ADVERTISEMENT

ಚಾಲಕನ ಬದಲಿಗೆ ಬಸ್‌ ಚಲಾಯಿಸಿದ ನಿರ್ವಾಹಕ: ಬ್ಯಾಂಕ್‌ನ ಮಹಿಳಾ ಉದ್ಯೋಗಿ ಸಾವು

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 14:37 IST
Last Updated 18 ಜುಲೈ 2025, 14:37 IST
ಸುಮಾ
ಸುಮಾ   

ಪೀಣ್ಯ ದಾಸರಹಳ್ಳಿ: ಪೀಣ್ಯ ಎರಡನೇ ಹಂತದ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಯುವತಿ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ.

ಮಂಡ್ಯದ ಸುಮಾ (25) ಮೃತಪಟ್ಟವರು. ಅವರು ಸುಂಕದಕಟ್ಟೆಯಲ್ಲಿ ವಾಸವಾಗಿದ್ದರು.

ಹೆಬ್ಬಾಳದ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಉದ್ಯೋಗಿ ಆಗಿದ್ದ ಸುಮಾ, ಶುಕ್ರವಾರ ಬೆಳಿಗ್ಗೆ ಕೆಲಸಕ್ಕೆ ಹೋಗಲು ಪೀಣ್ಯ 2ನೇ ಹಂತದ ಬಸ್ ನಿಲ್ದಾಣಕ್ಕೆ ಬಂದಿದ್ದರು. ಅದೇ ಸ್ಥಳದಲ್ಲಿ ಇನ್ನೂ ಹಲವರು ಬಸ್‌ಗಾಗಿ ಕಾಯುತ್ತಿದ್ದರು.

ADVERTISEMENT

ಬೆಳಿಗ್ಗೆ 8.15ರ ಸುಮಾರಿನಲ್ಲಿ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಬಿಎಂಟಿಸಿ ಬಸ್ ನಿಯಂತ್ರಣ ತಪ್ಪಿ, ಬಸ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ಡಿಕ್ಕಿ ಹೊಡೆಯಿತು. ರಸ್ತೆ ಬದಿಯಲ್ಲಿದ್ದ ಕ್ಯಾಂಟೀನ್‌ಗೂ ಡಿಕ್ಕಿ ಹೊಡೆದ ಪರಿಣಾಮ ಐದು ಮಂದಿ ಗಾಯಗೊಂಡರು. ಈ ಪೈಕಿ ಸುಮಾ ಅವರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಯಲ್ಲಿ ಮೃತಪಟ್ಟರು. ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮತ್ತೊಬ್ಬರು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಸ್ ಚಾಲಕ ಶೌಚಾಲಯಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಹಿಂದೆ ಬೇರೆ ಬಸ್‌ಗಳು ಬಂದು ಜಾಮ್ ಆಗುತ್ತದೆ ಎಂದು ನಿರ್ವಾಹಕನೇ ಬಸ್‌ ಅನ್ನು ಸ್ವಲ್ಪ ಮುಂದೆ ನಿಲ್ಲಿಸಲು ಚಾಲನೆ ಮಾಡಿದ್ದರು. ಆಗ ಬಸ್ ನಿಯಂತ್ರಣಕ್ಕೆ ಸಿಗದೆ ಫುಟ್‌ಪಾತ್‌ ಮೇಲೆ ಹತ್ತಿದ್ದರಿಂದ ಅಪಘಾತವಾಗಿದೆ ಎಂದು ಸ್ಥಳೀಯರು ಆರೋಪಿಸಿದರು. ಪೀಣ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆತಡೆ: ಬಿಎಂಟಿಸಿ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕರು ರಸ್ತೆತಡೆ ನಡೆಸಿದರು.

ಟಾಟಾ ಮೊಬಿಲಿಟಿ ಲಿಮಿಟೆಡ್‌ ಸಂಸ್ಥೆಗೆ ಸೇರಿದ ವಿದ್ಯುತ್ ಚಾಲಿತ ಬಸ್ ಅಪಘಾತಕ್ಕೀಡಾಗಿದೆ. ವಾಹನವು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಕ್ಯಾಂಟೀನ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಕ್ಯಾಂಟೀನ್ ಹತ್ತಿರದಲ್ಲಿದ್ದ ಯುವತಿ ಮೃತಪಟ್ಟಿದ್ದಾರೆ. ಅಪಘಾತದ ಸ್ಥಳಕ್ಕೆ ಈಶಾನ್ಯ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿ, ವಿಭಾಗೀಯ ಸಂಚಾರ ಅಧಿಕಾರಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. 

ಪ್ರಯಾಣಿಕರ ಮತ್ತು ಸಾರ್ವಜನಿಕರ ಸುರಕ್ಷತೆಗೆ ಸಂಸ್ಥೆಯ ಪ್ರಥಮ ಆದ್ಯತೆಯಾಗಿದ್ದು ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು. ಗಾಯಾಳುಗಳ ಚಿಕಿತ್ಸೆಯ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಂಟಿಸಿ ಬಸ್ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಾರ್ವಜನಿಕರು ರಸ್ತೆತಡೆ ನಡೆಸಿದರು 

ನಿರ್ವಾಹಕನ ಬಂಧನ

ನಿರ್ವಾಹಕ ರಮೇಶ್‍ರ ಬೇಜವಾಬ್ದಾರಿಯೇ ಅಪಘಾತಕ್ಕೆ ಕಾರಣ. ಅವರಿಗೆ ವಿದ್ಯುತ್ ಚಾಲಿತ ಬಸ್ ಚಾಲನೆ ಮಾಡಿ ಅಭ್ಯಾಸ ಇರಲಿಲ್ಲ. ಆದರೂ ಅವರು ಇದೇ ಮೊದಲ ಬಾರಿಗೆ ಇ.ವಿ ಬಸ್ ಚಾಲನೆ ಮಾಡಲು ಹೋಗಿ ಅಚಾತುರ್ಯ ನಡೆದಿದೆ. 22ನೇ ಡಿಪೊ ಸೇರಿದ ಬಸ್ ಪೀಣ್ಯದಿಂದ ಮೆಜೆಸ್ಟಿಕ್‍ಗೆ ಹೋಗುತ್ತಿತ್ತು. ರಮೇಶ್‍ನನ್ನು ಬಂಧಿಸಿ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.