
ಬೆಂಗಳೂರು: ‘ಬೆಂಗಳೂರು 2040ರ ವೇಳೆಗೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕಾದರೆ, ತಂತ್ರಜ್ಞಾನ ಹಾಗೂ ಸುಸ್ಥಿರತೆಯಲ್ಲಿ ಸಮತೋಲನ ಕಾಪಾಡಿಕೊಂಡು ಸಾಗಬೇಕು’ ಎಂದು ಸರ್ಕಾರ ಮುಖ್ಯ ಕಾರ್ಯದರ್ಶಿ ಶಾಲಿನಿ ರಾಜನೀಶ್ ಅಭಿಪ್ರಾಯಪಟ್ಟರು.
‘ಡಿಎಚ್ ಬೆಂಗಳೂರು 2040 ಶೃಂಗ’ದ ಸಮಾರೋಪದಲ್ಲಿ ಮಾತನಾಡಿದ ಅವರು, ‘2040ರತ್ತ ಗಮನ ಹರಿಸಿದಾಗ, ಕೇವಲ ತಂತ್ರಜ್ಞಾನ ಮತ್ತು ನಾವೀನ್ಯತೆಯ ರಾಜಧಾನಿಯಾಗಿರದೆ ಸುಸ್ಥಿರತೆಯ ರಾಜಧಾನಿಯೂ ಆಗಿರಬೇಕು. ವಿಶ್ವಕ್ಕೆ ಪ್ರೇರಣೆಯಾಗುವಂತೆ ಹಸಿರು, ಸೌಂದರ್ಯ ಆಕರ್ಷಕ ನಗರವಾಗಿ ರೂಪಿಗೊಳಿಸಬೇಕಿದೆ’ ಎಂದರು.
‘ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರನ್ನು ಆವಿಷ್ಕಾರ, ಕ್ರಿಯಾಶೀಲತೆ, ಪ್ರತಿಭೆಗಳ ಕೇಂದ್ರವನ್ನಾಗಿ ಪರಿಗಣಿಸಿವೆ. ಕೌಶಲಯುತ ವೃತ್ತಿಪರರು, ಅತ್ಯುನ್ನತ ಮೂಲಸೌಕರ್ಯ, ಪ್ರಗತಿಪರ ನೀತಿಗಳೊಂದಿಗೆ ನಗರ, ಜಾಗತಿಕ ಕಾರ್ಯಾಚರಣೆಗೆ ಪ್ರಮುಖ ತಾಣವಾಗಿ ಪರಿವರ್ತನೆಯಾಗಿದೆ’ ಎಂದು ಹೇಳಿದರು.
ಅಂಕಿ ಅಂಶದ ಪ್ರಕಾರ, ರಾಜ್ಯದ ಒಟ್ಟು ಆಂತರಿಕ ಒಟ್ಟು ಉತ್ಪಾದನೆಯಲ್ಲಿ (ಜಿಎಸ್‌ಡಿಪಿ) ಬೆಂಗಳೂರಿನ ಪಾಲು ಶೇಕಡ 40ರಷ್ಟು ಇದೆ. 2040ರ ವೇಳೆಗೆ ಶೇಕಡ 50ರಷ್ಟು ಹೆಚ್ಚಳ ಆಗುವ ನಿರೀಕ್ಷೆ ಇದೆ. ಬೆಂಗಳೂರು ಕೇವಲ ದೇಶದ ಸಿಲಿಕಾನ್ ವ್ಯಾಲಿ ಮಾತ್ರವಲ್ಲ, ವಿಶ್ವದ ಡೀಪ್‌ಟೆಕ್ ರಾಜಧಾನಿಯಾಗಿಯೂ ಬೆಳೆಯುತ್ತಿದೆ ಎಂದು ಹೇಳಿದರು.
ಭಾರತಕ್ಕೆ ನಿಯೋಜನೆಗೊಂಡಿರುವ ಅಮೆರಿಕ ರಾಯಭಾರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಬೆಂಗಳೂರು ನಗರವನ್ನು ಶ್ಲಾಘಿಸಿದರು. ಇದು ಒಳ್ಳೆಯ ಬೆಳವಣಿಗೆ ಎಂದು ಶಾಲಿನಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.