ADVERTISEMENT

ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಯತ್ನ: ಎಂ.ಕೃಷ್ಣಪ್ಪ

ಸಾತನೂರು ಗ್ರಾ.ಪಂ: ಮೊದಲ ಸುತ್ತಿನ ಗ್ರಾಮಸಭೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 16:29 IST
Last Updated 24 ಜೂನ್ 2025, 16:29 IST
ಕಾರ್ಯಕ್ರಮದಲ್ಲಿ ಪದವಿ ವಿದ್ಯಾರ್ಥಿನಿಯೊಬ್ಬರಿಗೆ ಲ್ಯಾಪ್‌ಟಾಪ್‌ ವಿತರಿಸಲಾಯಿತು. ಗ್ರಾಮಪಂಚಾಯಿತಿ ಅಧ್ಯಕ್ಷ ಎಂ.ಕೃಷ್ಣಪ್ಪ, ಸದಸ್ಯರಾದ ಶಿವಣ್ಣ, ಸುಜಾತ.ಎಸ್‌.ಎಲ್‌, ಅಶ್ವಿನಿ.ಕೆ. ಎನ್‌, ಮಾನಸ.ಬಿ.ಆರ್‌, ಮಾಲ.ಎಂ ಇದ್ದರು.
ಕಾರ್ಯಕ್ರಮದಲ್ಲಿ ಪದವಿ ವಿದ್ಯಾರ್ಥಿನಿಯೊಬ್ಬರಿಗೆ ಲ್ಯಾಪ್‌ಟಾಪ್‌ ವಿತರಿಸಲಾಯಿತು. ಗ್ರಾಮಪಂಚಾಯಿತಿ ಅಧ್ಯಕ್ಷ ಎಂ.ಕೃಷ್ಣಪ್ಪ, ಸದಸ್ಯರಾದ ಶಿವಣ್ಣ, ಸುಜಾತ.ಎಸ್‌.ಎಲ್‌, ಅಶ್ವಿನಿ.ಕೆ. ಎನ್‌, ಮಾನಸ.ಬಿ.ಆರ್‌, ಮಾಲ.ಎಂ ಇದ್ದರು.   

ಯಲಹಂಕ: ಬ್ಯಾಟರಾಯನಪುರ ಕ್ಷೇತ್ರದ ಸಾತನೂರು ಗ್ರಾಮ ಪಂಚಾಯಿತಿಯಿಂದ ಆಯೋಜಿಸಿದ್ದ 2025-26ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆಯನ್ನು ಪಂಚಾಯಿತಿ ಅಧ್ಯಕ್ಷ ಎಂ.ಕೃಷ್ಣಪ್ಪ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಕಂದಾಯ ಬಡಾವಣೆಗಳಲ್ಲಿ ಎದುರಾಗಿರುವ ನೀರಿನ ಸಮಸ್ಯೆ ಬಗೆಹರಿಸುವಂತೆ ನಿವಾಸಿಗಳು ಮನವಿ ಮಾಡಿದ್ದಾರೆ. ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಮುಖೇನ ಮನವಿ ಮಾಡಿ, ನೀರು ಪೂರೈಕೆ ಮಾಡಲು ಪ್ರಯತ್ನಿಸಲಾಗುವುದು. ಗ್ರಾಮಗಳಲ್ಲಿ ಕಸ ಸಂಗ್ರಹಣೆ ಶುಲ್ಕ, ದಂಡ ವಸೂಲಿ ಹಾಗೂ ವಿಂಗಡಿಸಿರುವ ಘನತ್ಯಾಜ್ಯವನ್ನು ನಿರ್ವಹಣೆ ಮಾಡಿ, ಮಾರಾಟ ಮಾಡಿರುವುದರಿಂದ ಪಂಚಾಯಿತಿಗೆ ವಾರ್ಷಿಕ ₹7.82 ಲಕ್ಷ ಆದಾಯ ಬಂದಿದೆ ಎಂದು ತಿಳಿಸಿದರು.

ಪಂಚಾಯಿತಿ ಕಚೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಮೀಸಲಿರಿಸಲಾಗಿದೆ. ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿಯಿದೆ. ಇದು ಇತ್ಯರ್ಥವಾದ ಕೂಡಲೇ ಸ್ವಂತ ಕಟ್ಟಡ ನಿರ್ಮಿಸಲಾಗುವುದು. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಈಗಾಗಲೆ ವಾರ್ಡ್‌ ಮಟ್ಟದ ಸಭೆಗಳನ್ನು ನಡೆಸಲಾಗಿದ್ದು, ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಗಣಿಸಿ, ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಹಣಕಾಸಿನ ಲಭ್ಯತೆಗೆ ಅನುಗುಣವಾಗಿ ಅನುಷ್ಠಾನಗೊಳಿಸಲು ಮುಂದಿನ ಸಾಮಾನ್ಯಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ 35 ವಿದ್ಯಾರ್ಥಿಗಳಿಗೆ ತಲಾ ₹5 ಸಾವಿರ ಮೊತ್ತದ ಪ್ರೋತ್ಸಾಹಧನದ ಚೆಕ್‌ ಹಾಗೂ ಪರಿಶಿಷ್ಟ ಜಾತಿ-ಪಂಗಡದ ಮೂವರು ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲಾಯಿತು. ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಸದಸ್ಯರಿಗೆ ಪ್ರೋತ್ಸಾಹಧನದ ಚೆಕ್‌ ಹಾಗೂ ಸಾತನೂರು ಗ್ರಾಮದ ನಿವಾಸಿಗಳಿಗೆ ಒಣ-ಹಸಿ ಕಸ ಸಂಗ್ರಹಿಸಲು ಕಸದ ಬುಟ್ಟಿಗಳನ್ನು ನೀಡಲಾಯಿತು.

ಪಂಚಾಯಿತಿ ಉಪಾಧ್ಯಕ್ಷೆ ಜಹೇರ ತಸ್ನೀಮ್‌, ಸದಸ್ಯರಾದ ಮುನಿತಿಮ್ಮರಾಯಪ್ಪ, ಮಾನಸ ಬಿ.ಆರ್‌., ಸುಶ್ಮಿತಾ ಎನ್‌., ಸುಜಾತ.ಎಸ್‌.ಎಲ್‌, ಶಿವಣ್ಣ, ಅಶ್ವಿನಿ.ಕೆ.ಎನ್‌., ಮಾಲ ಎಂ., ನಾರಾಯಣಸ್ವಾಮಿ.ಎನ್‌, ಪಿಡಿಒ ಮಮತಾ ಬಿ. ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.