
ಬೆಂಗಳೂರು: ಕೃಷಿ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆ ವಹಿವಾಟು ವ್ಯವಸ್ಥೆಯಲ್ಲಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಈ ಕ್ಷೇತ್ರಗಳು ಆಸರೆಯಾಗಿವೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಕೆಪೆಕ್ ಹಾಗೂ ಖೆತಿವಾಲ ಸಂಸ್ಥೆಗಳು ಗುರುವಾರ ಆಯೋಜಿಸಿದ್ದ ಕೃಷಿ ಜಾಗೃತಿ ಕಾರ್ಯಾಗಾರ ಮತ್ತು ಖೆತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಾಂಪ್ರದಾಯಿಕ ಕೃಷಿಯೊಂದಿಗೆ ತಂತ್ರಜ್ಞಾನ, ವೈಜ್ಞಾನಿಕ ಪದ್ದತಿ ಅಳವಡಿಸಿಕೊಂಡರೆ ಸಮಯ, ಶ್ರಮದ ಉಳಿತಾಯದ ಜೊತೆಗೆ ಆದಾಯ ಹೆಚ್ಚುತ್ತದೆ. ರೈತರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆಗೂ ಆದ್ಯತೆ ನೀಡಬೇಕು. ಮಾರುಕಟ್ಟೆಯ ಬಗ್ಗೆ ಜ್ಞಾನ ವಿಸ್ತಾರಗೊಳ್ಳಬೇಕು ಎಂದು ಸಲಹೆ ನೀಡಿದರು.
ಕೆಪೆಕ್‌ನಲ್ಲಿ ಪಿಎಂಎಫ್‌ಎಂಇ ಯೋಜನೆಯಡಿ ಕಿರು ಆಹಾರ ಸಂಸ್ಕರಣೆ ಉದ್ಯಮ ಸ್ಥಾಪಿಸಲು ಅವಕಾಶವಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಒಟ್ಟು ₹ 15 ಲಕ್ಷ ಸಬ್ಸಿಡಿ ದೊರೆಯಲಿದೆ. ಇದಕ್ಕಾಗಿ ₹ 206 ಕೋಟಿ ಮೀಸಲಿಡಲಾಗಿದೆ ಎಂದು ವಿವರಿಸಿದರು.
ಕೆಪೆಕ್‌ನಲ್ಲಿ ಈ ವರ್ಷ 5 ಸಾವಿರ ಹೊಸ ಆಹಾರ ಉದ್ಯಮಗಳ ಸೃಷ್ಟಿಯ ಗುರಿ ಹೊಂದಲಾಗಿದೆ. ಕೃಷಿ ಇಲಾಖೆಯಲ್ಲಿ ಹಲವು ವಿನೂತನ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ₹ 8 ಕೋಟಿ ಸಹಾಯಧನದಲ್ಲಿ 40 ನವೋದ್ಯಮಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ರೈತರನ್ನು ಯಾಂತ್ರಿಕವಾಗಿಯೂ ಸಬಲರನ್ನಾಗಿ ಮಾಡಲು ರಾಜ್ಯ ಸರ್ಕಾರ ₹ 900 ಕೋಟಿ ವೆಚ್ಚದಲ್ಲಿ ಈಗಾಗಲೇ ಕೃಷಿ ಯಂತ್ರೋಪಕರಣಗಳು, ₹ 1075 ಕೋಟಿ ವೆಚ್ಚದಲ್ಲಿ ಸೂಕ್ಷ್ಮ ನೀರಾವರಿ ಪರಿಕರಗಳನ್ನು ವಿತರಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.
ಜಲಾನಯನ ಇಲಾಖೆ ನಿರ್ದೇಶಕರಾದ ಮೊಹಮ್ಮದ ಪರವೇಜ ಬಂಥನಾಳ, ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್, ನಬಾರ್ಡ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿ.ಎನ್. ಶರ್ಮಾ, ಎಸ್‌ಎಲ್‌ಬಿಸಿ ಸಂಯೋಜಕ ಭಾಸ್ಕರ್ ಭಟ್ಟಾಚಾರ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.