
ಡಿಜಿಟಲ್ ಡೆಂಟಿಸ್ಟ್ರಿ ಕೇಂದ್ರವನ್ನು ಡಾ. ಶರಣ ಪ್ರಕಾಶ ಪಾಟೀಲ ಉದ್ಘಾಟಿಸಿದರು. ಡಾ. ಗಿರೀಶ್ ಬಿ. ಗಿರಡ್ಡಿ ಮತ್ತು ಮೊಹಮ್ಮದ್ ಮೊಹಸಿನ್ ಉಪಸ್ಥಿತರಿದ್ದರು
-ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಇಲ್ಲಿನ ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಅತ್ಯಾಧುನಿಕ ಉಪಕರಣಗಳನ್ನು ಒದಗಿಸುವ ಜೊತೆಗೆ ಉನ್ನತೀಕರಣಕ್ಕೆ ಆದ್ಯತೆ ನೀಡಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಭರವಸೆ ನೀಡಿದರು.
ಸಂಸ್ಥೆಯು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪದವಿ ಪ್ರದಾನ ಮತ್ತು ಡಿಜಿಟಲ್ ಡೆಂಟಿಸ್ಟ್ರಿ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು.
‘ಇಲ್ಲಿನ ದಂತ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ದೇಶದ ಅತ್ಯಂತ ಹಳೆಯ ದಂತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. 1958ರಲ್ಲಿ ಸ್ಥಾಪನೆಯಾದ ಈ ಕಾಲೇಜು, ದಂತ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ಆರು ದಶಕಗಳ ಕಾಲ ಸೇವೆ ಒದಗಿಸಿದೆ. ಈ ದಂತ ವೈದ್ಯಕೀಯ ಶಿಕ್ಷಣ ಸಂಸ್ಥೆ ನಮ್ಮ ರಾಜ್ಯದ ಹೆಮ್ಮೆಯಾಗಿದ್ದು, ಈಗ ಎಲ್ಲ ವಿಭಾಗಗಳಲ್ಲಿ ಆಧುನೀಕರಣದ ಅಗತ್ಯವಿದೆ. ಶೀಘ್ರದಲ್ಲೇ ಈ ಸಂಸ್ಥೆಗೂ ಸುಧಾರಿತ ಉಪಕರಣಗಳು ಮತ್ತು ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದರು.
‘ತಂತ್ರಜ್ಞಾನಗಳು ದಂತ ವೈದ್ಯ ವಿಜ್ಞಾನದಲ್ಲಿ ಕ್ರಾಂತಿಯನ್ನುಂಟು ಮಾಡುತ್ತಿವೆ. ಡಿಜಿಟಲ್ ಡೆಂಟಿಸ್ಟ್ರಿಯು ನಿಖರ ಶಸ್ತ್ರಚಿಕಿತ್ಸೆಗೆ ಸಹಕಾರಿಯಾಗಿದೆ. ಇದರ ನೆರವಿನಿಂದ ವೇಗವಾಗಿ ಚಿಕಿತ್ಸೆ ಒದಗಿಸಲೂ ಸಾಧ್ಯವಾಗುತ್ತದೆ’ ಎಂದರು.
ಸಮಾರಂಭದಲ್ಲಿ 50ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ. ಗಿರೀಶ್ ಗಿರಡ್ಡಿ, ದಂತ ವೈದ್ಯ ಡಾ. ಕಿರಣ್ ಉಪಸ್ಥಿತರಿದ್ದರು.
ಅತ್ಯಾಧುನಿಕ ಸೌಲಭ್ಯ
ಸಂಸ್ಥೆಯಲ್ಲಿನ ಡಿಜಿಟಲ್ ಡೆಂಟಿಸ್ಟ್ರಿ ಕೇಂದ್ರ ಅತ್ಯಾಧುನಿಕ ಸೌಲಭ್ಯವನ್ನು ಒಳಗೊಂಡಿದೆ. ಕಂಪ್ಯೂಟರ್ ಆಧಾರಿತ ಸ್ಕ್ಯಾನಿಂಗ್ 3ಡಿ ಪ್ರಿಂಟಿಂಗ್ ಕೋನ್ ಬೀಮ್ ಕಂಪ್ಯೂಟೆಡ್ ಟೊಮೊಗ್ರಫಿ (ಸಿಬಿಸಿಟಿ) ಶಸ್ತ್ರಚಿಕಿತ್ಸೆ ಮತ್ತು ‘ಇಂಪ್ಲಾಂಟಾಲಜಿ’ ಸೇರಿ ವಿವಿಧ ಸೌಲಭ್ಯ ಹೊಂದಿದೆ. ರೂಟ್ ಕೆನಾಲ್ ಚಿಕಿತ್ಸೆಗೆ ‘ಮೈಕ್ರೋಸ್ಕೋಪಿಕ್ ಎಂಡೋಡಾಂಟಿಕ್ಸ್’ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ ಎಂದು ಸಂಸ್ಥೆಯ ವೈದ್ಯರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.