ADVERTISEMENT

ಆತ್ಮಜ್ಞಾನವಿಲ್ಲದ ಶಿಕ್ಷಣ ವ್ಯರ್ಥ: ಸ್ವಾಮಿ ಬೋಧಮಯಾನಂದ ಮಹಾರಾಜ ಕಳವಳ

ಕೆಎಲ್‌ಇ ಸಂಸ್ಥೆಯ 110ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಸ್ವಾಮಿ ಬೋಧಮಯಾನಂದ ಮಹಾರಾಜ ಕಳವಳ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 15:43 IST
Last Updated 14 ನವೆಂಬರ್ 2025, 15:43 IST
   

ಬೆಳಗಾವಿ: ‘ಜ್ಞಾನದ ಹಿಂದಿನ ಆತ್ಮವನ್ನು ನಾವು ಕಳೆದುಕೊಂಡರೆ ಜ್ಞಾನಕ್ಕೆ ಅರ್ಥ ಬಾರದು. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಆತ್ಮಾಜ್ಞಾನ, ತತ್ವಜ್ಞಾನದ ಕೊರತೆ ಕಾಡುತ್ತಿದೆ. ಇದೇ ಕಾರಣಕ್ಕೆ ಸುಶಿಕ್ಷಿತರೇ ಹೆಚ್ಚಾಗಿ ಸಮಾಜ ಘಾತಕ ಕೃತ್ಯಗಳಲ್ಲಿ ತೊಡಗಿದ್ದಾರೆ’ ಎಂದು ಹೈದರಾಬಾದ್‌ನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಬೋಧಮಯಾನಂದ ಮಹಾರಾಜ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯಲ್ಲಿ (ಕೆಎಲ್‌ಇ) ಗುರುವಾರ 110ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಇಸ್ರೊದ ವಿಜ್ಞಾನಿಗಳು
ಚಂದ್ರ ಲೋಕಕ್ಕೆ ನೆಗೆದು ತೋರಿಸಿದರು. ಅದೇ ದಿನ ಬೆಂಗಳೂರಿನ ಖ್ಯಾತ ವೈದ್ಯನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿದ್ದ, ಹೈದರಾಬಾದ್‌ನಲ್ಲಿ ಬಾಲಕಿಯ ಅತ್ಯಾಚಾರ ನಡೆದಿತ್ತು. ದೆಹಲಿಯಲ್ಲಿ ಈಗ ಸಂಭವಿಸಿದ ಸ್ಫೋಟಗಳಲ್ಲಿ ವೈದ್ಯರೂ ಸೇರಿದ್ದಾರೆ. ಹಾಗಿದ್ದರೆ ಇನ್ನತ ಶಿಕ್ಷಣದ ಫಲವೇನು ಎಂದು ನಾವು ಪ್ರಶ್ನಿಸಿಕೊಳ್ಳಬೇಕು’ ಎಂದರು.

‘ಈ ವಿಚಾರದಲ್ಲಿ ಕೆಎಲ್‌ಇ ಸಂಸ್ಥೆ ತನ್ನ ಧೀಮಂತಿಗೆ ಉಳಿಸಿಕೊಂಡಿದೆ. ಸಪ್ತರ್ಷಿಗಳು ಸ್ಥಾಪಿಸಿದ ಸಂಸ್ಥೆ ಮೌಲ್ಯಗಳನ್ನು ಬಿತ್ತುತ್ತ ಬಂದ ಕಾರಣ ಇಷ್ಟು ವರ್ಷ ಮುಂದುವರಿದಿದೆ. ರಾಷ್ಟ್ರಕ್ಕೆ ಪ್ರಬಲವಾದ ಮಾನವ ಸಂಪನ್ಮೂಲ ಕೊಟ್ಟಿದ್ದು  ಹೆಗ್ಗಳಿಕೆ’ ಎಂದರು.

ADVERTISEMENT

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ‘ಕೆಎಲ್‌ಇ ಸಂಸ್ಥೆ ಯಾವುದೇ ಕುಟುಂಬದ ಸ್ವತ್ತಾಗಿಲ್ಲ. ಪ್ರಜಾಪ್ರಭುತ್ವ ಮಾದರಿಯಲ್ಲಿ ಮುನ್ನಡೆದಿದೆ. ಕರ್ನಾಟಕ ಸರ್ಕಾರದಲ್ಲಿ ಈಗ ಇರುವ ಶೇ 50ರಷ್ಟು ಜನಪ್ರತಿನಿಧಿಗಳನ್ನು ನಮ್ಮ ಸಂಸ್ಥೆಯೇ ತಯಾರು ಮಾಡಿದೆ. ರಾಷ್ಟ್ರಕ್ಕೆ ಮೌಲ್ಯಯುತ ನಾಯಕರನ್ನು ನೀಡಿದೆ’ ಎಂದರು.

ಸಂಸ್ಥೆಯ ಅಧ್ಯಕ್ಷ, ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷೀಯ ಭಾಷಣ ಮಾಡಿದರು. ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ, ಆಜೀವ ಸದಸ್ಯ ಮಂಡಳಿಯ ಕಾರ್ಯಧ್ಯಕ್ಷೆ ಡಾ.ದೀಪಾ ಮೆಟಗುಡ್ಡ ಇದ್ದರು.

ಡಾ.ನೇಹಾ ದಡೇದ, ಡಾ.ಮಹೇಶ ಗುರನಗೌಡರ, ಡಾ.ಆದಿತ್ಯ ಆಚಾರ್ಯ ನಿರೂಪಿಸಿದರು. ಡಾ.ದೀಪಾ ಮೆಡಗುಡ್ಡ ವಂದಿಸಿದರು.

ಇಂದಿನ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಹೊಸದೇನಲ್ಲ. ನಮ್ಮ ದ್ವಾಪರಯುಗದಲ್ಲಿ ಬರುವ ಬ್ರಹ್ಮಾಸ್ತ್ರವೇ ಎಐ ಕಲ್ಪನೆ. ಅತ್ಯಾಧುನಿ ತಂತ್ರಜ್ಞಾನದ ಕುರುಹು ಎಲ್ಲವೂ ನಮ್ಮ ಮಹಾಕಾವ್ಯಗಳಲ್ಲಿದೆ
ಸ್ವಾಮಿ ಬೋಧಮಯಾನಂದ ಮಹಾರಾಜ ಅಧ್ಯಕ್ಷ, ರಾಮಕೃಷ್ಣ ಮಠ, ಹೈದರಾಬಾದ್‌
ಕೆಎಲ್‌ಇ ಸಂಸ್ಥೆಯು ಬೆಳಗಾವಿ, ಹುಬ್ಬಳ್ಳಿ ಸೇರಿ ಹಲವು ಕಡೆ ವೈದ್ಯಕೀಯ ಕಾಲೇಜು ಆಸ್ಪತ್ರೆ ತೆರೆದಿದೆ. 5000 ಬೆಡ್‌ಗಳಿಗೂ ಹೆಚ್ಚಿನ ಆಸ್ಪತ್ರೆ ತೆರೆದ ಕೀರ್ತಿ ಈ ಸಂಸ್ಥೆಗೆ ಮಾತ್ರ ಸಲ್ಲುತ್ತದೆ
ಪ್ರಭಾಕರ ಕೋರೆ ಕಾರ್ಯಾಧ್ಯಕ್ಷ, ಕೆಎಲ್‌ಇ ಸಂಸ್ಥೆ
ಆಧುನಿಕ ಭಾರತದಲ್ಲಿ ಸರ್ಕಾರಗಳು ಉದ್ಯಮ ಪಾಲುದಾರಿಕೆಯಂತೆ ಶೈಕ್ಷಣಿಕ ಪಾಲುದಾರಿಕೆಗೆ ಮನಸ್ಸು ಮಾಡಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳೂ ಸರ್ಕಾರದ ಪಾಲುದಾರ ಆಗಬೇಕು
ಡಾ.ಎಂ.ಆರ್. ಜಯರಾಮ್ ಕುಲಪತಿ, ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.