ADVERTISEMENT

ಬೆಂಗಳೂರು: ಜೂನ್ 9 ರಿಂದ ಗ್ರಾಮ ಸಹಾಯಕರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 29 ಮೇ 2025, 16:05 IST
Last Updated 29 ಮೇ 2025, 16:05 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ಗ್ರಾಮ ಸಹಾಯಕರಿಗೆ ಜೀವನ ಭದ್ರತೆ ಒದಗಿಸುವಂತೆ ಆಗ್ರಹಿಸಿ ಜೂನ್‌ 9 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘ ನಿರ್ಧರಿಸಿದೆ.

ADVERTISEMENT

ಕರ್ನಾಟಕ ಗ್ರಾಮ ಕಚೇರಿಗಳ ರದ್ದತಿ ಕಾಯ್ದೆ 1961ರಂತೆ ವಂಶಪಾರಂಪರ್ಯದ ಎಲ್ಲ ಗ್ರಾಮೀಣ ಹಂತದ ಹುದ್ದೆಗಳು ರದ್ದಾಗಿದ್ದವು. ಕೆಳ ಹಂತದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವರನ್ನು ಉಳಿಸಿಕೊಳ್ಳಲು ಗ್ರಾಮ ಲೆಕ್ಕಿಗರಿಗೆ ಸಹಾಯ ಮಾಡುವುದಕ್ಕಾಗಿ 10,450 ಗ್ರಾಮ ಸಹಾಯಕ ಹುದ್ದೆಗಳನ್ನು ಸೃಜಿಸಲಾಗಿತ್ತು. ಈ ಗ್ರಾಮ ಸಹಾಯಕರಿಗೆ ಪ್ರಸ್ತುತ ತಿಂಗಳಿಗೆ ₹ 15 ಸಾವಿರ ವೇತನ ಮಾತ್ರ ಪಾವತಿಯಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎಚ್‌.ಎನ್‌. ದೇವರಾಜು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಎರಡು ವರ್ಷದ ಹಿಂದೆ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಆಗ ಸ್ಥಳಕ್ಕೆ ಬಂದಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಬೇಡಿಕೆ ಈಡೇರಿಸಿಲ್ಲ’ ಎಂದು ಅವರು ಆರೋಪಿಸಿದರು.

‘ಡಿ’ ಗುಂಪಿನ ನೌಕರರಿಗೆ ನೀಡುವ ವೇತನದಷ್ಟೇ ಗ್ರಾಮ ಸಹಾಯಕರಿಗೂ ವೇತನ ನೀಡಬೇಕು. ಆಗ ಕನಿಷ್ಠ ₹ 27 ಸಾವಿರ ವೇತನ ಸಿಗಲಿದೆ. ಪೌರಕಾರ್ಮಿಕರು, ಚಾಲಕರ ಸೇವೆಯನ್ನು ಕಾಯಂಗೊಳಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಗ್ರಾಮ ಸಹಾಯಕರ ಸೇವೆಯನ್ನು ಕಾಯಂ ಮಾಡಬೇಕು. ಮರಣ ಹೊಂದಿದಾಗ ಇಲ್ಲವೇ ನಿವೃತ್ತಿ ಹೊಂದಿದಾಗ ₹ 10 ಲಕ್ಷ ಇಡುಗಂಟು ನೀಡಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.