
ಸವದತ್ತಿಯಲ್ಲಿ ನಡೆದ ಶರಣ ಸಂಗಮದ ಅನುಭಾವದಲ್ಲಿ ಶಾಸಕ ವಿಶ್ವಾಸ್ ವೈದ್ಯ ಹಾಗೂ ವಿ.ಕೆ.ಮಾಮನಿ ಅವರನ್ನು ಸನ್ಮಾನಿಸಲಾಯಿತು
ಸವದತ್ತಿ: ಕೂಡಲ ಸಂಗಮದಲ್ಲಿ ನಡೆಯಲಿರುವ 39ನೇ ಶರಣ ಮೇಳಕ್ಕೆ ತಾಲ್ಲೂಕಿನಿಂದ ತೆರಳುವ ಭಕ್ತರಿಗೆ 50 ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.
ಇಲ್ಲಿನ ಬಂಡಿ ಓಣಿಯ ಬೆಡಸೂರ ಮಠದಲ್ಲಿ ಶುಕ್ರವಾರ ಬಸವ ಭಕ್ತರಿಂದ ನಡೆದ ಶರಣ ಸಂಗಮದ 36ನೇ ಮಾಸಿಕ ಅನುಭಾವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ಲಿಂಗಾಯತ ಸಮುದಾಯ ಸಮ ಸಮಾಜ ನಿರ್ಮಿಸಿದೆ. ಸಾಂಸ್ಕೃತಿಕ ನಾಯಕ ಬಸವಣ್ಣನವರ ಆರಾಧನೆಯನ್ನು ಶರಣ ಸಂಗಮದಿಂದ ನಿರಂತರ ನಡೆಸಿದ್ದು ಶ್ಲಾಘನೀಯ ಎಂದರು.
ಕೂಡಲ ಸಂಗಮದ ಗಂಗಾ ಮಾತಾಜಿ ಮಾತನಾಡಿ, ‘ಬಸವಣ್ಣನವರು ಅಲ್ಲಮಪ್ರಭುದೇವ, ಅಕ್ಕಮಹಾದೇವಿ, ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ ಎಲ್ಲ ಶರಣರನ್ನೊಳಗೊಂಡು ಜಾತಿ ಪಂಥವಿಲ್ಲದೇ ಜಾತ್ಯತೀತ ಸಮಾಜ ನಿರ್ಮಿಸಿದರು. ವಿಶೇಷವಾಗಿ ಸ್ತ್ರೀಯರಿಗೆ, ಹಿಂದುಳಿದವರಿಗೆ ಸಮಾನತೆ ನೀಡಿದರು. ವಚನ ಸಾಹಿತ್ಯದ ಮಹತ್ವ ಅರಿತು ಮಕ್ಕಳಲ್ಲಿಯೂ ಸಾಹಿತ್ಯದ ಆಸಕ್ತಿ ಬೆಳೆಸಿ, ಮಾಸಿಕವಾಗಿ ಬಸವ ತತ್ವವನ್ನು ಜನಮನದಲ್ಲಿ ಬಿತ್ತರಿಸುತ್ತಿರುವ ಶರಣ ಸಂಗಮದ ಕಾರ್ಯ ಅನನ್ಯ’ ಎಂದು ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕವಿ.ಕೆ.ಮಾಮನಿ ಮಾತನಾಡಿ, ‘ಬಸವಾದಿ ಶರಣರ ತತ್ವಾದರ್ಶಗಳು ಇನ್ನೂ ಹೆಚ್ಚು ಬೆಳಗಲಿ’ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಶಾಸಕ ವಿಶ್ವಾಸ್ ವೈದ್ಯ ಹಾಗೂ ವಿ.ಕೆ.ಮಾಮನಿ ಅವರನ್ನು ಸನ್ಮಾನಿಸಲಾಯಿತು.
ಬಸವರಾಜ ಕಪ್ಪಣ್ಣವರ, ನಾಗಪ್ಪ ಪ್ರಭುನವರ, ರಾಜಶೇಖರ ನಿಡವಣಿ, ಶಂಕರ ಹಿಟ್ನಳ್ಳಿ, ಶಿವು ರಾಠೋಡ, ಬಸವರಾಜ ಪುಟ್ಟಿ, ಕಸ್ತೂರಿ ಹೂಲಿ, ಲಕ್ಷ್ಮಿ ಆರಿಬೆಂಚಿ, ಮಹಾದೇವಿ ಕುಂಬಾರ, ಭರಮಣ್ಣ ಅಣ್ಣಿಗೇರಿ, ಚಂದ್ರು ಶಾಮರಾಯನವರ, ರವಿ ಬಾಗೋಡಿ ಹಾಗೂ ಪ್ರಮುಖರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.