
ಬೈಲಹೊಂಗಲ: ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳ ಅಭಿವೃದ್ಧಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಚನ್ನಮ್ಮನ ಕಿತ್ತೂರು ಉತ್ಸವದೊಳಗೆ ಉದ್ಘಾಟಿಸಬೇಕು ಹಾಗೂ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಣೆ ಮಾಡಬೇಕು ಮತ್ತು ದ್ವಿಶತಮಾನೋತ್ಸವ ಕಿತ್ತೂರು ಉತ್ಸವ-2025ರ ಅಂಗವಾಗಿ ಬೈಲಹೊಂಗಲದಲ್ಲಿಯೂ ಕಾರ್ಯಕ್ರಮ ನಡೆಸಬೇಕೆಂದು ಆಗ್ರಹಿಸಿ ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ ನೇತೃತ್ವದಲ್ಲಿ ಪುರಸಭೆ ಸದಸ್ಯರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪವಿಭಾಗಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.
‘ಕಿತ್ತೂರು ಉತ್ಸವಕ್ಕೂ ಮೊದಲು ತೆರೆಯಲಿ ಮುಸುಕು’ ಎಂಬ ಶೀರ್ಷಿಕೆ ಅಡಿಯಲ್ಲಿ ಅ.15ರಂದು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟಗೊಂಡ ವಿಶೇಷ ವರದಿಗೆ ಜಾಗೃತಗೊಂಡ ಜನಪ್ರತಿನಿಧಿಗಳು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ನಾಗರಿಕರು ಸರ್ಕಾರಕ್ಕೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ ನೇತೃತ್ವವಹಿಸಿ ಮಾತನಾಡಿ, ‘ಚನ್ನಮ್ಮನ ಸಮಾಧಿ ಸ್ಥಳದಲ್ಲಿ ಕಿತ್ತೂರು ಪ್ರಾಧಿಕಾರ ಇಲಾಖೆಯ ಕೆಆರ್‌ಐಡಿಎಲ್ ವತಿಯಿಂದ ₹4.5 ಕೋಟಿ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಚನ್ನಮ್ಮನ ಸಮಾಧಿ ಸ್ಥಳದ ಸುತ್ತಮುತ್ತಲಿನ ವಿನ್ಯಾಸ, ಉದ್ಯಾನ, ಕಿತ್ತೂರು ಸಂಸ್ಥಾನದ ಸಮಗ್ರ ಇತಿಹಾಸ ಸಾರುವ ರೂಪಕಗಳನ್ನು ಅಳವಡಿಸಲಾಗಿದೆ. ಗ್ಲಾಸ್‍ಹೌಸ್, ವಸ್ತು ಸಂಗ್ರಹಾಲಯ, ವಿದ್ಯುತ್ ದ್ವೀಪಗಳು ಹೀಗೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಒಂದು ವರ್ಷದಿಂದ ನಡೆದಿವೆ. ಸ್ವಾತಂತ್ರ್ಯ ಹೋರಾಟಗಾರರು, ಸಾರ್ವಜನಿಕರು, ರೈತರು ವೀರರಾಣಿ ಕಿತ್ತೂರು ಚನ್ನಮ್ಮನ ಅಭಿಮಾನಿಗಳು, ಸುತ್ತಮುತ್ತಲಿನ ಸಾರ್ವಜನಿಕರು ಮತ್ತು ಪ್ರವಾಸಿಗರು ಇದೇ ತಿಂಗಳು ನಡೆಯುವ ಕಿತ್ತೂರು ಉತ್ಸವದೊಳಗೆ ಕಿತ್ತೂರು ಚನ್ನಮ್ಮ ಸಮಾಧಿ ಸ್ಥಳ, ರೂಪಕಗಳ ವೀಕ್ಷಣೆಗೆ ಅವಕಾಶ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಕೂಡಲೇ ಅಧಿಕಾರಿಗಳು, ಶಾಸಕರು ಸ್ಪಂದಿಸಿ ಚನ್ನಮ್ಮನ ಸಮಾಧಿ ಸ್ಥಳ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಬೇಕು’ ಎಂದು ಒತ್ತಾಯಿಸಿದರು.
ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ ಮಾತನಾಡಿ, ‘ಕಿತ್ತೂರು ಉತ್ಸವ-2025ನ್ನು ಅ.23ರಿಂದ 25ರ ವರೆಗೆ ಕಿತ್ತೂರಲ್ಲಿ ಅತೀ ವಿಜೃಂಭನೆಯಿಂದ ಆಚರಿಸಲಾಗುತ್ತಿದೆ. ಸಮಯದ ಅಭಾವ ಇರುವುದರಿಂದ ಮತ್ತು ಬೈಲಹೊಂಗಲದ ಸಾರ್ವಜನಿಕರು ಪ್ರತಿಭಟನೆ ಹಮ್ಮಿಕೊಳ್ಳುವ ಮುಂಚಿತವಾಗಿಯೇ ಐಕ್ಯಸ್ಥಳದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಬೈಲಹೊಂಲದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಉತ್ಸವ ನಡೆಸಬೇಕು’ ಎಂದು ಆಗ್ರಹಿಸಿದರು.
ನೇಗಿಲಯೋಗಿ ರೈತ ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಬೋಳನ್ನವರ, ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಪ್ರವೀಣ ಮೂಗಿ, ನಿವೃತ್ತ ನೌಕರರ ಸಂಘದ ಮಹಾಬಳೇಶ್ವರ ಬೋಳನ್ನವರ, ಪುರಸಭೆ ಉಪಾಧ್ಯಕ್ಷ ಬುಡ್ಡೇಸಾಬ ಶೀರಸಂಗಿ, ಸದಸ್ಯರಾದ ಅರ್ಜುನ ಕಲಕುಟಕರ, ಪ್ರಕಾಶ ಕೊಟಬಾಗಿ, ಮಲ್ಲೇಶಪ್ಪ ಹೊಸಮನಿ, ರೈತ ಸಂಘದ ಮುಖಂಡ ಮಲ್ಲಿಕಾರ್ಜುನ ಹುಂಬಿ, ರಾಜು ಸೊಗಲ, ಶಿವಾನಂದ ಬಡ್ಡಿಮನಿ, ಅದೃಶ್ಯಪ್ಪ ಹುಚ್ಚನ್ನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.