ADVERTISEMENT

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

ಹಿಡಕಲ್‌ ಜಲಾಶಯದಿಂದ ಹುಬ್ಬಳ್ಳಿ–ಧಾರವಾಡ ಕೈಗಾರಿಕೆಗಳಿಗೆ ನೀರು ಕೊಡುವ ಯೋಜನೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 29 ಮೇ 2025, 14:59 IST
Last Updated 29 ಮೇ 2025, 14:59 IST
ದೀಪಕ ಗುಡಗನಟ್ಟಿ
ದೀಪಕ ಗುಡಗನಟ್ಟಿ   

ಪ್ರಜಾವಾಣಿ ವಾರ್ತೆ

ಬೆಳಗಾವಿ: ‘ಹಿಡಕಲ್‌ ಜಲಾಶಯದಿಂದ ಹುಬ್ಬಳ್ಳಿ– ಧಾರವಾಡ ಕೈಗಾರಿಕೆ ಪ್ರದೇಶಕ್ಕೆ ನೀರು ನೀಡುವ ಕಾಮಗಾರಿ ವಿರೋಧಿಸಿ, ಮೇ 30ರಂದು ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ವತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ’ ಎಂದು ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ‘ನಮ್ಮ ನೀರು ನಮ್ಮ ಹಕ್ಕು’ ಹೋರಾಟ ಮಾಡಿದ್ದರಿಂದ ಹಿಡಕಲ್‌ನಿಂದ ಹುಬ್ಬಳ್ಳಿ–ಧಾರವಾಡ ಕೈಗಾರಿಕೆಗೆ ನೀರು ಸರಬರಾಜು ಮಾಡುವುದಕ್ಕಾಗಿ ಕೈಗೊಂಡ ಪೈಪ್‌ಲೈನ್‌ ಕಾಮಗಾರಿ ಸ್ಥಗಿತವಾಗಿತ್ತು. ಈಗ ಸರ್ಕಾರದಿಂದ ಅನುಮತಿ ಪಡೆದು ಮತ್ತೆ ಕಾಮಗಾರಿ ಆರಂಭಿಸಿದ್ದು ಸರಿಯಲ್ಲ’ ಎಂದರು. 

ADVERTISEMENT

‘ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯದಿಂದ ಹುಬ್ಬಳ್ಳಿ– ಧಾರವಾಡದ ಕೈಗಾರಿಕೆಗಳಿಗೆ ಈಗಾಗಲೇ ನೀರು ಬಿಡಲಾಗುತ್ತಿದೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಈಗ ಹಿಡಕಲ್‌ ಅಣೆಕಟ್ಟೆಯಿಂದಲೂ ಅಲ್ಲಿಗೆ ನೀರು ಬಿಡುತ್ತಿರುವುದಕ್ಕೆ ವಿರೋಧವಿದೆ. ಈ ಕಾಮಗಾರಿಯಿಂದ ಬಾಗಲಕೋಟೆ ಜನರಿಗೂ ತೊಂದರೆಯಾಗಲಿದೆ. ಹಾಗಾಗಿ ಬೆಳಗಾವಿಯೊಂದಿಗೆ ಬಾಗಲಕೋಟೆ ಜಿಲ್ಲೆ ಜನರೂ ಹೋರಾಟಕ್ಕೆ ಕೈಜೋಡಿಸಬೇಕು’ ಎಂದು ಕೋರಿದರು.

‘ಈ ಕಾಮಗಾರಿಯಲ್ಲಿ ಯಾವ ಕಾಣದ ಕೈಗಳು ಕೆಲಸ ಮಾಡುತ್ತಿವೆ ಗೊತ್ತಿಲ್ಲ. ಕದ್ದು ಮುಚ್ಚಿ ಮಾಡುತ್ತಿರುವ ಪೈಪ್‌ಲೈನ್‌ ಕಾಮಗಾರಿ ಅನುಮಾನ ಮೂಡಿಸಿದೆ. ಹಾಗಾಗಿ ಜಿಲ್ಲೆಯ ಎಲ್ಲ ಸಚಿವರು, ಶಾಸಕರು ಮುಂದಾಳತ್ವ ವಹಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ನಿಯೋಗ ಕೊಂಡೊಯ್ದು ಕಾಮಗಾರಿ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

‘ಕೇವಲ ಪ್ರತಿಭಟಿಸುವುದಷ್ಟೇ ಅಲ್ಲ; ಕಾನೂನಾತ್ಮಕ ಹೋರಾಟಕ್ಕೆ ಸಿದ್ಧರಿದ್ದೇವೆ. ಅಗತ್ಯಬಿದ್ದರೆ ಬೆಳಗಾವಿ ಬಂದ್‌ ಕರೆ ಕೊಡುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಖಂಡ ಸುರೇಶ ಗವನ್ನವರ, ‘ಬೆಳಗಾವಿ ಜಿಲ್ಲೆಯಲ್ಲೇ ಜನರಿಗೆ ನೀರಿನ ಅಭಾವವಿದೆ. ಹೀಗಿರುವಾಗ ಹುಬ್ಬಳ್ಳಿ–ಧಾರವಾಡ ಕೈಗಾರಿಕೆಗಳಿಗೆ ನೀರು ಬಿಡುವುದು ತಪ್ಪು. ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಅನಾಹುತಕ್ಕೆ ಅದೇ ಹೊಣೆ’ ಎಂದು ಎಚ್ಚರಿಕೆ ಕೊಟ್ಟರು.

ಗಣೇಶ ರೋಕಡೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.