
ಬೆಳಗಾವಿ: ‘ಜ್ಞಾನದ ಹಿಂದಿನ ಆತ್ಮವನ್ನು ನಾವು ಕಳೆದುಕೊಂಡರೆ ಜ್ಞಾನಕ್ಕೆ ಅರ್ಥ ಬರುವುದಿಲ್ಲ. ಇಂದಿನ ಶಿಕ್ಷಣ ಪದ್ಧತಿ ಕೇವಲ ಶಿಕ್ಷಣ ಕಲಿಸುತ್ತಿದೆ. ಆತ್ಮಾಜ್ಞಾನ, ತತ್ವಜ್ಞಾನದ ಕೊರತೆ ಕಾಡುತ್ತಿದೆ. ಇದೇ ಕಾರಣಕ್ಕೆ ಸುಶಿಕ್ಷಿತರೇ ಹೆಚ್ಚಾಗಿ ಸಮಾಜ ಘಾತಕ ಕೃತ್ಯಗಳಲ್ಲಿ ತೊಡಗಿದ್ದಾರೆ’ ಎಂದು ಹೈದರಾಬಾದ್‌ನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಬೋಧಮಯಾನಂದ ಮಹಾರಾಜ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ (ಕೆಎಲ್‌ಇ)ಯಲ್ಲಿ ಗುರುವಾರ 110ನೇ ಸಂಸ್ಥಾಪನಾ ದಿನಾಚರಣೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ಚನ ನೀಡಿದರು.
‘ಇಸ್ರೊದ ವಿಜ್ಞಾನಿಗಳು ಚಂದ್ರ ಲೋಕಕ್ಕೆ ನೆಗೆದು ತೋರಿಸಿದರು. ಅದೇ ದಿನ ಬೆಂಗಳೂರಿನ ಖ್ಯಾತ ವೈದ್ಯನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿದ್ದ, ಹೈದರಾಬಾದ್‌ನಲ್ಲಿ ಬಾಲಕಿಯ ಅತ್ಯಾಚಾರ ನಡೆದಿತ್ತು. ದೆಹಲಿಯಲ್ಲಿ ಈಗ ಸಂಭವಿಸಿದ ಸ್ಫೋಟಗಳಲ್ಲಿ ವೈದ್ಯರೂ ಸೇರಿದ್ದಾರೆ. ಹಾಗಿದ್ದರೆ ಇನ್ನತ ಶಿಕ್ಷಣದ ಫಲವೇನು ಎಂದು ನಾವು ಪ್ರಶ್ನಿಸಿಕೊಳ್ಳಬೇಕು. ತಾತ್ವಿಕ ಶಿಕ್ಷಣದಿಂದ ವಿಮುಖರಾದರೆ ಏನೂ ಪ್ರಯೋಜನವಿಲ್ಲ’ ಎಂದರು.
‘ಈ ವಿಚಾರದಲ್ಲಿ ಕೆಎಲ್‌ಇ ಸಂಸ್ಥೆ ತನ್ನ ಧೀಮಂತಿಗೆ ಉಳಿಸಿಕೊಂಡಿದೆ. ಸಪ್ತರ್ಷಿಗಳು ಸ್ಥಾಪಿಸಿದ ಸಂಸ್ಥೆ ಮೌಲ್ಯಗಳನ್ನು ಬಿತ್ತುತ್ತ ಬಂದ ಕಾರಣ ಇಷ್ಟು ವರ್ಷ ಮುಂದುವರಿದಿದೆ. ರಾಷ್ಟ್ರಕ್ಕೆ ಪ್ರಬಲವಾದ ಮಾನವ ಸಂಪನ್ಮೂಲ ಕೊಟ್ಟಿದ್ದು ಹೆಗ್ಗಳಿಕೆ’ ಎಂದರು.
‘ಶುದ್ಧ ಜ್ಞಾನದ ಅವಶ್ಯಕತೆಯನ್ನು ಸ್ವಾಮಿ ವಿವೇಕಾನಂದರು ಎತ್ತಿ ತೋರಿಸಿದ್ದಾರೆ. ರಾಷ್ಟ್ರದ ಮೇಲೆ ಪ್ರೇಮ, ನಮ್ಮ ಸಂಸ್ಕೃತಿ ಮೇಲೆ ಪ್ರೀತಿ ಇರಬೇಕು. ಇಲ್ಲದೇ ಹೋದರೆ ಜ್ಞಾನವು ಕೆಟ್ಟದ್ದಕ್ಕೆ ಅಥವಾ ಸ್ವಾರ್ಥಕ್ಕೆ ಮಾತ್ರ ಬಳಕೆಯಾಗುವ ಆತಂಕವಿದೆ. ಈ ದೃಷ್ಟಿಯಲ್ಲಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು ಸವೆಸಿದ ಹಾದಿ ಗಮನಾರ್ಹ’ ಎಂದರು.
ಸಂಸ್ಥೆಯ ಅಧ್ಯಕ್ಷ, ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷೀಯ ಭಾಷಣ ಮಾಡಿದರು. ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ, ಆಜೀವ ಸದಸ್ಯ ಮಂಡಳಿಯ ಕಾರ್ಯಧ್ಯಕ್ಷೆ ಡಾ.ದೀಪಾ ಮೆಟಗುಡ್ಡ ವೇದಿಕೆ ಮೇಲಿದ್ದರು.
ರಾಜ್ಯ,ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಸಂಸ್ಥೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳನ್ನು, ವೈದ್ಯರನ್ನು, ಶಿಕ್ಷಕರನ್ನು, ನರ್ಸಿಂಗ್ ಸಿಬ್ಬಂದಿ ವರ್ಗದವರನ್ನ ಸತ್ಕರಿಸಲಾಯಿತು. 66 ಚಿನ್ನ, 49 ಬೆಳ್ಳಿ ಪದಕಗಳನ್ನು ವಿತರಿಸಲಾಯಿತು. ಡಾ.ನೇಹಾ ದಡೇದ, ಡಾ.ಮಹೇಶ ಗುರನಗೌಡರ, ಡಾ.ಆದಿತ್ಯ ಆಚಾರ್ಯ ನಿರೂಪಿಸಿದರು. ಡಾ.ದೀಪಾ ಮೆಡಗುಡ್ಡ ವಂದಿಸಿದರು.
ಇಂದಿನ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಹೊಸದೇನಲ್ಲ. ನಮ್ಮ ದ್ವಾಪರಯುಗದಲ್ಲಿ ಬರುವ ಬ್ರಹ್ಮಾಸ್ತ್ರವೇ ಎಐ ಕಲ್ಪನೆ. ಅತ್ಯಾಧುನಿ ತಂತ್ರಜ್ಞಾನದ ಕುರುಹು ಎಲ್ಲವೂ ನಮ್ಮ ಮಹಾಕಾವ್ಯಗಳಲ್ಲಿದೆಸ್ವಾಮಿ ಬೋಧಮಯಾನಂದ ಮಹಾರಾಜ ಅಧ್ಯಕ್ಷ ರಾಮಕೃಷ್ಣ ಮಠ ಹೈದರಾಬಾದ್
ಕೆಎಲ್‌ಇ ಸಂಸ್ಥೆಯು ಬೆಳಗಾವಿ ಹುಬ್ಬಳ್ಳಿ ಸೇರಿ ಹಲವು ಕಡೆ ವೈದ್ಯಕೀಯ ಕಾಲೇಜು ಆಸ್ಪತ್ರೆ ತೆರೆದಿದೆ. 5000 ಬೆಡ್‌ಗಳಿಗೂ ಹೆಚ್ಚಿನ ಆಸ್ಪತ್ರೆ ತೆರೆದ ಕೀರ್ತಿ ಈ ಸಂಸ್ಥೆಗೆ ಮಾತ್ರ ಸಲ್ಲುತ್ತದೆಪ್ರಭಾಕರ ಕೋರೆ ಕಾರ್ಯಾಧ್ಯಕ್ಷ ಕೆಎಲ್‌ಇ ಸಂಸ್ಥೆ
ಆಧುನಿಕ ಭಾರತದಲ್ಲಿ ಸರ್ಕಾರಗಳು ಉದ್ಯಮ ಪಾಲುದಾರಿಕೆಯಂತೆ ಶೈಕ್ಷಣಿಕ ಪಾಲುದಾರಿಕೆಗೆ ಮನಸ್ಸು ಮಾಡಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳೂ ಸರ್ಕಾರದ ಪಾಲುದಾರ ಆಗಬೇಕುಡಾ.ಎಂ.ಆರ್. ಜಯರಾಮ್ ಕುಲಪತಿ ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು
ಮುಖ್ಯ ಅತಿಥಿಯಾಗಿದ್ದ ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಆರ್. ಜಯರಾಮ್ ಮಾತನಾಡಿ ‘ದೇಶದ ಮುಂದಿನ ಪೀಳಿಗೆಗೆ ಬೇಕಾದುದು ವಿಜ್ಞಾನ ತಂತ್ರಜ್ಞಾನ ಎಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರ ಕೇಂದ್ರೀಕರಿಸುವ (STEM) ವಿಶ್ವವಿದ್ಯಾಲಯ. ಇದನ್ನು ಸ್ಥಾಪಿಸುವ ಎಲ್ಲ ಅರ್ಹತೆ ನಿಮ್ಮ ಬಳಿ ಇದೆ. ಆದಷ್ಟು ಬೇಗ ಕೆಎಲ್‌ಇ ಸ್ಟೆಮ್ ವಿ.ವಿ ಸ್ಥಾಪನೆಗಾಲಿ’ ಎಂದು ಸಲಹೆ ನೀಡಿದರು. ‘ಈ ಸಂಸ್ಥೆ ವೈದ್ಯಕೀಯ ಎಂಜಿನಿಯರಿಂಗ್ ಕೃಷಿ ಸಾಮಾಜಿಕ ನ್ಯಾಯ ಪರಿಸರ ಹೀಗೆ ಎಲ್ಲ ವಿಭಾಗಗಳಲ್ಲೂ ಶಿಕ್ಷಣ ನೀಡುತ್ತಿದೆ. ಪ್ರಭಾಕರ ಕೋರೆ ಅವರ ದೃರದೃಷ್ಟಿ ಹಾಗೂ ತ್ಯಾಗ ಮನೋಭಾವವೂ ಇದಕ್ಕೆ ಕಾರಣ. ನಾನು ನಿಮ್ಮ ಬೆನ್ನಿಗೆ ನಿಂತಿರುತ್ತೇನೆ. ‘ಸ್ಟೆಮ್’ ವಿ.ವಿ ಸ್ಥಾಪಿಸಲು ಮುನ್ನುಗ್ಗಿ’ ಎಂದು ಹೇಳಿದರು. ‘ದೇಶದ ಇಡೀ ಶಿಕ್ಷಣ ವ್ಯವಸ್ಥೆಯ ಶೇ 70ರಷ್ಟು ಅವಶ್ಯಕತೆಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳೇ ಪೂರೈಸುತ್ತಿವೆ. ಅದರಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ. ಈ ಹೆಸರು ಪಡೆಯಲು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಮೈಸೂರು ವಿಶ್ವವಿದ್ಯಾಲಯ ಬಿಟ್ಟರೆ ಮೂರನೇ ಸ್ಥಾನದಲ್ಲಿ ಕೆಎಲ್‌ಇ ಸಂಸ್ಥೆ ಇದೆ’ ಎಂದರು. ‘ನಾವು ಮುಂದಿನ 30 ವರ್ಷಗಳ ಯುವಜನತೆಗೆ ಏನು ಬೇಕು ಎಂಬುದನ್ನ ಚಿಂತಿಸಬೇಕಿದೆ. ಶಿಕ್ಷಣ ಸಂಸ್ಥೆಯ ಜತೆಗೆ ಉತ್ಪಾದನಾ ಯುಗಕ್ಕೆ ವಿಸ್ತರಣೆ ಆಗಬೇಕಿದೆ’ ಎಂದೂ ಅವರು ಕಿವಿಮಾತು ಹೇಳಿದರು.
‘ಕೆಎಲ್‌ಇ ಸಂಸ್ಥೆಯು ಯಾವುದೇ ಕುಟುಂಬದ ಸ್ವತ್ತಾಗಿಲ್ಲ. ಪ್ರಜಾಪ್ರಭುತ್ವ ಮಾದರಿಯಲ್ಲಿ ಮುನ್ನಡೆದಿದೆ. ಕರ್ನಾಟಕ ಸರ್ಕಾರದಲ್ಲಿ ಈಗ ಇರುವ ಶೇ 50ರಷ್ಟು ಜನಪ್ರತಿನಿಧಿಗಳನ್ನು ನಮ್ಮ ಸಂಸ್ಥೆಯೇ ತಯಾರು ಮಾಡಿದೆ. ರಾಷ್ಟ್ರಕ್ಕೆ ಮೌಲ್ಯಯುತ ನಾಯಕರನ್ನು ನೀಡಿದೆ’ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು. ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಅವರು ‘ಹೆಸರಿನಲ್ಲಿ ಮಾತ್ರ ಲಿಂಗಾಯತ ಎಂದು ಇಡಲಾಗಿದೆ. ಎಲ್ಲ ಜಾತಿ– ಧರ್ಮದವರೂ ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ದೇಶದಲ್ಲಿ ಮೂರನೇ ಖಾಸಗಿ ವೈದ್ಯಕೀಯ ಕಾಲೇಜು ತೆರೆದ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ. ಉತ್ತರ ಕರ್ನಾಟಕದಲ್ಲಿ ಮೊದಲ ಕೃಷಿ ಕಾಲೇಜು ಆರಂಭಿಸುವ ಮೂಲಕ ನಮ್ಮ ಧ್ಯೇಯವನ್ನು ಸ್ಪಷ್ಟಪಡಿಸಿದ್ದೇವೆ’ ಎಂದರು. ‘ಬೆಳಗಾವಿಯಲ್ಲಿ ನೂರು ವರ್ಷಗಳ ಹಿಂದೆ ಬ್ರಿಟಿಷ್ ಅಧಿಕಾರಿಗಳ ಮಕ್ಕಳಿಗಾಗಿ ಸೇಂಟ್‌ಪೌಲ್ಸ್ ಶಾಲೆ ಸರ್ದಾರ್‌ಗಳ ಮಕ್ಕಳಿಗಾಗಿ ಸರ್ದಾರ್ ಹೈಸ್ಕೂಲ್ ಇತ್ತು. ಆದರೆ ಜನ ಸಾಮಾನ್ಯರ ಮಕ್ಕಳಿಗೆ ತಲೆ ಎತ್ತಿದ್ದು ಕೆಎಲ್‌ಇ ಮಾತ್ರ. ಇದನ್ನು ಸ್ಫಾಪಿಸಿದ ಸಪ್ತರ್ಷಿಗಳು ಉನ್ನತ ಶಿಕ್ಷಣ ಪಡೆದಿದ್ದರು. ಬ್ರಿಟಿಷ್ ಸರ್ಕಾರದಲ್ಲಿ ಹುದ್ದೆಗಳನ್ನು ಬಿಟ್ಟು ಆ ಏಳೂ ಶಿಕ್ಷಕರು ಶಿಕ್ಷಣ ಸಂಸ್ಥೆ ಆರಂಭಿಸಿದರು’ ಎಂದು ತಿಳಿಸಿದರು. ‘ನಂತರದ ದಿನಗಳಲ್ಲಿ ದಾನಿಗಳೂ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದರು. ಈಗಲೂ ಎಷ್ಟೋ ಜನ ಸಂಸ್ಥೆಗೆ ದಾನದ ಉಯಿಲು ಬರೆದು ಹೋಗುತ್ತಾರೆ. ಅವರ ಕುಟುಂಬವರು ದಾನ ಕೊಡಲು ಬಂದಾಗಲೇ ನಮಗೆ ತಿಳಿಯುತ್ತದೆ. ನಮಗೇ ಗೊತ್ತಿಲ್ಲದ ಹಾಗೆ ದಾನ ಮಾಡಿದವರೂ ಇಲ್ಲಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.