
ಹುಲಸೂರ: ಜೀವನದ ಹಂಗು ತೊರೆದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಲ್ನಡಿಗೆ ಮುಖಾಂತರ ಬಸವತತ್ವ ಪ್ರಚಾರ ಮಾಡಿ ಭೋಳಾ ಸ್ವಭಾವದ ಸ್ವಾಮೀಜಿಗಳೆಂದು ಹೆಸರುವಾಸಿ ಆಗಿದ್ದವರು ಹುಲಸೂರಿನ ಶಿವಾನಂದ ಸ್ವಾಮೀಜಿ’ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು..
ಪಟ್ಟಣದ ಅಲ್ಲಮ ಪ್ರಭುಗಳ ಶೂನ್ಯಪೀಠ ಅನುಭವ ಮಂಟಪದಲ್ಲಿ ಜರುಗುತ್ತಿರುವ ಶರಣ ಸಂಸ್ಕ್ರತಿ ಉತ್ಸವ ಹಾಗು ವಚನ ರಥೋತ್ಸವ ಉದ್ಗಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಾಡಿನ ಯುವಕರ ಮನೆ ಮನೆಗಳಿಗೆ ಹೋಗಿ ಅವರಲ್ಲಿರುವ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡು ವ್ಯಸನಮುಕ್ತರನ್ನಾಗಿ ಮಾಡಿದ ಶ್ರೇಯಸ್ಸು ಹುಲಸೂರ ಶ್ರೀಗೆ ಸಲ್ಲುತ್ತದೆ’ ಎಂದರು.
‘ಅನುಭವ ಮಂಟಪದಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಶರಣ ಕಮ್ಮಟ, ಬಸವಕಲ್ಯಾಣ ಅಭಿವ್ರದ್ಧಿ ಪ್ರಾಧಿಕಾರ, ನೂತನ ಅನುಭವ ಮಂಟಪ, ಕಲ್ಯಾಣ ನಾಡಿನಲ್ಲಿರುವ ಹಲವು ಶರಣರ ಸ್ಮಾರಕಗಳ ರಚನೆ ಮಾಡಿ, ಅಭಿವೃದ್ಧಿ ಮಾಡಿದ ಕೊಡುಗೆ ಅವರದಾಗಿದೆ. ಹಾಗೆ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಹಾಗೂ ಹಲವು ಸಾಹಿತ್ಯ ಸಮ್ಮೆಳನಗಳು ಮಾಡಿದ ಕೀರ್ತಿ ಅವರದು’ ಎಂದರು.
ಸಮ್ಮುಖ ವಹಿಸಿದ್ದ ಬನಹಟ್ಟಿಯ ಮಹಾಂತ ಸ್ವಾಮೀಜಿ, ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ ಹಾಗೂ ಇತರರು ಮಾತನಾಡಿದರು.
ಶ್ರೀ ಗುರು ಬಸವೇಶ್ವರ ಪ್ರೌಢಶಾಲೆಯ ಮಕ್ಕಳಿಂದ ಹಾಗು ಕಲಾತಂಡಗಳಿಂದ ವಚನ ನೃತ್ಯ ಜರುಗಿತು .ದೀಪಕ ಠಮಕೆ ಸ್ವಾಗತಿಸಿ ನಿರೂಪಿಸಿದರು.ಸಂಗೀತ ಶಿವಾನಂದ ನಂದೇವಾಲಾ, ತಬಲಾ ಮಹಾಂತೇಶ ಕಾಳಗಿ ನಡೆಸಿಕೊಟ್ಟರು.
ವೇದಿಕೆ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.ಸಾಯಗಾಂವನ ಶಿವಾನಂದ ಸ್ವಾಮೀಜಿ, ಶಾಸಕ ಶರಣು ಸಲಗರ, ಶಶಿಕಾಂತ ದುರ್ಗೆ, ಸುಧೀರ ಕಾಡಾದಿ, ಶಿವರಾಜ ನರಶೆಟ್ಟಿ, ಮನೋಜ ಮಾಶೇಟ್ಟಿ, ಬಸವಕಲ್ಯಾಣ ಸಹಾಯಕ ಆಯುಕ್ತ ಪ್ರಕಾಶ ಕುದರಿ, ತಹಶೀಲ್ದಾರ್ ಶಿವಾನಂದ ಮೇತ್ರೆ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಜಮ್ಮು, ಅಲ್ಲಮಪ್ರಭುಗಳ ಶೂನ್ಯಪೀಠ ಅನುಭವ ಮಂಟಪದ ಅಧ್ಯಕ್ಷ ಬಸವರಾಜ ಮುಕ್ತಾ, ಅಕ್ಕನ ಬಳಗದ ಅಧ್ಯಕ್ಷೆ ಶಶಿಕಲಾ ಓಂಕಾರ ಪಟ್ನೆ ಹಾಗೂ ಮಠದ ಭಕ್ತರು,ಶರಣ ಶರಣೆಯರು ಭಾಗವಹಿಸಿದ್ದರು.
ಸಾಧಕರಿಗೆ ಪ್ರಶಸ್ತಿ ಪ್ರದಾನ ನಾಳೆ
‘ಹುಲಸೂರ ಪಟ್ಟಣದ ಅಲ್ಲಮ ಪ್ರಭುಗಳ ಶೂನ್ಯಪೀಠ ಅನುಭವ ಮಂಟಪದಲ್ಲಿ ಜರುಗುತ್ತಿರುವ ಶರಣ ಸಂಸ್ಕ್ರತಿ ಉತ್ಸವ ಹಾಗು ವಚನ ರಥೋತ್ಸವ ಎರಡನೇ ದಿನವಾದ ಮಂಗಳವಾರ ಹುಲಸೂರ ಶ್ರೀಗಳ 74ನೇ ಹುಟ್ಟು ಹಬ್ಬದ ನಿಮಿತ್ಯ 74 ಸಾಧಕರಿಗೆ ಗುರುತಿಸಿ ‘ಕಾಯಕ ಸೇವಾ ರತ್ನ ಪ್ರಶಸ್ತಿ’ ನೀಡಲಾಗುವುದು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರಿಗೆ ಹುಲಸೂರ ಶ್ರೀ ಮಠದಿಂದ ಕೊಡುವ ವೈರಾಗ್ಯನಿಧಿ ಅಕ್ಕಮಹಾದೇವಿ ಪ್ರಶಸ್ತಿ ನೀಡಲಾಗುವುದು. ಬರೀ ಹೆಣ್ಣುಮಕ್ಕಳೇ ಎಳೆಯುವ ರಥೋತ್ಸವ ಹುಲಸೂರಿನಲ್ಲಿ ನಡೆಯಲಿದೆ’ ಎಂದು ಹುಲಸೂರ ಶಿವಾನಂದ ಸ್ವಾಮೀಜಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.