ADVERTISEMENT

ಉಪಕಸುಬಿನಿಂದ ಆರ್ಥಿಕ ವೃದ್ಧಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 11:05 IST
Last Updated 8 ಜನವರಿ 2011, 11:05 IST

ಬೀದರ್: ಕೃಷಿಯ ಜೊತೆಗೆ ಪಶುಪಾಲನೆ, ಹೈನುಗಾರಿಕೆಯಂಥ ಉಪಕಸುಬುಗಳನ್ನು ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ರೈತರಿಗೆ ಸಲಹೆ ಮಾಡಿದರು. ಪಶು ವೈದ್ಯಕೀಯ ಶಿಕ್ಷಣದ 250 ನೇ ವರ್ಷಾಚರಣೆ ಅಂಗವಾಗಿ ಬೀದರ್ ತಾಲ್ಲೂಕಿನ ಕಮಠಾಣ ಸಮೀಪ ಇರುವ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಪಶುಪಾಲನೆ ಹಾಗೂ ಹೈನೋದ್ಯಮ ಕುರಿತ  ಗುಲ್ಬರ್ಗ ವಿಭಾಗ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಪಶುಪಾಲನೆ ಮತ್ತು ಹೈನೋದ್ಯಮ ಕೃಷಿಕರ ಅವಿಭಾಜ್ಯ ಅಂಗವಾಗಿದೆ ಎಂದರು. ಗ್ರಾಮೀಣ ಜನರಲ್ಲಿ ಸರ್ಕಾರದ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸುವ ಕೆಲಸ ನಿರಂತರ ನಡೆಯಬೇಕು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವದ್ಯಾಲಯದ ಕುಲಪತಿ ಡಾ. ಸುರೇಶ ಹೊನ್ನಪ್ಪಗೋಳ್ ಮಾತನಾಡಿ, ಪಶು ವೈದ್ಯಕೀಯ ಶಿಕ್ಷಣದ 250 ವರ್ಷಾಚರಣೆ ನಿಮಿತ್ತ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರೈತರು ಇವುಗಳ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಜಿ. ಚಂದ್ರಕಾಂತ, ವಿಶ್ವದ್ಯಾಲಯದ ಕುಲಸಚಿವ ಎಸ್. ನಾಗರಾಜ ಉಪಸ್ಥಿತರಿದ್ದರು. ವಿಸ್ತರಣಾ ನಿರ್ದೇಶಕ ಡಾ. ಮಲ್ಲಿಕಾರ್ಜುನಪ್ಪ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಡಾ. ಕೆ.ಸಿ ವೀರಣ್ಣ ನಿರೂಪಿಸಿದರು. ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಶಫಿ ಸಾದುದ್ದೀನ್ ವಂದಿಸಿದರು. ವಿಚಾರ ಸಂಕಿರಣದಲ್ಲಿ ಬೀದರ್ ಮತ್ತು ಗುಲ್ಬರ್ಗ ಜಿಲ್ಲೆಯ 150 ಜನ ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.