ADVERTISEMENT

ಪಿಎಂಎಫ್‌ಎಂಇ: ಸಹಾಯಧನ ಬಳಕೆಗೆ ಕರೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 15:45 IST
Last Updated 9 ಅಕ್ಟೋಬರ್ 2025, 15:45 IST
ನಗರದಲ್ಲಿ ಆಯೋಜಿಸಿದ್ದ ರೈತ ಉತ್ಪಾದಕ ಸಂಸ್ಥೆಗಳ ತಾಂತ್ರಿಕ ಸಮ್ಮೇಳನದಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಗುರುತಿನ ಚೀಟಿ ವಿತರಿಸಿದರು.ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ
ನಗರದಲ್ಲಿ ಆಯೋಜಿಸಿದ್ದ ರೈತ ಉತ್ಪಾದಕ ಸಂಸ್ಥೆಗಳ ತಾಂತ್ರಿಕ ಸಮ್ಮೇಳನದಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಗುರುತಿನ ಚೀಟಿ ವಿತರಿಸಿದರು.ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ (ಪಿಎಂಎಫ್‌ಎಂಇ) ಯೋಜನೆಯಡಿ ರೈತ ಉತ್ಪಾದಕ ಸಂಸ್ಥೆಗಳಿಗೆ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸಲು ನೀಡುವ ಸಹಾಯಧನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ನಗರದ ಪುರಭವನದಲ್ಲಿ ಶುಕ್ರವಾರ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್) ವತಿಯಿಂದ ಗುರುವಾರ ಆಯೋಜಿಸಿದ್ದ ‘ರೈತ ಉತ್ಪಾದಕ ಸಂಸ್ಥೆಗಳ ತಾಂತ್ರಿಕ ಸಮ್ಮೇಳನ’ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಜೊತೆಗೆ ಆಹಾರ ಸಂಸ್ಕರಣಾ ಘಟಕ ಉದ್ದಿಮೆ ಸ್ಥಾಪಿಸಿ, ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಕೃಷಿ ಉತ್ಪಾದಕ ಸಂಸ್ಥೆಗಳು, ಸ್ವ-ಸಹಾಯ ಸಂಘ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ಆಹಾರ ಸಂಸ್ಕರಣಾ ಘಟಕ ಸ್ಥಾಪನೆಗೆ ಗರಿಷ್ಠ ₹3 ಕೋಟಿವರೆಗೆ ಸಹಾಯಧನ ಸಿಗಲಿದೆ. ಈ ಕಾರ್ಯಕ್ರಮದಡಿ ಸಂಸ್ಕರಣೆ, ಮೌಲ್ಯವರ್ಧನೆ, ಪ್ಯಾಕೇಜಿಂಗ್, ಪ್ರಯೋಗಾಲಯ ಸ್ಥಾಪನೆಯಂತಹ ಚಟುವಟಿಕೆಗಳನ್ನು ಕೈಗೊಳ್ಳಬಹುದು ಎಂದರು.

ADVERTISEMENT

ಐದು ವರ್ಷದಲ್ಲಿ ಪಿಎಂಎಫ್‌ಎಂಇ ಯೋಜನೆಯಡಿ 6,500ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸಹಾಯಧನ, ಸಾಲ ಸೌಲಭ್ಯ ಒದಗಿಸಲಾಗಿದೆ. ಈ ಸಾಲಿನಲ್ಲಿ ಐದು ಸಾವಿರ ಕಿರು ಆಹಾರ ಸಂಸ್ಕರಣಾ ಘಟಕ ತೆರೆಯುವ ಗುರಿ ಹೊಂದಿದ್ದು, ಈಗಾಗಲೇ 4,700ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ರೈತ ಉತ್ಪಾದಕ ಸಂಸ್ಥೆಗಳು, ಸ್ವ-ಸಹಾಯ ಸಂಘಗಳಿಗೆ ಆಹಾರ ಸಂಸ್ಕರಣಾ ಘಟಕ ಸ್ಥಾಪನೆ ಮೂಲಸೌಕರ್ಯಕ್ಕಾಗಿ ಶೇಕಡ 35 ರಷ್ಟು ಸಹಾಯಧನ ಸಿಗಲಿದೆ ಎಂದರು.

ಕೆಪೆಕ್ ಅಧ್ಯಕ್ಷ ಹರೀಶ್, ‘ಸಹಾಯಧನಕ್ಕಾಗಿ ಎಫ್‌ಪಿಒಗಳು ವಿಸ್ತೃತ ಯೋಜನಾ ವರದಿ ಸಿದ್ದಪಡಿಸಿ ಕೆಪೆಕ್‌ಗೆ ಸಲ್ಲಿಸಬೇಕು. ವರದಿ ಸಿದ್ದಪಡಿಸಲು ₹50 ಸಾವಿರ ಸೇವಾ ಶುಲ್ಕವನ್ನು ಜಿಲ್ಲಾ ಸಂಪನ್ಮೂಲ ವ್ಯಕ್ತಿಗೆ ಅಥವಾ ನುರಿತ ಸಲಹೆಗಾರರಿಗೆ ನೀಡಲಾಗುತ್ತದೆ. ವರದಿಗಳನ್ನು ತ್ವರಿತವಾಗಿ ಪರಿಶೀಲಿಸಿ, ಬ್ಯಾಂಕ್‌ಗಳಿಗೆ ಸಾಲ ಮತ್ತು ಸಹಾಯಧನಕ್ಕಾಗಿ ಆನ್‌ಲೈನ್‌ನಲ್ಲಿ ಕಳುಹಿಸಲಾಗುವುದು’ ಎಂದರು.

ಇದೇ ವೇಳೆ 134 ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಗುರುತಿನ ಚೀಟಿ ನೀಡಲಾಯಿತು. 

ಕಾರ್ಯಕ್ರಮದಲ್ಲಿ ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಮೊಹಮ್ಮದ್‌ ಪರ್ವೇಜ್ ಬಂಥನಾಳ್, ಜಂಟಿ ನಿರ್ದೇಶಕ ಡಾ.ಶಿವಕುಮಾರ್, ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ಸ್‌ ಅಧ್ಯಕ್ಷ ಸಯೀದ್ ಅಹಮದ್, ಕೆನರಾ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ಎಂ.ಭಾಸ್ಕರ್‌ ಚಕ್ರವರ್ತಿ, ಐಎಟಿ ಅಧ್ಯಕ್ಷ ಎ.ಬಿ.ಪಾಟೀಲ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.