ADVERTISEMENT

ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ: ಬೊಮ್ಮಾಯಿ ವಿರುದ್ಧದ ಪ್ರಕರಣ ರದ್ದು

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 15:36 IST
Last Updated 27 ಜೂನ್ 2025, 15:36 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ವಕ್ಫ್ ಆಸ್ತಿ ವಿಚಾರವಾಗಿ ಎದ್ದಿದ್ದ ವಿವಾದದ ಹಿನ್ನೆಲೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಹಾಗೂ ಮುಸ್ಲಿಂ ಸಮುದಾಯವನ್ನು ಕೆರಳಿಸುವ ರೀತಿಯಲ್ಲಿ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಂಸದ ಬಸವರಾಜ ಬೊಮ್ಮಾಯಿ ವಿರುದ್ಧ ಹಾವೇರಿ ಜಿಲ್ಲೆಯ ಸವಣೂರು ಮತ್ತು ಶಿಗ್ಗಾವಿ ಠಾಣೆಗಳಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಕ್ರಿಮಿನಲ್‌ ಪ್ರಕರಣಗಳನ್ನು ಹೈಕೋರ್ಟ್‌ ವಜಾಗೊಳಿಸಿದೆ.

‘ಸವಣೂರಿನಲ್ಲಿ ನಿಂತು ಎಲ್ಲೇ ಕಲ್ಲೆಸದರೂ ಅದು ಬಿದ್ದ ಜಾಗ ವಕ್ಫ್‌ ಆಸ್ತಿ ಎನ್ನುವಂತಾಗಿದೆ ಎಂಬ ಹೇಳಿಕೆ ಆಧರಿಸಿ ಭಾರತೀಯ ನ್ಯಾಯ ಸಂಹಿತೆ–2023ರ ಕಲಂ 196(1)(ಎ) ಅಡಿ ನನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಬೇಕು’ ಎಂದು ಕೋರಿ ಬಸವರಾಜ ಬೊಮ್ಮಾಯಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

ಬೊಮ್ಮಾಯಿ ಪರ ವಾದ ಮಂಡಿಸಿದ ಪದಾಂಕಿತ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ ‘ಎಸೆದ ಕಲ್ಲು ಬೀಳುವ ಕಡೆಯೆಲ್ಲೆಲ್ಲಾ ವಕ್ಫ್‌ ಆಸ್ತಿ ಇದೆ ಎಂದಷ್ಟೇ ಬೊಮ್ಮಾಯಿ ಹೇಳಿದ್ದಾರೆ. ಬಾಲ ಬಿಚ್ಚಿದರೆ... ಎಂಬ ಉಲ್ಲೇಖ ಇಲ್ಲ. ಅವರೊಬ್ಬ ಮಾಜಿ ಮುಖ್ಯಮಂತ್ರಿ. ಪ್ರಕರಣಗಳನ್ನು ಈ ರೀತಿ ಮುಂದುವರಿಸುವುದು ಸೂಕ್ತವಲ್ಲ’ ಎಂದರು. ಇದಕ್ಕೆ ಹೆಚ್ಚುವರಿ ರಾಜ್ಯ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌ ‘ದೂರಿನಲ್ಲಿ ಅಪರಾಧದ ಅಂಶಗಳಿವೆ. ಹೀಗಾಗಿ ಈ ಹಂತದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಬಾರದು’ ಎಂದು ಮನವಿ ಮಾಡಿದರು. ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ‘ಕಲ್ಲೆಸೆದ ಕಡೆಯಲ್ಲಾ ವಕ್ಫ್‌ ಆಸ್ತಿ... ಎಂಬ ಹೇಳಿಕೆಯೊಂದನ್ನು ಹೊರತುಪಡಿಸಿದರೆ ಅಪರಾಧವಾಗುವಂತಹ ಗುರುತರ ಅಂಶಗಳಿಲ್ಲ. ಹೀಗಾಗಿ ಅರ್ಜಿದಾರರ ವಿರುದ್ಧ ನ್ಯಾಯಿಕ ಪ್ರಕ್ರಿಯೆ ಮುಂದುವರಿಸುವುದು ಕಾನೂನಿನ ದುರ್ಬಳಕೆಯಾಗಲಿದೆ’ ಎಂಬ ಅಭಿಪ್ರಾಯದೊಂದಿಗೆ ದೂರು ವಜಾಗೊಳಿಸಿ ಆದೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.