ADVERTISEMENT

ಓಟ ನಮ್ಮ ಬದುಕು ಬದಲಿಸಿದೆ...

ಎಚ್‌ಐವಿ ಬಾಧಿತ ಮಕ್ಕಳ ಆತ್ಮವಿಶ್ವಾಸದ ನುಡಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2018, 19:21 IST
Last Updated 28 ನವೆಂಬರ್ 2018, 19:21 IST
ಬಿಎಸ್‌ಎಸ್ಎಫ್‌ ನಿರ್ದೇಶಕ ಎಲ್ವಿಸ್‌ ಜೋಸೆಫ್‌, ಮಾರ್ಗರೆಟ್ ಆಳ್ವ, ಅಂತರರಾಷ್ಟ್ರೀಯ ಅಥ್ಲೀಟ್‌ ರೀತ್‌ ಅಬ್ರಾಹಂ, ಮಾಜಿ ಆರ್ಚ್‌ ಬಿಷಪ್‌ ಬರ್ನಾರ್ಡ್‌ ಮೊರಾಸ್‌, ಯುಎನ್ ಏಡ್ಸ್‌ಗೆ ಭಾರತದಲ್ಲಿ ರಾಷ್ಟ್ರೀಯ ನಿರ್ದೇಶಕರಾಗಿರುವ ಡಾ.ಬಿಲಾಯಿ ಕಮಾರಾ, ಡಾ.ಜೆ.ವಿ.ಆರ್ ಪ್ರಸಾದ್‌ ರಾವ್‌, ಸ್ನೇಹ ಚಾರಿಟಬಲ್‌ ಟ್ರಸ್ಟ್‌ ನಿರ್ದೇಶಕ ರೆವರೆಂಡ್‌ ಫಾದರ್ ಮ್ಯಾಥ್ಯೂ ಇದ್ದರು.
ಬಿಎಸ್‌ಎಸ್ಎಫ್‌ ನಿರ್ದೇಶಕ ಎಲ್ವಿಸ್‌ ಜೋಸೆಫ್‌, ಮಾರ್ಗರೆಟ್ ಆಳ್ವ, ಅಂತರರಾಷ್ಟ್ರೀಯ ಅಥ್ಲೀಟ್‌ ರೀತ್‌ ಅಬ್ರಾಹಂ, ಮಾಜಿ ಆರ್ಚ್‌ ಬಿಷಪ್‌ ಬರ್ನಾರ್ಡ್‌ ಮೊರಾಸ್‌, ಯುಎನ್ ಏಡ್ಸ್‌ಗೆ ಭಾರತದಲ್ಲಿ ರಾಷ್ಟ್ರೀಯ ನಿರ್ದೇಶಕರಾಗಿರುವ ಡಾ.ಬಿಲಾಯಿ ಕಮಾರಾ, ಡಾ.ಜೆ.ವಿ.ಆರ್ ಪ್ರಸಾದ್‌ ರಾವ್‌, ಸ್ನೇಹ ಚಾರಿಟಬಲ್‌ ಟ್ರಸ್ಟ್‌ ನಿರ್ದೇಶಕ ರೆವರೆಂಡ್‌ ಫಾದರ್ ಮ್ಯಾಥ್ಯೂ ಇದ್ದರು.   

ಬೆಂಗಳೂರು: 'ಓಟದ ತನ್ಮಯತೆಯಿಂದಲೇ ನಮ್ಮ ಬದುಕು ಓಡುತ್ತಿದೆ! ಸಮಾಜದ ಮುಖ್ಯ ವಾಹಿನಿಯಲ್ಲಿ ನಾವೂ ಇದ್ದೇವೆ ಎಂಬ ಆತ್ಮವಿಶ್ವಾಸ ಈ ಓಟದಿಂದಲೇ ಸಾಧ್ಯವಾಗಿದೆ...'

ಅಂತರರಾಷ್ಟ್ರೀಯ ಮಟ್ಟದ ಓಟದಲ್ಲಿ ಸಾಧನೆ ಮಾಡಿರುವ ಎಚ್‌ಐವಿ ಬಾಧಿತ ಮಕ್ಕಳ ದೃಢವಿಶ್ವಾಸದ ನುಡಿಗಳಿವು.

ಏಡ್ಸ್‌ ಜೊತೆ ಬದುಕುತ್ತಿರುವ ಮಕ್ಕಳಿಗಾಗಿ ಬೆಂಗಳೂರು ಸ್ಕೂಲ್ಸ್‌ ಸ್ಪೋರ್ಟ್ಸ್‌ ಫೌಂಡೇಶನ್‌ (ಬಿಎಸ್‌ಎಸ್ಎಫ್‌) ವತಿಯಿಂದ ಕೈಗೊಳ್ಳಲಾಗಿರುವ ‘ಚಾಂಪಿಯನ್‌ ಇನ್‌ ಮಿ ಮಿಷನ್‌–2020’ ಕಾರ್ಯಕ್ರಮದ ಗುರಿಗಳನ್ನು ನಗರದಲ್ಲಿ ಬಿಡುಗಡೆ ಮಾಡಲಾಯಿತು. ಈ ವೇಳೆ ಮಕ್ಕಳು ‘ಪ್ರಜಾವಾಣಿ’ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡರು.

ADVERTISEMENT

‘ನನ್ನ ತಾಯಿ ಗರ್ಭಿಣಿ ಇದ್ದಾಗ ನರ್ಸ್‌ ಇಂಜೆಕ್ಷನ್‌ ನೀಡುವಾಗ ಆದ ಪ್ರಮಾದದಿಂದ ನಾನು ಏಡ್ಸ್‌ ಬಾಧಿತನಾಗಿ ಜನ್ಮ ತಳೆದೆ. ಆದರೆ, 2008ರಲ್ಲಿ ಬಿಎಸ್‌ಎಸ್ಎಫ್‌ ತೆಕ್ಕೆಗೆ ಸೇರಿದ ದಿನದಿಂದ ನನ್ನ ಜೀವನಗಾಥೆಯೇ ಬದಲಾಗಿದೆ. ನಾನಿಂದು ಅಂತರರಾಷ್ಟ್ರೀಯ ಮಟ್ಟದ ಓಟಗಾರನಾಗಿದ್ದೇನೆ. ಒಂಬತ್ತು ದೇಶಗಳನ್ನು ಸುತ್ತಿದ್ದೇನೆ’ ಎಂಬುದು ರಾಜುವಿನ (ಹೆಸರು ಬದಲಿಸಿದೆ) ಹೆಮ್ಮೆಯ ನುಡಿ.

‘ಎಲ್ಲರಂತೆ ನಾವೂ ಇದ್ದೇವೆ. ನಾವು ಯಾರಿಗೂ ಕಮ್ಮಿ ಇಲ್ಲ ಎಂಬ ಆತ್ಮವಿಶ್ವಾಸವನ್ನು ಫೌಂಡೇಶನ್‌ ನಮಗೆ ನೀಡಿದೆ. ಎಲ್ಲರಂತೆ ತಲೆ ಎತ್ತಿ ಬದುಕುವಂತೆ ಮಾಡಿದೆ’ ಎಂಬ ಅಭಿಪ್ರಾಯವನ್ನು ಇನ್ನೂ ಹಲವು ಮಕ್ಕಳು ಹಂಚಿಕೊಂಡರು.

ಮಾಜಿ ರಾಜ್ಯಪಾಲರಾದ ಮಾರ್ಗರೇಟ್‌ ಆಳ್ವ ಶುಕ್ರವಾರ ಮಿಷನ್‌–2020 ಗುರಿಗಳನ್ನು ಪ್ರಕಟಿಸಿದರು.

ಏಡ್ಸ್‌ಗಾಗಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗೆ ವಿಶೇಷ ರಾಯಭಾರಿ ಆಗಿರುವ ಡಾ.ಜೆ.ವಿ.ಆರ್.ಪ್ರಸಾದ್ ರಾವ್‌ ಮಾತನಾಡಿ, ‘ಎಚ್‌ಐವಿ ಬಗ್ಗೆ ಜಾಗೃತಿ ಮೂಡಿಸುವಲ್ಲಿ 12ಕ್ಕೂ ಹೆಚ್ಚು ರಾಜ್ಯಗಳು ಹಿಂದೆ ಬಿದ್ದಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ 1997ರ ಪರಿಸ್ಥಿತಿಯನ್ನೇ ಭಾರತ ಮತ್ತೆ ಎದುರಿಸಬೇಕಾದೀತು’ ಎಂದು ಎಚ್ಚರಿಸಿದರು.

‘ಪ್ರತಿವರ್ಷದ ದೇಶದಲ್ಲಿ 70ರಿಂದ 80 ಸಾವಿರ ಜನರು ಏಡ್ಸ್‌ ಪೀಡಿತರು ಪತ್ತೆಯಾಗುತ್ತಿದ್ದಾರೆ. ಸ್ವಯಂ ಸೇವಾ ಸಂಸ್ಥೆಗಳು ಹಣಕಾಸಿನ ತೊಂದರೆಯಿಂದ ಅಂದುಕೊಂಡಿ
ದ್ದನ್ನು ಸಾಧಿಸಲು ಆಗುತ್ತಿಲ್ಲ. ಇದನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕಾದರೆ ನಾಗರಿಕ ಸಮಾಜವೂ ಕೈಜೋಡಿಸಬೇಕು’ ಎಂದರು.

***

‘ಚಾಂಪಿಯನ್‌ ಇನ್‌ ಮಿ’ಗೆ ದಶಕದ ಸಂಭ್ರಮ

ಎಚ್‌ಐವಿಯೊಂದಿಗೆ ಬದುಕುತ್ತಿರುವ ಮಕ್ಕಳು ಮತ್ತು ಯುವಜನತೆಗಾಗಿ 2008ರಲ್ಲಿ ‘ಚಾಂಪಿಯನ್‌ ಇನ್‌ ಮಿ’ (ಸಿಐಎಂ) ಆರಂಭಿಸಲಾಗಿತ್ತು. ಇದಕ್ಕೀಗ ಹತ್ತು ವರ್ಷ ತುಂಬಿದೆ.

ಈ ಕೇಂದ್ರದ ವತಿಯಿಂದ 300ಕ್ಕೂ ಹೆಚ್ಚು ಮಕ್ಕಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಅಂತರರಾಷ್ಟ್ರೀಯ ಮಟ್ಟದವರೆಗೆ ಸಾಧನೆ ಮಾಡಿದ್ದಾರೆ.
***

ನಾನೊಬ್ಬ ಎಚ್ಐವಿ ಪೀಡಿತಳು ಎಂಬ ಭಾವನೆಯೇ ಇಲ್ಲದಂತೆ ಮಾಡುವ ಮೂಲಕ ಬಿಎಸ್ಎಸ್‌ಎಫ್‌ ನಮ್ಮ ದೃಷ್ಟಿಕೋನವನ್ನು ಬದಲಿಸಿದೆ -ಎಚ್ಐವಿ ಪೀಡಿತ ಬಾಲಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.