ADVERTISEMENT

ಗ್ರಾಮ ಸಭೆ, ವಾರ್ಡ್‌ಸಭೆ ತಂತ್ರಾಂಶದಲ್ಲಿ ದಾಖಲು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 21:10 IST
Last Updated 7 ಆಗಸ್ಟ್ 2025, 21:10 IST
ವಿಸ್ಮಯ ಬುಕ್ ಹೌಸ್ ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್.ಎಂ. ವಿಜಯಾನಂದ್ ಹಾಗೂ ಉಮಾ ಮಹಾದೇವನ್ ಚರ್ಚೆಯಲ್ಲಿ ತೊಡಗಿದ್ದರು. ಸಿ. ನಾರಾಯಣಸ್ವಾಮಿ ಹಾಗೂ ವಿ.ವೈ. ಘೋರ್ಪಡೆ ಹಾಜರಿದ್ದರು. ಪ್ರಜಾವಾಣಿ ಚಿತ್ರ
ವಿಸ್ಮಯ ಬುಕ್ ಹೌಸ್ ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್.ಎಂ. ವಿಜಯಾನಂದ್ ಹಾಗೂ ಉಮಾ ಮಹಾದೇವನ್ ಚರ್ಚೆಯಲ್ಲಿ ತೊಡಗಿದ್ದರು. ಸಿ. ನಾರಾಯಣಸ್ವಾಮಿ ಹಾಗೂ ವಿ.ವೈ. ಘೋರ್ಪಡೆ ಹಾಜರಿದ್ದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ಗ್ರಾಮ ಪಂಚಾಯಿತಿಗಳು ನಡೆಸುವ ತಿಂಗಳ ಸಭೆ, ಗ್ರಾಮ ಸಭೆ, ವಾರ್ಡ್‌ಸಭೆಗಳು ಕೂಡ ‘ಪಂಚತಂತ್ರ’ ತಂತ್ರಾಂಶದಲ್ಲಿ ದಾಖಲಾಗಬೇಕು. ಅದಕ್ಕೆ ಬೇಕಾದ ವೇದಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಪಂಚಾಯತ್‌ರಾಜ್‌ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಉಮಾ ಮಹಾದೇವನ್‌ ಹೇಳಿದರು.

5ನೇ ಹಣಕಾಸು ಆಯೋಗದ ನಿವೃತ್ತ ಸಮಾಲೋಚಕ ಎಂ.ಕೆ. ಕೆಂಪೇಗೌಡ ಅವರ ಕೃತಿ ‘ಗ್ರಾಮ ಸುರಾಜ್ಯ’ ಇಂಗ್ಲಿಷ್‌ ಅವತರಣಿಕೆ ಜನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಕರ್ನಾಟಕವು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಆದರೆ, ಇನ್ನೂ ಅನೇಕ ಕೆಲಸಗಳು ಆಗಬೇಕಿವೆ. ಗ್ರಾಮ ಪಂಚಾಯಿತಿಗಳಲ್ಲಿ 82 ಸೇವೆಗಳನ್ನು ನೀಡಲಾಗುತ್ತಿದೆ. ಇನ್ನೂ 36 ಸೇವೆಗಳು ಸದ್ಯದಲ್ಲಿಯೇ ಸೇರ್ಪಡೆಗೊಳ್ಳಲಿವೆ. ಈ ವರ್ಷದ ಅಂತ್ಯಕ್ಕೆ 150 ಸೇವೆಗಳನ್ನು ಒದಗಿಸುವುದು ನಮ್ಮ ಗುರಿ’ ಎಂದು ಹೇಳಿದರು.

ADVERTISEMENT

ಪಂಚಾಯತ್‌ರಾಜ್‌ ಇಲಾಖೆಯು ಇತರ ಇಲಾಖೆಗಳೊಂದಿಗೆ ಸಂವಹನ ಸಾಧಿಸಿ ಕೆಲಸ ಮಾಡಬೇಕಿದೆ. ಅದಕ್ಕಾಗಿ ಈಗಾಗಲೇ ಆರೋಗ್ಯ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತೋಟಗಾರಿಕೆ ಸೇರಿದಂತೆ 11 ಇಲಾಖೆಗಳನ್ನು ಸೇರಿಸಿ ನೀಲನಕ್ಷೆ ಮಾಡಲಾಗಿದೆ ಎಂದರು.

ಗ್ರಾಮ ಪಂಚಾಯಿತಿಗಳು ಸಕ್ರಿಯವಾಗಿ ಕೆಲಸ ಮಾಡಿದರೆ ಬಾಲ್ಯ ವಿವಾಹ ಸಹಿತ ಅನೇಕ ಸಾಮಾಜಿಕ ಪಿಡುಗುಗಳನ್ನು ದೂರ ಮಾಡಿ, ಗ್ರಾಮಗಳ ಅಭಿವೃದ್ಧಿ ಮಾಡಬಹುದು. ನಾಡ ಕಚೇರಿ, ತಾಲ್ಲೂಕು ಕಚೇರಿಗಳಿಗೆ ಜನರ ಹೋಗುವ ಅಗತ್ಯವಿಲ್ಲ, ಗ್ರಾಮದಲ್ಲೇ  ಕೆಲಸಗಳಾಗುವಂತೆ ಮಾಡಲಾಗಿದೆ ಎಂದು ಹೇಳಿದರು.

ರಾಜ್ಯದ 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕೃತಿ ಕುರಿತು ಕೇರಳ ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್‌.ಎಂ. ವಿಜಯಾನಂದ್‌ ಮಾತನಾಡಿದರು. ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಸಿ. ನಾಗಣ್ಣ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ್‌ ಹೆಗಡೆ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ತಜ್ಞ ಸದಸ್ಯ ಡಿ.ಆರ್‌. ಪಾಟೀಲ, ಕರ್ನಾಟಕ ರಾಜ್ಯ ಪಂಚಾಯತ್‌ ಪರಿಷತ್‌ ಅಧ್ಯಕ್ಷ ವಿ.ವೈ. ಘೋರ್ಪಣೆ ಉಪಸ್ಥಿತರಿದ್ದರು.

ಚುನಾವಣೆ ನಡೆಸದಿರುವುದು ಸಂವಿಧಾನ ಬಾಹಿರ’

‘ಪಂಚಾಯತ್‌ರಾಜ್ ಕಾಯ್ದೆ ಪ್ರಕಾರ ಸ್ಥಳೀಯ ಸಂಸ್ಥೆೆಗಳ ಚುನಾವಣೆ ಮುಂದೂಡುವುದು ನಡೆಸದಿರುವುದು ಸಂವಿಧಾನ ಬಾಹಿರ. ಆದರೂ ಕೆಲವರು ಬದ್ಧತೆಯನ್ನು ಮರೆತು ರಾಜಕೀಯಕ್ಕಾಗಿ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ’ ಎಂದು 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ ಆರೋಪಿಸಿದರು. ಚುನಾವಣಾ ಆಯೋಗವು ಈ ಬಗ್ಗೆ ಚಿಂತನೆ ನಡೆಸಿ ನಿಗದಿತ ಕಾಲಕ್ಕೆೆ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು. ಅದಕ್ಕೆ ಅಗತ್ಯವಾದ ತಿದ್ದುಪಡಿಗಳನ್ನು ಮಾಡಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.