ADVERTISEMENT

ಪ್ರತ್ಯೇಕ ಅಪಘಾತ: ಸೆಕ್ಯೂರಿಟಿ ಕಂಪನಿ ಉದ್ಯೋಗಿ ಸೇರಿ ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 13:56 IST
Last Updated 18 ಸೆಪ್ಟೆಂಬರ್ 2025, 13:56 IST
<div class="paragraphs"><p>ಸಾವು</p></div>

ಸಾವು

   

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಜ್ಞಾನಭಾರತಿ ಮತ್ತು ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಸೆಕ್ಯೂರಿಟಿ ಕಂಪನಿ ಉದ್ಯೋಗಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ADVERTISEMENT

ಜ್ಞಾನಭಾರತಿ ಬಳಿಯ ಚಿಕ್ಕಬಸ್ತಿ ಕೆರೆಯ ಪ್ರವೇಶದ್ವಾರದ ಗೇಟ್‍ಗೆ ಬುಧವಾರ ಬೈಕ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ರಂಜಿತ್ (26) ಮೃತಪಟ್ಟಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ರಂಜಿತ್, ನಗರದ ಬ್ಯಾಡರಹಳ್ಳಿಯಲ್ಲಿರುವ ಸೋದರ ಮಾವನ ಮನೆಗೆ ಬಂದಿದ್ದರು. ಬೈಕ್‍ನಲ್ಲಿ ಬ್ಯಾಡರಹಳ್ಳಿಯಿಂದ ಚಿಕ್ಕಬಸ್ತಿ ಕಡೆಗೆ ಹೋಗುತ್ತಿದ್ದಾಗ ಕೆರೆಯ ಪ್ರವೇಶದ್ವಾರದ ಕಬ್ಬಿಣದ ಗೇಟ್‍ಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಂಜಿತ್‌ ಹೆಲ್ಮೆಟ್ ಧರಿಸಿದ್ದರು. ಆದರೂ ಅಪಘಾತದ ತೀವ್ರತೆಗೆ ಹೆಲ್ಮೆಟ್ ನಜ್ಜುಗುಜ್ಜಾಗಿದೆ. ರಂಜಿತ್‍ನ ನಿರ್ಲಕ್ಷ್ಯ ಹಾಗೂ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ. ಜ್ಞಾನಭಾರತಿ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಾಗಲೂರು ಬಳಿಯ ಕೆಐಎಡಿಬಿ ಪ್ರದೇಶದಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಸೆಕ್ಯೂರಿಟಿ ಕಂಪನಿ ಉದ್ಯೋಗಿ ಸೂರ್ಯಕುಮಾರ್ (29) ಮೃತಪಟ್ಟಿದ್ದಾರೆ.

ಎಚ್‍ಬಿಆರ್ ಲೇಔಟ್ ನಿವಾಸಿ ಸೂರ್ಯಕುಮಾರ್, ಕೆಐಎಡಿಬಿ ಪ್ರದೇಶದ ಸೆಕ್ಯೂರಿಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿಕೊಂಡು ಬೈಕ್‍ನಲ್ಲಿ ಎಚ್‍ಬಿಆರ್ ಲೇಔಟ್‍ನ ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಅತಿ ವೇಗವಾಗಿ ಬೈಕ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ವೇಳೆ ರಸ್ತೆ ಉಬ್ಬಿನ ಬಳಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ. ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.