ರಾಮದುರ್ಗ: ‘ತಾಲ್ಲೂಕಿನ ಬಹುಗಾತ್ರದ ಸುರೇಬಾನ–ಮನಿಹಾಳ ಗ್ರಾಮಗಳನ್ನು ಒಟ್ಟುಗೂಡಿಸಿ ಪಟ್ಟಣ ಪಂಚಾಯ್ತಿ ಮಾಡಲು ಒಪ್ಪಿಗೆ ಸೂಚಿಸಿದರೆ, ಅಗತ್ಯ ಕ್ರಮ ತೆಗೆದುಕೊಂಡು ಪಟ್ಟಣ ಪಂಚಾಯ್ತಿ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ಸುರೇಬಾನ ಹೋಬಳಿ ವ್ಯಾಪ್ತಿಯ ರೇವಡಿಕೊಪ್ಪ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ಪರಿಶಿಷ್ಟ ಜಾತಿ, ಜನಾಂಗದವರ ಕಾಲೊನಿಗಳಲ್ಲಿ ಸಿ.ಸಿ. ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ಗ್ರಾಮಗಳಲ್ಲಿ ಒಳ ರಸ್ತೆಗಳು, ಲೋಕೋಪಯೋಗಿ ರಸ್ತೆಗಳು, ರೈತರ ಜಮೀನುಗಳಿಗೆ ಹೋಗುವ ರಸ್ತೆಗಳ ಅಭಿವೃದ್ಧಿಗೆ ಸರ್ಕಾರದಿಂದ ಹಂತಹಂತವಾಗಿ ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿ ಪಡಿಸಲಾಗುವುದು’ ಎಂದು ತಿಳಿಸಿದರು.
‘ಪರಿಶಿಷ್ಟರ ಹಣದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಅಭಿವೃದ್ಧಿಯನ್ನು ಅಚ್ಚುಕಟ್ಟಾಗಿ ನಿರ್ಮಿಸಬೇಕು. ಕಳಪೆ ಕಾಮಗಾರಿಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಕಳಪೆಯಾದರೆ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.
ಸುರೇಬಾನ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಾಗರತ್ನ ಜಡಿ, ಉಪಾಧ್ಯಕ್ಷೆ ಬಸವ್ವ ಭಜಂತ್ರಿ, ಶಾಂತವ್ವ ಮಾದರ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶಂಕ್ರಯ್ಯ ಹಿರೇಮಠ, ಪಿಡಿಒ ಈರನಗೌಡ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕಿ ಸುನಂದಾ ವಾಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.