಗೂ ಮಹಾನಗರ ಪಾಲಿಕೆಯ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿದೆ.
ಲೋಕೋಪಯೋಗಿ ಇಲಾಖೆಯ ವತಿಯಿಂದ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಗಳು-ಸುಧಾರಣೆಗಾಗಿ ಬೆಳಗಾವಿ ವಿಭಾಗದಡಿ 2024-25ನೇ ಸಾಲಿನಲ್ಲಿ ಒಟ್ಟು 52 ಕಾಮಗಾರಿಗಳನ್ನು ಅಂದಾಜು ಮೊತ್ತ ₹172.64 ಕೋಟಿಗಳ ಅನುದಾನದಡಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಯ ಕಟ್ಟಡಗಳು ಅಡಿ ಒಟ್ಟು 72 ಹೊಸ ಕಾಮಗಾರಿಗಳನ್ನು ಅಂದಾಜು ಮೊತ್ತ ₹53.38 ಕೋಟಿ ಅನುದಾನದಡಿ ಕೈಗೊಳ್ಳಲಾಗಿದೆ.
ಬೆಳಗಾವಿ ತಾಲ್ಲೂಕಿನ ಎನ್.ಹೆಚ್. 4 ಎ (ದೇಸೂರ)ದಿಂದ ಹುದಲಿವರೆಗೆ ಕೂಡುರಸ್ತೆ ಕಿ.ಮೀ 63.34 ರೈಲ್ವೆ ಮೇಲ್ಸೆತುವೆ ನಿರ್ಮಾಣ ಮಾಡುವುದು (ಹುದಲಿ ಗ್ರಾಮದ ಹತ್ತಿರ) ಕಾಮಗಾರಿಯು ₹35.00 ಕೋಟಿ ಅನುದಾನದಡಿ ಮಂಜೂರಾಗಿರುತ್ತದೆ.
ಸದರಿ ಕಾಮಗಾರಿಯ ಟೆಂಡರ ಕರೆಯಲಾಗಿದ್ದು, ಟೆಂಡರ ಪ್ರಕ್ರಿಯೆ ಮುಗಿದ ನಂತರ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗುವುದು.
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 8.13 ಲಕ್ಷ ಉದ್ಯೋಗ ಚೀಟಿಗಳನ್ನು ವಿತರಿಸಲಾಗಿರುತ್ತದೆ. ವಾರ್ಷಿಕ ಭೌತಿಕ ಗುರಿ 115 ಲಕ್ಷಗಳ ಮಾನವ ದಿನಗಳನ್ನು ಗುರಿ ನಿಗದಿಪಡಿಸಲಾಗಿದ್ದು, ಶೇ 30.05 ರಷ್ಟು ಪ್ರಗತಿ ಸಾಧಿಸಲಾಗಿದೆ. ಅದರಂತೆ 1.79 ಲಕ್ಷ ಕುಟುಂಬಗಳಿಗೆ ಹಾಗೂ 2.53 ಲಕ್ಷ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲಾಗಿರುತ್ತದೆ ಎಂದೂ ಲೋಕೋಪಯೋಗಿ ಸಚಿವ ಹೇಳಿದರು.
ಶಾಸಕ ಆಸಿಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ, ನಗರ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಸೇರಿದಂತೆ ಎಲ್ಲ ಅಧಿಕಾರಿಗಳು, ಕನ್ನಡ ಚಳವಳಿಗಾರರು ವೇದಿಕೆ ಮೇಲಿದ್ದರು.
ಪೊಲೀಸ್ ಬ್ಯಾಂಡ್ ಹಾಗೂ ಶಾಲಾ ಮಕ್ಕಳ ಆಕರ್ಷಕ ಪಥಸಂಚಲನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.