ADVERTISEMENT

ರಾಷ್ಟ್ರೋತ್ಥಾನ ಸಾಹಿತ್ಯ: ಕನ್ನಡ ಪುಸ್ತಕ ಹಬ್ಬಕ್ಕೆ ಚಾಲನೆ

ಪ್ರಮುಖ ಪ್ರಕಾಶನಗಳ ಪುಸ್ತಕಗಳ ಮೇಲೆ ಶೇ 50ರವರೆಗೂ ರಿಯಾಯಿತಿ ದರದಲ್ಲಿ ಮಾರಾಟ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 14:42 IST
Last Updated 1 ನವೆಂಬರ್ 2025, 14:42 IST
<div class="paragraphs"><p>ಸಾದರ ಸ್ವೀಕಾರ</p></div>

ಸಾದರ ಸ್ವೀಕಾರ

   

ಬೆಂಗಳೂರು: ರಾಷ್ಟ್ರೋತ್ಥಾನ ಸಾಹಿತ್ಯವು ಕೆಂಪೇಗೌಡನಗರದ ಕೇಶವಶಿಲ್ಪದಲ್ಲಿ ಹಮ್ಮಿಕೊಂಡಿರುವ 5ನೇ ಕನ್ನಡ ಪುಸ್ತಕ ಹಬ್ಬಕ್ಕೆ ಶನಿವಾರ ಚಾಲನೆ ದೊರೆಯಿತು. ಡಿ.7 ರವರೆಗೆ ಈ ಹಬ್ಬ ನಡೆಯಲಿದ್ದು, ಪ್ರಮುಖ ಪ್ರಕಾಶನಗಳ ಪುಸ್ತಕಗಳ ಮೇಲೆ ಶೇ 50ರವರೆಗೂ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಹಬ್ಬವನ್ನು ಉದ್ಘಾಟಿಸಿದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ‘ಕರ್ನಾಟಕ ಏಕೀಕರಣದ ಇತಿಹಾಸವನ್ನು ಸ್ಮರಣೆ ಮಾಡಬೇಕಾದ ಅಗತ್ಯವಿದ್ದು, ಹಿಂದೆ ಆಡಳಿತ ನಡೆಸಿದ ಎಲ್ಲ ರಾಜರ ಕಾಲದಲ್ಲೂ ಕನ್ನಡವೇ ಅಧಿಕೃತ ಭಾಷೆಯಾಗಿತ್ತು. ಏಕೀಕರಣದ ಚಳವಳಿಗೆ ರಾಷ್ಟ್ರೀಯ ಚಳವಳಿಯೇ ಪ್ರೇರಣೆ. ನಮ್ಮ ಪೂರ್ವಜರ ತ್ಯಾಗ– ಪ್ರೋತ್ಸಾಹಗಳಿಂದ 1973ರಲ್ಲಿ ಕರ್ನಾಟಕ ರಾಜ್ಯ ಉದಯವಾಯಿತು. ಕನ್ನಡದ ಓದುಗರನ್ನು ಹೆಚ್ಚಿಸುವುದೇ ಕನ್ನಡಕ್ಕಾಗಿ ಮಾಡುವ ದೊಡ್ಡ ಕೆಲಸ’ ಎಂದು ಹೇಳಿದರು.

ADVERTISEMENT

ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್, ‘ಕೇರಳದಲ್ಲಿ ಗೃಹಿಣಿಯರು ಮನೆಗೆ ತರಕಾರಿ, ದಿನಸಿ ಪಟ್ಟಿ ಮಾಡುವ ಹಾಗೆ ಮಕ್ಕಳಿಗೆ ಬೇಕಾದ ಪುಸ್ತಕಗಳನ್ನೂ ಪಟ್ಟಿ ಮಾಡಿ ತರಿಸುತ್ತಾರೆ. ಹಾಗಾಗಿ, ಅಲ್ಲಿ ಪುಸ್ತಕಗಳು ಹತ್ತು ಹಲವು ಮುದ್ರಣ ಕಾಣುತ್ತವೆ. ನಮ್ಮಲ್ಲೂ ತರಕಾರಿ ತರುವಂತೆ ಪುಸ್ತಕಗಳನ್ನೂ ತರುವಂತಾಗಬೇಕು. ಮನೆಯಲ್ಲಿ ಫ್ರಿಡ್ಜ್‌, ವಾಶಿಂಗ್‌ ಮಷಿನ್‌ಗೆ ಜಾಗ ಮಾಡುವಂತೆ ಪುಸ್ತಕಗಳಿಗೂ ಗೂಡು ಕಟ್ಟಬೇಕು’ ಎಂದರು. 

ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷ ಎಂ.ಪಿ. ಕುಮಾರ್‌, ‘ಕನ್ನಡ ಹಬ್ಬಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿದೆ. ಈ ಬಾರಿ ಹೆಚ್ಚು ಕಡೆ ಪುಸ್ತಕ ಹಬ್ಬ ನಡೆಸುವ ಆಲೋಚನೆ ಇದೆ’ ಎಂದು ಹೇಳಿದರು. 

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ವಿಭಾಗದ ಸದಸ್ಯ (ಸಾಮರ್ಥ್ಯ ನಿರ್ಮಾಣ ಆಯೋಗ) ಆರ್‌. ಬಾಲಸುಬ್ರಹ್ಮಣ್ಯ, ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆ ಗೌರವ ಕಾರ್ಯದರ್ಶಿ ವಿ. ನಾಗರಾಜ್‌, ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಧಾನ ಸಂಪಾದಕ ವಿಘ್ನೇಶ್ವರ ಭಟ್‌ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.