
ಸಾಂದರ್ಭಿಕ ಚಿತ್ರ
– ಐಸ್ಟಾಕ್ ಚಿತ್ರ
ಅಥಣಿ: ಸೈಟ್ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ್ದ ಆರೋಪಿಯಿಂದ ದೂರುದಾರನಿಗೆ ಹಣ ಕೊಡಿಸುವಲ್ಲಿ ಸಹಾಯ ಮಾಡಿದ್ದ ಅಥಣಿ ಸಿಪಿಐ ಸಂತೋಷ ಹಳ್ಳೂರ ದೂರುದಾರನಿಗೆ ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಲೋಕಾಯುಕ್ತ ಡಿವೈಎಸ್‌ಪಿ ಭತರ ರೆಡ್ಡಿ ನೇತೃತ್ವದ ತಂಡ ಬುಧವಾರ ಅಥಣಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿತು.
ಅಥಣಿ ನಿವಾಸಿ ಮೀರಸಾಬ ಮುಜಾವರ ಲೋಕಾಯುಕ್ತ ಕಚೇರಿಗೆ ಸಿಪಿಐ ಸಂತೋಷ ಹಳ್ಳೂರ ಮೇಲೆ ದೂರು ದಾಖಲಿಸಿದ್ದರು. ಅಥಣಿ ನಿವಾಸಿ ಅನುಪಕುಮಾರ ನಾಯರ ಎಂಬುವರಿಗೆ ಮೀರಸಾಬ ಮುಜಾವರ ಎರಡು ಸೈಟ್ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ₹20 ಲಕ್ಷ ನೀಡಿದ್ದರು.
2 ಸೈಟ್ ಕೊಡಿಸುವುದಾಗಿ ಹೇಳಿ ಅನುಪಕುಮಾರ ಹಣ ಪಡೆದಿದ್ದರು. ಅವಧಿ ಮುಗಿದರೂ ಸೈಟ್ ಕೊಡಿಸದೇ, ಹಣವೂ ಮರಳಿಸದೇ ಸತಾಯಿಸುತ್ತಿದ್ದಾಗ, ಅನುಪಕುಮಾರ ಅವರಿಂದ ಮೀರಸಾಬ ಅವರಿಗೆ ಎಲ್ಲಾ ಹಣವನ್ನ ಮರಳಿ ಕೊಡಿಸುವಲ್ಲಿ ಸಿಪಿಐ ಸಂತೋಷ ಹಳ್ಳೂರ ಸಹಾಯ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ₹1 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ ಮೀರಸಾಬ ಆಡಿಯೊವೊಂದರ ಆಧಾರದ ಮೇಲೆ ದೂರು ದಾಖಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.