ADVERTISEMENT

ಸಿನಿಮಾ ದೃಶ್ಯಗಳಿದ್ದ ಹಾರ್ಡ್ ಡಿಸ್ಕ್ ಕಳ್ಳತನ: ರಾಮ್ ಜೀ ಗ್ಯಾಂಗ್‌ ಸದಸ್ಯನ ಬಂಧನ

ರಾಮ್‌ ಜೀ ತಂಡದ ಸದಸ್ಯನ ಬಂಧನ, ತಲೆಮರೆಸಿಕೊಂಡ ಆರೋಪಿ ಪುತ್ರ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 0:18 IST
Last Updated 2 ನವೆಂಬರ್ 2025, 0:18 IST
<div class="paragraphs"><p>ಜಯಶೀಲನ್‌</p></div>

ಜಯಶೀಲನ್‌

   

ಬೆಂಗಳೂರು: ಬಿಡುಗಡೆಗೆ ಸಿದ್ಧವಾಗಿದ್ದ ಸಿನಿಮಾ ದೃಶ್ಯಗಳಿದ್ದ ಹಾರ್ಡ್ ಡಿಸ್ಕ್ ಕಳ್ಳತನ ಮಾಡಿದ್ದ ತಮಿಳುನಾಡಿನ ರಾಮ್‌ ಜೀ ತಂಡದ ಸದಸ್ಯ ಜಯಶೀಲನ್‌ ಎಂಬಾತನನ್ನು ವಿಜಯನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಹಾರ್ಡ್ ಡಿಸ್ಕ್, ಒಂದು ಟ್ಯಾಬ್, ಒಂದು ಬ್ಯಾಗ್‌ ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಸಾಥ್ ನೀಡಿದ್ದ ಆತನ ಪುತ್ರ ಪರಾರಿ ಆಗಿದ್ದಾನೆ. ಆತನ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಐ ಆ್ಯಮ್ ಗಾಡ್’ ಹೆಸರಿನ ಸಿನಿಮಾ ನಿರ್ಮಾಪಕ ಹಾಗೂ ನಾಯಕ ಸಹ ಆಗಿರುವ ರವಿಗೌಡ ಅವರು ವಿಜಯನಗರದ ಕಾಫಿ ಡೇ ಬಳಿ ಕಾರು ನಿಲುಗಡೆ ಮಾಡಿ ಕಾಫಿ ಕುಡಿಯಲು ತೆರಳಿದ್ದರು. ವಾಪಸ್​ ಬಂದು ನೋಡಿದಾಗ ಕಾರಿನ ಗ್ಲಾಸ್ ಒಡೆದು ಎಲೆಕ್ಟ್ರಾನಿಕ್ ಉಪಕರಣ​, ಟ್ಯಾಬ್, ಹಾರ್ಡ್​ಡಿಸ್ಕ್​​ ಕಳ್ಳತನ ಮಾಡಿರುವುದು ಗೊತ್ತಾಗಿತ್ತು. ತಕ್ಷಣವೇ ಅವರು ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ ರಾಮ್ ಜೀ ಗ್ಯಾಂಗ್ ಸದಸ್ಯರ ಕೃತ್ಯ ಬಯಲಾಯಿತು. ನಂತರ, ತಮಿಳುನಾಡಿಗೆ ತೆರಳಿದ ಪೊಲೀಸರು ಆರೋಪಿ ಜಯಶೀಲನ್‌ ಅವರನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ ಎಂದು ಮೂಲಗಳು ಹೇಳಿವೆ.

ಆರೋಪಿಗಳು ಜಯನಗರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವುದು ಗೊತ್ತಾಗಿದೆ. ರಾಮ್ ಜೀ ಗ್ಯಾಂಗ್‌ ನಗರದಲ್ಲಿ ಕಳ್ಳತನ ಪ್ರಕರಣದಲ್ಲಿ ಸಕ್ರಿಯ ಆಗಿರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.