ADVERTISEMENT

ಮುಸ್ಲಿಂ ಮಹಿಳೆಯರು ಅತ್ಯಂತ ದಮನಿತರು

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದರಾಜ್ ಕಳವಳ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 15:54 IST
Last Updated 18 ಜೂನ್ 2025, 15:54 IST
ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಲ್.ಎನ್.ಮುಕುಂದರಾಜ್‌ ಮಾತನಾಡಿದರು
ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಲ್.ಎನ್.ಮುಕುಂದರಾಜ್‌ ಮಾತನಾಡಿದರು   

ಬೆಳಗಾವಿ: ‘ಮಹಿಳಾ ಸಮುದಾಯವೇ ದಮನಿತ. ಅದರಲ್ಲೂ ಮುಸ್ಲಿಂ ಮಹಿಳೆಯರು ಇನ್ನೂ ದಮನಿತರು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ–ಸಾಹಿತ್ಯ ವಿಚಾರ ವೇದಿಕೆ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಾನು ಮುಷ್ತಾಕ್‌ ಮತ್ತು ಸಾ.ರಾ.ಅಬುಬಕ್ಕರ್‌ ಅವರ ಕೃತಿಗಳಲ್ಲಿ ಮುಸ್ಲಿಂ ಮಹಿಳೆಯರ ಸಂಕಟಗಳು ಅನಾವರಣಗೊಂಡಿವೆ. ಶಿಕ್ಷಣದ ಪರಿಣಾಮ ಕಳೆದ 25 ವರ್ಷಗಳಲ್ಲಿ ಮಹಿಳೆಯರು ಉತ್ತಮ ಸ್ಥಾನ ಪಡೆದಿದ್ದಾರೆ. ಇಂದು ಹೆಣ್ಣು ಹುಟ್ಟಿದರೆ ಬೇಸರಿಸಿಕೊಳ್ಳದ ಹೆತ್ತವರಿದ್ದಾರೆ. ಹೆಣ್ಣಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ’ ಎಂದರು.

ADVERTISEMENT

‘ಇಂದು ಮಹಿಳೆಯರು ವಿವಿಧ ರಂಗಗಳಲ್ಲಿ ಉನ್ನತ ಸ್ಥಾನ ಗಳಿಸಲು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವರವಾಗಿವೆ. ಸಂವಿಧಾನ ಇರದಿದ್ದರೆ ಸ್ವಾತಂತ್ರ್ಯ, ಸಮಾನತೆ ಸಿಗುತ್ತಿರಲಿಲ್ಲ. ಬಾನು ಮುಷ್ತಾಕ್‌ ಅವರ ಕತೆಗಳು ಹಾಗೂ ಕುವೆಂಪು ಕೃತಿಗಳನ್ನು ಓದಿದರೆ, ಮಹಿಳೆಯರ ಸಂಕಟಗಳೇನು ಎಂಬುದು ತಿಳಿಯುತ್ತದೆ’ ಎಂದು ತಿಳಿಸಿದರು.

‘ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಎಂಟು ಸಾಹಿತಿಗಳ ಭಾವಚಿತ್ರದ ಜತೆಗೆ, ಇನ್ಮುಂದೆ ಬಾನು ಮುಷ್ತಾಕ್‌ ಅವರ ಚಿತ್ರವೂ ರಾರಾಜಿಸಲಿ’ ಎಂದರು.

ಬೇಡಕಿಹಾಳದ ಕೆಎಂಎಸಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಹೊಂಬಯ್ಯ ಹೊನ್ನಲಗೇರೆ, ‘ಬೂಕರ್‌ ಪ್ರಶಸ್ತಿ ಕನ್ನಡ ಸಾಹಿತ್ಯಕ್ಕೆ ಹೊಸ ನೋಟ ಕೊಟ್ಟಿದೆ. ಬಾನು ಮುಷ್ತಾಕ್‌ ಅವರ ಕತೆಗಳಲ್ಲಿ ಹೆಣ್ಣು ಶೋಷಿತಳಾಗಿ ಅಷ್ಟೇ ಅಲ್ಲ; ಪುರುಷರಿಗೆ ಸರಿಸಮನಾಗಿ ಮಹಿಳೆಯರು ಅಧಿಕಾರ ಹೊಂದಿದ ವಿಚಾರಗಳೂ ಇವೆ’ ಎಂದು ತಿಳಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಮೈತ್ರೇಯಿಣಿ ಗದಿಗೆಪ್ಪಗೌಡರ, ‘ಅಕಾಡೆಮಿಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂಥ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ’ ಎಂದರು.

ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಕೆ.ಆರ್‌.ಸಿದ್ದಗಂಗಮ್ಮ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಎಲ್‌.ಎಸ್‌.ಶಾಸ್ತ್ರಿ, ನಾಗೇಶ ನಾಯಕ ಇತರರಿದ್ದರು. ನಿರ್ಮಲಾ ಬಟ್ಟಲ್‌ ನಿರೂಪಿಸಿದರು.

ಬಾನು ಮುಷ್ತಾಕ್‌ ಅವರ ಕತೆಗಳ ಕುರಿತಾಗಿ ಏರ್ಪಡಿಸಿದ್ದ ವಿಮರ್ಶಾ ಲೇಖನಗಳ ಸ್ಪರ್ಧೆಯಲ್ಲಿ ರೀಟಾ ಬಣಗಾರ ಪ್ರಥಮ, ಪುಷ್ಪಾ ಮುರಗೋಡ ದ್ವಿತೀಯ, ಪದ್ಮಾ ಹೊಸಕೋಟೆ ತೃತೀಯ ಸ್ಥಾನ ಗಳಿಸಿದರು. ಅವರಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.