ADVERTISEMENT

ವಿದ್ಯಾರ್ಥಿಗಳೊಂದಿಗೆ ಉದ್ಯಮಿಗಳ ಸಂವಾದ

​ಪ್ರಜಾವಾಣಿ ವಾರ್ತೆ
Published 4 ಮೇ 2019, 20:10 IST
Last Updated 4 ಮೇ 2019, 20:10 IST

ಯಲಹಂಕ: ಬಿಎಂಎಸ್ ತಾಂತ್ರಿಕ ಮತ್ತು ನಿರ್ವಹಣೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಾಗೂ ವಾಣಿಜ್ಯೋದ್ಯಮಿಗಳ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವಾಲಯದ(ಎಂಎಸ್‌ಎಂಇ) ಉಪನಿರ್ದೇಶಕ ಆರ್.ಗೋಪಿನಾಥರಾವ್ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ‘ದೇಶದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು, ಉದ್ಯೋಗಗಳನ್ನು ಸೃಷ್ಟಿಸಲು ಹಾಗೂ ಸ್ವಂತ ಉದ್ದಿಮೆ ಸ್ಥಾಪಿಸಲು ಇಚ್ಛಿಸುವ ಯುವಸಮುದಾಯಕ್ಕೆ ನಮ್ಮ ಸಂಸ್ಥೆಯು ಸಲಹೆ, ಸಹಕಾರ, ತರಬೇತಿ ಹಾಗೂ ಹಣಕಾಸಿನ ಸೌಲಭ್ಯಗಳನ್ನು ನೀಡುತ್ತಿದೆ’ ಎಂದುಆರ್.ಗೋಪಿನಾಥರಾವ್ ಹೇಳಿದರು. ‘ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಸೂಕ್ತ ಮಾರ್ಗದರ್ಶನ ನೀಡುವುದರ ಜತೆಗೆ ಸಣ್ಣ ಕೈಗಾರಿಕೆಗಳು ಹಾಗೂ ಸೇವಾ ಕ್ಷೇತ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಎಂಎಸ್ಎಂಇ ಘಟಕಗಳು ಸಹಕಾರಿಯಾಗಿವೆ. ಇದರಿಂದ 10 ಕೋಟಿಗೂ ಹೆಚ್ಚು ಜನರು ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗಿದೆ’ ಎಂದರು.

‘ಸಾಂಪ್ರದಾಯಿಕ ಸಿದ್ಧವಸ್ತುಗಳಿಂದ ಹಿಡಿದು ತಂತ್ರಜ್ಞಾನ ಆಧಾರಿತ 6 ಸಾವಿರಕ್ಕೂ ಹೆಚ್ಚು ವಸ್ತುಗಳನ್ನು ಈ ಘಟಕಗಳು ಉತ್ಪಾದಿಸುತ್ತಿವೆ’ ಎಂದು ತಿಳಿಸಿದರು. ಉದ್ಯಮಿ ನವೀನ್‌ ಪಿ.ಸೆನ್ನ, ‘ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಕ್ರಿಯಾಶೀಲತೆ ಮೈಗೂಡಿಸಿಕೊಳ್ಳಬೇಕು. ತಜ್ಞರಿಂದ ಮಾರ್ಗದರ್ಶನ ಪಡೆದು ಉದ್ಯೋಗದಾತರಾಗುವತ್ತ ಗಮನ ಹರಿಸಬೇಕು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.