
ಬೆಂಗಳೂರು: ಪುತ್ರಿಯ ಮದುವೆಗೆಂದು ಮಾಡಿದ್ದ ಸಾಲ ತೀರಿಸಲು ಕೆಲಸಕ್ಕಿದ್ದ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ಮಹಿಳೆಯನ್ನು ಜೆ.ಪಿ. ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಶಾಂತಿ ಅಲಿಯಾಸ್ ಶಾಂತಮ್ಮ ಬಂಧಿತ ಆರೋಪಿ.
ಜೆ.ಪಿ. ನಗರದ ಎರಡನೇ ಹಂತದ ನಿವಾಸಿ, ಶಿಕ್ಷಕಿ ಆಯಿಷಾ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಯಿಂದ ₹14.30 ಲಕ್ಷ ಮೌಲ್ಯದ 143 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
‘ಆಯಿಷಾ ಅವರು ಜನವರಿಯಲ್ಲಿ ಸಂಬಂಧಿಕರ ಮದುವೆಗೆಂದು ಚಿನ್ನಾಭರಣ ಧರಿಸಿ ಹೋಗಿದ್ದರು. ವಾಪಸ್ ಬಂದು, ನಾಲ್ಕು ಬಂಗಾರದ ಬಳೆಗಳು ಹಾಗೂ ಒಂದು ಬಂಗಾರದ ಸರವನ್ನು ಬೀರುವಿನಲ್ಲಿ ಇಟ್ಟಿದ್ದರು. ಮೇ 17ರಂದು ಮತ್ತೊಂದು ಮದುವೆ ಸಮಾರಂಭ ಇತ್ತು. ಆ ಮದುವೆ ಸಮಾರಂಭಕ್ಕಾಗಿ ಚಿನ್ನಾಭರಣ ಧರಿಸಿಕೊಳ್ಳಲು ಬೀರು ತೆರೆದಿದ್ದರು. ಆಗ ಚಿನ್ನಾಭರಣ ಕಳ್ಳತನ ಆಗಿರುವುದು ಗೊತ್ತಾಗಿತ್ತು’ ಎಂದು ಪೊಲೀಸರು ಹೇಳಿದರು.
‘ಮನೆಯಲ್ಲಿ ಕೆಲಸಕ್ಕೆ ನೇಮಿಸಿಕೊಂಡಿದ್ದ ಶಾಂತಿ ಮೇಲೆ ಅನುಮಾನ ವ್ಯಕ್ತಪಡಿಸಿ ಆಯಿಷಾ ದೂರು ನೀಡಿದ್ದರು. ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದು ಗೊತ್ತಾಗಿತ್ತು’ ಎಂದು ಪೊಲೀಸರು ಹೇಳಿದರು.
‘ಪುತ್ರಿಯ ಮದುವೆಗೆಂದು ಆರೋಪಿ ₹5 ಲಕ್ಷ ಸಾಲ ಮಾಡಿದ್ದಳು. ಅದನ್ನು ತೀರಿಸಲು ಕೆಲಸಕ್ಕಿದ್ದ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದಳು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.
ಕಳ್ಳತನ ಮಾಡಿದ್ದ ಚಿನ್ನವನ್ನು ಕೋಣನಕುಂಟೆ ಹಾಗೂ ಮೈಕೊ ಲೇಔಟ್‌ನ ಚಿನ್ನಾಭರಣ ಅಂಗಡಿಗೆ ಆರೋಪಿ ಮಾರಾಟ ಮಾಡಿದ್ದಳು. ಆ ಚಿನ್ನವನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.