
ಹೃದಯ
(ಐಸ್ಟೋಕ್ ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ರೊಬೊಟಿಕ್ ತಂತ್ರಜ್ಞಾನದ ನೆರವಿನಿಂದ ಅಪೋಲೊ ಆಸ್ಪತ್ರೆ ವೈದ್ಯರು 53 ವರ್ಷದ ಮಹಿಳೆಯ ಹೃದಯದ ಎರಡು ಕವಾಟಗಳ ಬದಲಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಸಾತ್ಯಕಿ ನಂಬಾಲ, ‘ಮಹಿಳೆಯ ಹೃದಯ ಕವಾಟಗಳಲ್ಲಿ ಸೋಂಕು (ಎಂಡೋಕಾರ್ಡಿಟಿಸ್) ಕಾಣಿಸಿಕೊಂಡಿತ್ತು. ಇದರಿಂದ ಕವಾಟಗಳು ಹಾನಿಯಾಗಿದ್ದವು. ಸಂಧಿವಾತ, ಸ್ಥೂಲಕಾಯದಂತಹ ಸಮಸ್ಯೆಯನ್ನು ಮಹಿಳೆ ಎದುರಿಸುತ್ತಿದ್ದಳು. ಪಾರ್ಶ್ವವಾಯುವಿನ ಇತಿಹಾಸವನ್ನೂ ಹೊಂದಿದ್ದರಿಂದ ಸಾಂಪ್ರದಾಯಿಕ ತೆರೆದ ಹೃದಯ ಶಸ್ತ್ರಚಿಕಿತ್ಸೆ ಅಪಾಯಕಾರಿಯಾಗಿತ್ತು. ಆದ್ದರಿಂದ ‘ದಿ ವಿನ್ಸಿ ಎಕ್ಸ್‌ಐ ಸರ್ಜಿಕಲ್’ ವ್ಯವಸ್ಥೆ ಬಳಸಿಕೊಂಡು ಶಸ್ತ್ರಚಿಕಿತ್ಸೆ ನಡೆಸಲಾಯಿತು’ ಎಂದು ಹೇಳಿದರು.
‘ಎದೆಯ ಮಧ್ಯಭಾಗದಲ್ಲಿ ದೊಡ್ಡ ಗಾಯ ಮಾಡದೆ, ಚಿಕ್ಕ ರಂಧ್ರದ ನೆರವಿನಿಂದ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರಚಿಕಿತ್ಸೆ ನಡೆದ ಮೂರನೆ ದಿನವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ರೊಬೊಟಿಕ್ ತಂತ್ರಜ್ಞಾನದ ನೆರವಿನಿಂದ ನಿಖರ ಶಸ್ತ್ರಚಿಕಿತ್ಸೆ ಸಾಧ್ಯವಾಯಿತು’ ಎಂದರು.
ಹೃದ್ರೋಗ ವಿಭಾಗದ ಹಿರಿಯ ಸಲಹೆಗಾರ ಡಾ. ಗಿರೀಶ್ ಬಿ. ನವಸುಂದಿ, ‘ಹೃದಯ ಶಸ್ತ್ರಚಿಕಿತ್ಸೆಯ ಸ್ವರೂಪವನ್ನು ತಂತ್ರಜ್ಞಾನ ಬದಲಾಯಿಸಿರುವುದಕ್ಕೆ ಈ ಪ್ರಕರಣ ಉದಾಹರಣೆ. ಗಾಯದ ಪ್ರಮಾಣ ಕಡಿಮೆಯಾಗುವ ಜತೆಗೆ, ರೋಗಿಯೂ ಬೇಗ ಚೇತರಿಸಿಕೊಳ್ಳುತ್ತಾರೆ. ಆದ್ದರಿಂದ ತಂತ್ರಜ್ಞಾನವನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.