
ಖಾನಾಪುರ: ದಾಂಡೇಲಿ ಅರಣ್ಯದಿಂದ ಹೊರಬಂದ 15 ಕಾಡಾನೆಗಳ ಒಂದು ತಂಡ ಮತ್ತು ಎರಡು ಒಂಟಿ ಸಲಗಗಳು ತಾಲ್ಲೂಕಿನ ಚುಂಚವಾಡ, ಕರೀಕಟ್ಟಿ, ಘಷ್ಟೊಳ್ಳಿ, ರಾಮಾಪೂರ, ಭೂರಣಕಿ ಗ್ರಾಮಗಳ ಹೊರವಲಯದ ಹೊಲ-ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆಹಾನಿ ಮಾಡುತ್ತಿವೆ ಎಂದು ರೈತರು ದೂರಿದ್ದಾರೆ.
ಮಂಗಳವಾರ ರಾತ್ರಿ 3 ಮರಿಗಳ ಜೊತೆ ಕಾಣಿಸಿಕೊಂಡ 15 ಕಾಡಾನೆಗಳ ಹಿಂಡು ರೈತರ ಜಮೀನುಗಳಿಗೆ ನುಗ್ಗಿ ಬೆಳೆಹಾನಿ ಮಾಡಿವೆ. ಬುಧವಾರ ಮತ್ತು ಗುರುವಾರ ಇದೇ ಭಾಗದಲ್ಲಿ ಎರಡು ಒಂಟಿ ಸಲಗಗಳು ಪ್ರತ್ಯೇಕವಾಗಿ ಕಾಣಿಸಿಕೊಂಡು ರೈತಾಪಿ ಜನರಲ್ಲಿ ಆತಂಕ ಮೂಡಿಸಿವೆ. ಹಾಡುಹಗಲೇ ರೈತರ ಹೊಲಗಳಲ್ಲಿ ಕಾಣಿಸಿಕೊಂಡ ಕಾಡಾನೆಗಳು ಬೆಳೆನಾಶ ಮಾಡುವುದರ ಜೊತೆಯಲ್ಲೇ ಜನವಸತಿ ಪ್ರದೇಶಗಳತ್ತ ನುಗ್ಗಿ ಭಯ ಹುಟ್ಟಿಸುತ್ತಿವೆ. ಕಾಡಾನೆಗಳ ಉಪಟಳ ತಡೆಯಬೇಕು ಎಂದು ಚುಂಚವಾಡ ಹಾಗೂ ಅಕ್ಕಪಕ್ಕದ ಗ್ರಾಮಗಳ ರೈತರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಈ ವರ್ಷದ ಮಳೆಗಾಲದ ಬಳಿಕ ಮೊದಲ ಸಲ ಈ ಭಾಗದ ರೈತರ ಜಮೀನುಗಳಲ್ಲಿ ಆನೆಗಳು ಕಾಣಿಸಿಕೊಂಡು ಆತಂಕ ಸೃಷ್ಟಿಸಿವೆ. ಆನೆ ದಾಳಿಯಿಂದ ಉಂಟಾದ ಬೆಳೆಹಾನಿಗೆ ಸೂಕ್ತ ಪರಿಹಾರ ವಿತರಿಸಬೇಕು ಮತ್ತು ರೈತರ ಬೆಳೆಯನ್ನು ಹಾಳು ಮಾಡುತ್ತಿರುವ ಆನೆಯನ್ನು ಆದಷ್ಟು ಬೇಗ ಮರಳಿ ಅರಣ್ಯಕ್ಕೆ ಸಾಗಿಸುವ ಮೂಲಕ ಆನೆಯ ಹಾವಳಿಯಿಂದ ಬೆಳೆಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಖಾನಾಪುರ ತಾಲ್ಲೂಕಿನ ಗೋಲಿಹಳ್ಳಿ ವಲಯದ ಹಲವು ಗ್ರಾಮಗಳ ಬಳಿ ಕಾಡಾನೆಗಳ ಹಿಂಡು ದಾಖಲಾದ ಬಗ್ಗೆ ಇಲಾಖೆಗೆ ಮಾಹಿತಿ ಬಂದಿದೆ. ಸಾರ್ವಜನಿಕರು ಆನೆಗಳ ಬಳಿ ಹೋಗಬಾರದು ಮತ್ತು ಅವುಗಳನ್ನು ಕೆರಳಿಸಬಾರದು ಎಂದು ಸೂಚಿಸಲಾಗಿದೆ. ಆನೆಗಳನ್ನು ಮರಳಿ ಅರಣ್ಯಕ್ಕೆ ಓಡಿಸುವ ಬಗ್ಗೆ ಮೇಲಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುತ್ತದೆ. ರೈತರ ಬೆಳೆಹಾನಿಗೆ ಇಲಾಖೆಯಿಂದ ಸೂಕ್ತ ಪರಿಹಾರವನ್ನೂ ಒದಗಿಸಲಾಗುತ್ತದೆ. ರೈತರು ಒಂಟಿಯಾಗಿ ಸಂಚರಿಸಬಾರದು ಮತ್ತು ಇಲಾಖೆಯ ಜೊತೆ ಸಹಕರಿಸಬೇಕು ಎಂದು ನಾಗರಗಾಳಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಮಗದುಮ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.