ADVERTISEMENT

ಮಕ್ಕಳ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಸಹಕಾರಿ: ಶಾಸಕ ಲಕ್ಷ್ಮಣ ಸವದಿ

ತಾಲ್ಲೂಕುಮಟ್ಟದ ಪ್ರತಿಭಾ ಕಾರಂಜಿ: ಶಾಸಕ ಲಕ್ಷ್ಮಣ ಸವದಿ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 2:15 IST
Last Updated 8 ಡಿಸೆಂಬರ್ 2025, 2:15 IST
ಅಥಣಿಯಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಸಕ ಲಕ್ಷ್ಮಣ ಸವದಿ ಉದ್ಘಾಟಿಸಿದರು
ಅಥಣಿಯಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಸಕ ಲಕ್ಷ್ಮಣ ಸವದಿ ಉದ್ಘಾಟಿಸಿದರು   

ಅಥಣಿ: ‘ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿ, ಕಲೋತ್ಸವ ಸಹಕಾರಿಯಾಗಿವೆ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ಪಟ್ಟಣದ ರಾಯಲ್ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಇದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕತೆ, ಆತ್ಮವಿಶ್ವಾಸ ಬೆಳೆಯುತ್ತದೆ ಮತ್ತು ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.

‘ನಮ್ಮ ತಾಲೂಕಿನಲ್ಲಿ 9 ಪ್ರೌಢ ಶಾಲೆ ಮಂಜೂರು ಮಾಡಿದ್ದೇವೆ. ಪ್ರತಿ ಶಾಲೆಗೆ ಎರಡು ಕೋಣೆಗಳು ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಸತ್ತಿ, ಕೋಹಳ್ಳಿ, ಕೊಕಟನೂರ ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಪ್ರಾರಂಭವಾಗುತ್ತಿದೆ. ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಜಾರಿಗೆ ತರಬೇಕು. ತಾಲೂಕಿನಲ್ಲಿ ಕೇಂದ್ರೀಯ ಶಾಲೆ, ಅಲ್ಪ ಸಂಖ್ಯಾತ ಮಕ್ಕಳಿಗೆ ಮೊರಾರ್ಜಿ ದೇಸಾಯಿ ಶಾಲೆ, ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ಮಂಜೂರು ಮಾಡಿದ್ದೇವೆ. ನಮ್ಮ ಅಭಿವೃದ್ಧಿ ಕಂಡು ಜತ್ ತಾಲ್ಲೂಕು ಕರ್ನಾಟಕ ಸೇರ್ಪಡೆಗೆ ಠರಾವು ಪಾಸ್ ಮಾಡಿದ್ದಾರೆ.  ಅಥಣಿ ಪುರಸಭೆಯನ್ನು ಬರುವ ಅಧಿವೇಶನದಲ್ಲಿ ನಗರಸಭೆಯನ್ನಾಗಿ ಪರಿವರ್ತನೆ ಮಾಡುವ ಕುರಿತು ನಿರ್ಣಯ ಕೈಗೊಳ್ಳಲಿದ್ದೇವೆ’ ಎಂದು ಹೇಳಿದರು.

ADVERTISEMENT

ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ ಮಾತನಾಡಿ, ‘ಪ್ರತಿಭಾ ಕಾರಂಜಿ ಮಗುವಿನ ಸರ್ವಂಗಿಣ ಪ್ರಗತಿ ಜೊತೆಗೆ ವಿವಿಧ ಸಾಂಸ್ಕೃತಿಕ ಪ್ರತಿಭೆ ಹೊರ ಹಾಕುವ ಜೊತೆಗೆ ಮುಂಬರುವ ದಿನಗಳಲ್ಲಿ ಉನ್ನತ ಸ್ಥಾನ ಪಡೆಯಲು ಸಹಕಾರಿಯಾಗಲಿದೆ’ ಎಂದು ತಿಳಿಸಿದರು. 

ವಿದ್ಯಾವರ್ಧಕ ಸಂಸ್ಥೆ ಅಧ್ಯಕ್ಷ ಶಿವಶಂಕರ ಹಂಜಿ ಮಾತನಾಡಿ, ‘ಮಕ್ಕಳ ಸರ್ವಾಂಗೀಣ ಪ್ರಗತಿಗೆ ಶಿಕ್ಷಕರ ಕೊಡುಗೆ ಅಪಾರ. ಮಕ್ಕಳ ಅಭಿವೃದ್ಧಿಗೆ ಕಲೆ, ಸಂಸ್ಕೃತಿ ಸಹಕಾರಿ, ಮೊಬೈಲ್‌ನಿಂದ ದೂರವಿದ್ದು ಮಕ್ಕಳು ಅಧ್ಯಯನ ಮಾಡಬೇಕು. ತಾಲ್ಲೂಕಿನ 24 ಕ್ಲಸ್ಟರ್ ವಿಜೇತ ಮಕ್ಕಳು ಪಾಲ್ಗೊಳ್ಳಲಿದ್ದಾರೆ ಎಂದರು.

ರಾಯಲ್ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ಎಂ.ಢಾಂಗೆ, ಶಿವಶಂಕರ ಹಂಜಿ, ಕಿರಣ ಗಸ್ತಿ, ಎ.ಎಂ.ಖೋಬ್ರಿ, ಜಿ.ಎಂ. ಹಿರೇಮಠ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಸಂಘದ ಅಧ್ಯಕ್ಷರು. ಪದಾಧಿಕಾರಿಗಳು, ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ಎಸ್.ವೈ. ಹುಡೆದಾರ್, ವಿ.ಪಿ.ಮಾಳಿ, ಅಣ್ಣಪ್ಪ ಹೈಬತ್ತಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.