ADVERTISEMENT

ದೇವನಹಳ್ಳಿ: ಭೂ ಸ್ವಾಧೀನ ವಿರೋಧಿಸಿ ಜುಲೈ 4ರಂದು ‘ನಾಡ ಉಳಿಸಿ ಸಮಾವೇಶ’

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 15:24 IST
Last Updated 29 ಜೂನ್ 2025, 15:24 IST
<div class="paragraphs"><p>ದೇವನಹಳ್ಳಿಯ ಭೂ ಸ್ವಾಧೀನ ವಿರೋಧಿಸಿ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ&nbsp;‘ಭೂಮಿ ಸತ್ಯಾಗ್ರಹ’ದಲ್ಲಿ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ, ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ, ಶೇ.ಭೋ ರಾಧಾಕೃಷ್ಣ, ಕೆಜೆಎಸ್ ಮರಿಯಪ್ಪ ಮತ್ತಿತರರು ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ಸೂಚಿಸಿದರು.&nbsp;&nbsp;</p></div>

ದೇವನಹಳ್ಳಿಯ ಭೂ ಸ್ವಾಧೀನ ವಿರೋಧಿಸಿ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ‘ಭೂಮಿ ಸತ್ಯಾಗ್ರಹ’ದಲ್ಲಿ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ, ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ, ಶೇ.ಭೋ ರಾಧಾಕೃಷ್ಣ, ಕೆಜೆಎಸ್ ಮರಿಯಪ್ಪ ಮತ್ತಿತರರು ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ಸೂಚಿಸಿದರು.  

   

ಬೆಂಗಳೂರು: ದೇವನಹಳ್ಳಿ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ಕೈಬಿಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದಕ್ಕಾಗಿ ಜುಲೈ 4ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ‘ನಾಡ ಉಳಿಸಿ ಸಮಾವೇಶ’ ನಡೆಸಲು ಸಂಯುಕ್ತ ಹೋರಾಟ ಕರ್ನಾಟಕ, ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ಮುಖಂಡರು ನಿರ್ಧರಿಸಿದ್ದಾರೆ.

ಭೂ ಸ್ವಾಧೀನ ವಿರೋಧಿಸಿ ‘ಭೂಮಿ ಸತ್ಯಾಗ್ರಹ’ ನಡೆಯುತ್ತಿರುವ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಗಳ ಮುಖಂಡರು, ‘ಸಮಾವೇಶದಲ್ಲಿ ರಾಜ್ಯದ ಎಲ್ಲಾ ತಾಲ್ಲೂಕುಗಳಿಂದಲೂ ರೈತ ಪರ ಹೋರಾಟಗಾರರು, ಸಮಾನ ಮನಸ್ಕರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

ದೇವನಹಳ್ಳಿಯ ಭೂ ಸ್ವಾಧೀನ ವಿರುದ್ಧದ ಹೋರಾಟಕ್ಕೆ ರಾಜ್ಯದಾದ್ಯಂತ ಬೆಂಬಲ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಹೋರಾಟಗಾರರೊಂದಿಗೆ ಸಭೆ ನಡೆಸುವ ಆಶ್ವಾಸನೆ ನೀಡಿದ್ದಾರೆ. ಈ ನಡುವೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಪತ್ರಿಕೆಯಲ್ಲಿ ಲೇಖನ ಬರೆದು ತಮ್ಮ ನಿಲುವು ಸಮರ್ಥಿಸಿಕೊಂಡಿದ್ದಾರೆ. ಇದನ್ನು ಗಮನಿಸಿದರೆ, ಜುಲೈ 4ರ ಸಭೆ ಮತ್ತೊಂದು ಮರೀಚಿಕೆಯಾಗುವ ಸಾಧ್ಯತೆ ಇದೆ’ ಎಂದು ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರು ಶಂಕೆ ವ್ಯಕ್ತಪಡಿಸಿದರು.

‘ಜುಲೈ 4ರಂದು ರೈತ ಮುಖಂಡರೊಂದಿಗೆ ನಡೆಯುವ ಸಭೆಯಲ್ಲಿ ಭೂ ಸ್ವಾಧೀನ ಕೈಬಿಡುವಂತಹ ಸಕಾರಾತ್ಮಕ ತೀರ್ಮಾನವನ್ನು ಮುಖ್ಯಮಂತ್ರಿ ತೆಗೆದುಕೊಂಡರೆ, ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿ ಇಲ್ಲಿಂದ ಹೊರಡುತ್ತೇವೆ. ಒಂದು ವೇಳೆ ಮತ್ತೊಮ್ಮೆ ನ್ಯಾಯ ನಿರಾಕರಣೆಯಾದರೆ ಅದೇ ದಿನ ಇನ್ನಷ್ಟು ಕಠಿಣ ಹೋರಾಟದ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಎಚ್ಚರಿಸಿದರು.

ಹೋರಾಟ ಸಮಿತಿಯ ಪರವಾಗಿ ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ, ಕರ್ನಾಟಕ ಜನಶಕ್ತಿ ಸಂಘಟನೆಯ ನೂರ್ ಶ್ರೀಧರ್, ಸಿಐಟಿಯುನ ಎಸ್. ವರಲಕ್ಷ್ಮಿ, ದಲಿತ ಸಂಘರ್ಷ ಸಮನ್ವಯ ಸಮಿತಿಯ ವಿ.ನಾಗರಾಜು, ಕೆಪಿಆರ್‌ಎಸ್‌ನ ಯು.ಬಸವರಾಜು ಮತ್ತು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಕಾರಳ್ಳಿ ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಶೇಷ ಕಾರ್ಯಸೂಚಿ ಆಗಬೇಕು
‘ಜುಲೈ 2ರಂದು ನಂದಿ ಬೆಟ್ಟದಲ್ಲಿ ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ದೇವನಹಳ್ಳಿ ಭೂ ಸಮಸ್ಯೆ ವಿಶೇಷ ಕಾರ್ಯಸೂಚಿ ಆಗಬೇಕು. ದೇವನಹಳ್ಳಿಯ ಮೂಲಕವೇ ನಂದಿಬೆಟ್ಟಕ್ಕೆ ಹೋಗುವ ಸಚಿವರು ಬರಿಗೈಯಲ್ಲಿ ಬಾರದಿರಲಿ’ ಎಂದು ಮುಖಂಡರು ಮನವಿ ಮಾಡಿದರು. ‘ದೇವನಹಳ್ಳಿ ವಿವಾದದ ನಿಜವಾದ ಚಿತ್ರಣ ಬಹುತೇಕ ಸಚಿವರು ಮತ್ತು ಶಾಸಕರಿಗೆ ಸ್ಪಷ್ಟವಾಗಿಲ್ಲ. ಹಾಗಾಗಿ ಹೋರಾಟಗಾರರು ಆಯಾ ಜಿಲ್ಲೆಗಳ ಸಚಿವರು ಮತ್ತು ಶಾಸಕರನ್ನು ಭೇಟಿಯಾಗಿ ಮಾಹಿತಿ ನೀಡಿ ರೈತಪರ ನಿಲುವು ತೆಗೆದುಕೊಳ್ಳುವಂತೆ ಮನವೊಲಿಸಲು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.